ಒಡಿಶಾ ಹೋಟೆಲಿನ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ರಶ್ಯ ನಾಗರಿಕ ಪವೆಲ್ ಅಂಟೊವ್ ಯಾರು?

Update: 2022-12-28 03:41 GMT

ಹೊಸದಿಲ್ಲಿ: ಒಡಿಶಾದ  ರಾಯಗಢ ಪ್ರಾಂತ್ಯದ ಹೋಟೆಲ್ ಒಂದರ ಮೂರನೇ ಮಹಡಿಯ ಕಿಟಿಕಿಯಿಂದ ನಿಗೂಢವಾಗಿ ಕೆಳಕ್ಕೆ ಬಿದ್ದು ಇತ್ತೀಚೆಗೆ ರಶ್ಯದ ನಾಗರಿಕ ಪವೆಲ್ ಅಂಟೋವ್ (65) ಎಂಬವರು ಮೃತಪಟ್ಟಿರುವ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವೊದಗಿಸಿದೆ. 

ತಮ್ಮ 66ನೇ ಹುಟ್ಟುಹಬ್ಬ ಆಚರಣೆಗೆಂದು ಪವೆಲ್ ಅಲ್ಲಿಗೆ ಆಗಮಿಸಿದ್ದರು. ಡಿಸೆಂಬರ್ 22 ರಂದು ಅದೇ ಹೋಟೆಲ್ನಲ್ಲಿದ್ದ ಹಾಗೂ ಅಂಟೊವ್ ಜೊತೆ ಪ್ರವಾಸದಲ್ಲಿದ್ದ ವ್ಲಾದಿಮಿರ್ ಬಿಡೆನೊವ್ (62) ಮೃತಪಟ್ಟಿದ್ದರು. ಎರಡೂ ಪ್ರಕರಣಗಳನ್ನು ಅಸಹಜ ಸಾವು ಪ್ರಕರಣಗಳೆಂದು ಪೊಲೀಸರು ದಾಖಲಿಸಿದ್ದರೂ ಯಾವುದೇ ಶಂಕಾಸ್ಪದ ವಿಚಾರ ಬೆಳಕಿಗೆ ಬಂದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. 

ಪವೆಲ್ ಅವರು ಆಕಸ್ಮಿಕವಾಗಿ ಬಿದ್ದಿರಬಹುದು ಅಥವಾ ಗೆಳೆಯನ ಸಾವಿನ ನಂತರ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಹೇಳುತ್ತಾರೆ. ಅಷ್ಟಕ್ಕೂ ಈ ಪವೆಲ್ ಅಂಟೊವ್ ಯಾರೆಂಬ ಕುರಿತು ಸಾಕಷ್ಟು ಕುತೂಹಲವಿದೆ. ಅವರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಪವೆಲ್ ಅಂಟೊವ್ ಅವರು ರಶ್ಯದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದು ವ್ಲಾದಿಮಿರ್ ಸ್ಟಾಂಡರ್ಡ್ ಎಂಬ ಮಾಂಸದ ಸಾಸೇಜ್ ತಯಾರಿಸುವ ಕಂಪೆನಿ ಹೊಂದಿದ್ದರು. ಅವರು ರಾಜಕಾರಣಿಯೂ ಆಗಿದ್ದರು. ವ್ಲಾದಿಮಿರ್ ಪ್ರಾಂತ್ಯದ ಶಾಸಕಾಂಗ ಸಭೆಯ ಉಪಾಧ್ಯಕ್ಷರಾಗಿದ್ದ ಪವೆಲ್ ಅವರ ಸಂಪತ್ತು 2019 ರಲ್ಲಿ 130 ಮಿಲಿಯನ್ ಪೌಂಡ್ ಆಗಿತ್ತೆಂದು ಫೋರ್ಬ್ಸ್ ರಶ್ಯದ ವಿಶ್ಲೇಷಣೆಯೊಂದು ಹೇಳಿತ್ತಲ್ಲದೆ ಈ ಮೂಲಕ ಅವರು ರಷ್ಯಾದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು.

ಇನ್ನೊಂದೆಡೆ ಅವರು ಉಕ್ರೇನ್ ಮೇಲಿನ ರಶ್ಯ ಆಕ್ರಮಣದ ವಿರೋಧಿಯಾಗಿದ್ದರು.

ಪೊಲೀಸರ ಪ್ರಕಾರ ಪವೆಲ್ ಅಂಟೊವ್  ಹಾಗೂ ಬಿಡೆನೊವ್ ರಶ್ಯದ ನಾಲ್ಕು ಮಂದಿ ಪ್ರವಾಸಿಗರ ತಂಡದ ಭಾಗವಾಗಿದ್ದರು. ಅವರು ತಮ್ಮ ಭಾರತೀಯ ಗೈಡ್ ಜೊತೆಗೆ ರಾಯಘಡದ ಹೋಟೆಲ್ನಲ್ಲಿ ಡಿಸೆಂಬರ್ 21 ರಿಂದ ತಂಗಿದ್ದರು. ಅವರ ತಂಡದ ಇತರ ಇಬ್ಬರನ್ನು ತನಿಖೆಗಾಗಿ ಇಲ್ಲಿಯೇ ಉಳಿದುಕೊಳ್ಳುವಂತೆ ಹೇಳಲಾಗಿತ್ತು. ಕೆಲವೊಂದು ಪ್ರಕ್ರಿಯೆಗಳ ನಂತರ ಅವರಿಗೆ ತೆರಳಲು ಅನುಮತಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

Similar News