×
Ad

ಕುಂದಾಪುರ | ಬೈಕ್ ಗೆ ಕ್ರೇನ್ ಢಿಕ್ಕಿ: ಸಹಸವಾರ ಸ್ಥಳದಲ್ಲೇ ಮೃತ್ಯು

ಮನೆಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ

Update: 2022-12-27 14:24 IST

ಕುಂದಾಪುರ: ಚಲಿಸುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಕ್ರೇನ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಹಿಂಬದಿ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಪಾನಕದಕಟ್ಟೆ ಎಂಬಲ್ಲಿ ಡಿ.26ರಂದು ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.

ತಾಲೂಕಿನ ಹುಣ್ಸೆಮಕ್ಕಿ ಸಮೀಪದ ಹೊಂಬಾಡಿ ನಿವಾಸಿ ಪ್ರಶಾಂತ್  ಮೊಗವೀರ (31) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಪ್ರಶಾಂತ್ ಅವರು ದಿನೇಶ್ ಪೂಜಾರಿ ಎಂಬವರ ಬೈಕ್  ಹಿಂಬದಿಯಲ್ಲಿ ಕುಳಿತು ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ತೆರಳುತ್ತಿದ್ದಾಗ ನೋಂದಣಿ ಸಂಖ್ಯೆ ಇಲ್ಲದ ಹೊಸ ಕ್ರೇನ್ ಬೈಕ್ ಗೆ ಹಿಂದಿನಿಂದ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ಪರಿಣಾಮ ಬೈಕ್ ಸಮೇತ ಇಬ್ಬರು ಸವಾರರು ರಸ್ತೆಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡ ಪ್ರಶಾಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ದಿನೇಶ್ ಪೂಜಾರಿ ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಯಾದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ಬಳಿಕ ಕ್ರೇನ್ ಅನ್ನು ಸ್ಥಳದಲ್ಲೆ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡತನದ ಕುಟುಂಬ: ಪ್ರಶಾಂತ್ ಮೊಗವೀರ ಚಾಲಕ ವೃತ್ತಿ ಮಾಡಿಕೊಂಡಿದ್ದು ಅವಿವಾಹಿತರಾಗಿದ್ದರು. ತಂದೆ, ತಾಯಿ ಹಾಗೂ ಇಬ್ಬರು ಹಿರಿಯ ಸಹೋದರಿಯರಿದ್ದು ಬಡತನದ ಕುಟುಂಬ ಇವರನ್ನೇ ಅವಲಂಭಿಸಿತ್ತು. ಮಗನ ಸಾವಿನ ಸುದ್ದಿ ತಿಳಿದು ಇಡೀ ಕುಟುಂಬ ದಿಕ್ಕು ತೋಚದಂತಾಗಿದೆ.

Similar News