ಬಿಹಾರ: ಗಯಾ ವಿಮಾನ ನಿಲ್ದಾಣದಲ್ಲಿ ನಾಲ್ವರು ವಿದೇಶಿಯರಲ್ಲಿ ಕೋವಿಡ್ ಸೋಂಕು ಪತ್ತೆ

Update: 2022-12-26 15:13 GMT

ಪಾಟ್ನಾ,ಡಿ.26: ಬಿಹಾರದ ಗಯಾ ವಿಮಾನ ನಿಲ್ದಾಣ(Gaya Airport)ದಲ್ಲಿ ಆರ್ಟಿ-ಪಿಸಿಆರ್(RT-PCR) ಪರೀಕ್ಷೆಗಳ ಬಳಿಕ ನಾಲ್ವರು ವಿದೇಶಿಯರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು,ಅವರನ್ನು ಹೋಟೆಲ್ ಹೊಂದರಲ್ಲಿ ಐಸೊಲೇಷನ್ ನಲ್ಲಿ ಇರಿಸಲಾಗಿದೆ.

ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ನಿಂದ ತಲಾ ಓರ್ವರು ಮತ್ತು ಇಂಗ್ಲಂಡ್ ನಿಂದ  ಇಬ್ಬರು ಸೇರಿದಂತೆ ನಾಲ್ವರು ವಿದೇಶಿಯರು ಬೋಧಗಯಾಕ್ಕೆ ಆಗಮಿಸಿದ್ದರು. ಪ್ರಮುಖ ಬೌದ್ಧ ತೀರ್ಥಕ್ಷೇತ್ರವಾಗಿರುವ ಬೋಧಗಯಾದಲ್ಲಿ ಬೋಧ ಮಹೋತ್ಸವವನ್ನು ಆಯೋಜಿಸಲಾಗಿದ್ದು,ವಿಶ್ವಾದ್ಯಂತದಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಪ್ರಕರಣಗಳು ಗಂಭೀರವಾಗಿಲ್ಲ,ಆದಾಗ್ಯೂ ಕಾಯಿಲೆಯ ಹರಡುವಿಕೆಯನ್ನು ತಪ್ಪಿಸಲು ಅಧಿಕಾರಿಗಳು ಎಲ್ಲ ಮುನ್ನೆಚ್ಚರಿಕೆಗಳನ್ನು ವಹಿಸುತ್ತಿದ್ದಾರೆ ಎಂದು ಗಯಾ ಜಿಲ್ಲೆಯ ಉಸ್ತುವಾರಿ ವೈದ್ಯಾಧಿಕಾರಿ ಡಾ.ರಂಜನ್ ಸಿಂಹ(Dr. Ranjan Singh) ತಿಳಿಸಿದರು. ಬೋಧ ಮಹೋತ್ಸವದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾರಾಂತ್ಯದಲ್ಲಿ 33 ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸಲಾಗಿದ್ದು,ನಾಲ್ವರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದರು.

ಶುಕ್ರವಾರ ಚೀನಾದಿಂದ ಆಗ್ರಾಕ್ಕೆ ಮರಳಿದ್ದ 40ರ ಹರೆಯದ ವ್ಯಕ್ತಿಯಲ್ಲಿ ರವಿವಾರ ಸೋಂಕು ಪತ್ತೆಯಾಗಿತ್ತು. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 196 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು,ಸಕ್ರಿಯ ಪ್ರಕರಣಗಳ ಸಂಖ್ಯೆ 3,418ಕ್ಕೇರಿದೆ. ಈ ಅವಧಿಯಲ್ಲಿ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಇದರೊಂದಿಗೆ ದೇಶದಲ್ಲಿಯ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4,46,77,302ಕ್ಕೆ ಮತ್ತು ಸಾವುಗಳ ಸಂಖ್ಯೆ 5,30,695ಕ್ಕೆ ಏರಿವೆ. 

Similar News