×
Ad

ದ್ವಿಶತಕದ ಸಂಭ್ರಮಾಚರಣೆ ಬೆನ್ನಲ್ಲೇ ಕಾಲು ನೋವಿನೊಂದಿಗೆ ಮೈದಾನದಿಂದ ಹೊರನಡೆದ ಡೇವಿಡ್‌ ವಾರ್ನರ್‌

Update: 2022-12-27 15:40 IST

ಮೆಲ್ಬೋರ್ನ್: ಜನವರಿ 2020 ರಿಂದೀಚೆಗೆ ಒಂದು ಶತಕವನ್ನೂ ಸಿಡಿಸಲು ಸಾಧ್ಯವಾಗದೆ ನಿರಾಶರಾಗಿದ್ದ ಆಸ್ಟ್ರೇಲಿಯಾದ ಬ್ಯಾಟರ್ ಡೇವಿಡ್‌ ವಾರ್ನರ್‌ ಮಂಗಳವಾರ ಮೆಲ್ಬೋರ್ನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದಾರೆ. ಆದರೆ ಈ ದ್ವಿಶತಕ ಸಾಧಿಸಿದ ಸಂತಸದ ಭರದಲ್ಲಿ  ಕ್ರೀಡಾಂಗಣದಲ್ಲಿ ಕುಣಿದು ಕುಪ್ಪಳಿಸಿದ ವಾರ್ನರ್‌ ಕೊನೆಗೆ ಕಾಲಿನ ತೀವ್ರ ಸೆಳೆತಕ್ಕೊಳಗಾಗಿ ಅಂಗಣದಿಂದ ಇತರರ ಸಹಾಯದೊಂದಿಗೆ ಹೊರನಡೆಯಬೇಕಾದ ಘಟನೆ ನಡೆದಿದೆ.

ತಮ್ಮ ದ್ವಿಶತಕ ಸಿಡಿಸುವ ಸಂದರ್ಭ ಹಲವು ಬಾರಿ ಕಾಲಿನ ಸ್ನಾಯು ಸೆಳೆತಕ್ಕೊಳಗಾಗಿದ್ದ ವಾರ್ನರ್‌ ಅಂತಿಮವಾಗಿ ದ್ವಿಶತಕ ಸಿಡಿಸಿದಾಗ ಸಂತಸ ತಾಳಲಾರದೆ ಹಾರಿದ್ದರು. ಇದು ಅವರ ಸ್ನಾಯು ಸೆಳೆತ ಸಮಸ್ಯೆ ಬಿಗಡಾಯಿಸಿ ಅವರು ಮೈದಾನದಿಂದ ಹೊರನಡೆಯುವಂತಾಯಿತು.

ದಿನದ ಆಟ ಅಂತ್ಯವಾಗಿರುವುದರಿಂದ ನಾಳೆ ಮತ್ತೆ ಮೂರನೇ ದಿನ ಅವರಿಗೆ ಆಡುವ ಅವಕಾಶ ದೊರೆಯಲಿದೆ. ಅವರು ಇಂದು ತಮ್ಮ ಸಮಸ್ಯೆಯಿಂದ ಚೇತರಿಸಿಕೊಂಡು ನಾಳೆ ಅಗತ್ಯವಿದ್ದರೆ ಬ್ಯಾಟಿಂಗ್‌ಗೆ ಲಭ್ಯವಾಗುವರೆಂಬ ಆತ್ಮವಿಶ್ವಾಸವನ್ನು ಆಸ್ಟ್ರೇಲಿಯಾ ತಂಡ ಹೊಂದಿದೆ.

ಮೂವತ್ತಾರು ವರ್ಷದ ವಾರ್ನರ್‌  ಈಗ 8000 ರನ್‌ಗಳ ಗಡಿ ದಾಟಿದ್ದು ಈ ಮೈಲಿಗಲ್ಲನ್ನು ಸಾಧಿಸಿದ ಎಂಟನೇ ಆಸ್ಟ್ರೇಲಿಯನ್‌ ಕ್ರಿಕೆಟಿಗರಾಗಿದ್ದಾರೆ.

Similar News