ಮಲ್ಪೆ: ಬಲೆಗೆ ಬಿದ್ದ 22 ಕೆ.ಜಿ ಗೋಳಿ ಮೀನು 2.30 ಲಕ್ಷ ರೂ.ಗೆ ಹರಾಜು..!

Update: 2022-12-27 17:00 GMT

ಮಲ್ಪೆ: ಎರಡು ವರ್ಷಗಳ ಕೊರೋನ ನಿರ್ಬಂಧಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿರುವ ಮೀನುಗಾರಿಕೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಫಸಲನ್ನು ನೀಡುತ್ತಿದೆ. ಅಂಜಲ್, ಪಾಂಪ್ರಟ್, ಸಿಗಡಿ ಸಹಿತ ದುಬಾರಿ ಬೆಲೆಯ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತಿವೆ. ಅಲ್ಲದೆ ಬಂಗುಡೆ, ಬೂತಾಯಿಯಂಥ  ಮೀನುಗಳು ಯಥೇಚ್ಚ ಪ್ರಮಾಣದಲ್ಲಿ ಸಿಕ್ಕಿ ಅಗ್ಗದ ದರಕ್ಕೆ ಮಾರಾಟವಾಗುತ್ತಿರುವುದು ವರದಿಯಾಗಿತ್ತು. 

ಇದೀಗ ಮಲ್ಪೆಯಲ್ಲಿ  ಮೀನುಗಾರರೊಬ್ಬರ ಬಲೆಗೆ 2 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ 22 ಕೆ.ಜಿಯ ಒಂದು ಮೀನು ಸಿಕ್ಕಿದೆ. ಸ್ಥಳೀಯವಾಗಿ ಗೋಳಿ ಮೀನು ಎಂದು ಕರೆಯಲ್ಪಡುವ ಈ ಮೀನು ಆಳ ಸಮುದ್ರ ಮೀನುಗಾರರ ಬಲೆಗೆ ಬಿದ್ದಿದ್ದು,  ಹರಾಜಿನಲ್ಲಿ ಬರೋಬ್ಬರಿ 2,34,080 ರೂ.ಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ. 

ಈ ಮೀನು ಔಷಧಿ ತಯಾರಿಕೆಗೆ ಬಳಕೆಯಾಗುತ್ತದೆ ಎಂದು ಮೀನುಗಾರರು ಹೇಳುತ್ತಾರೆ. ಮಲ್ಪೆ ಬಂದರಿನಲ್ಲಿ ಹರಾಜು ಹಾಕುವಾಗ ವ್ಯಕ್ತಿಯೊಬ್ಬರು ಈ ದುಬಾರಿ ಮೀನನ್ನು ಖರೀದಿಸಿದ್ದು, ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ.

ಅತ್ಯಂತ ರುಚಿಕರ ಮಾಂಸವನ್ನು ಹೊಂದಿರುವ ಈ ಮೀನಿನ ವೈಜ್ಞಾನಿಕ ಹೆಸರು ಗೋಲ್ ಫಿಶ್. ಇದು ಗರಿಷ್ಠ 1.5ಮೀ. ಉದ್ದ ಬೆಳೆಯುತ್ತದೆ. ಇದರ ತೂಕ ಹೆಚ್ಚಾದಂತೆ ದರವೂ ಹೆಚ್ಚಾಗುತ್ತದೆ. ಇಂದು ಮಲ್ಪೆಯಲ್ಲಿ ಇದು ಕೆ.ಜಿ.ಗೆ 10,640ರೂ.ಗೆ ಮಾರಾಟವಾಗಿದೆ. ಇದು ಪಶ್ಚಿಮ ಕರಾವಳಿಯ ಮಹಾರಾಷ್ಟ್ರ ಹಾಗೂ ಗುಜರಾತ್‌ನ ತೀರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಈ ಮೀನಿನ ಮಾಂಸ ಔಷಧೀಯ ಗುಣವನ್ನು ಹೊಂದಿರುವುದರಿಂದ  ಹಾಗೂ ಇದನ್ನು ಸೌಂದರ್ಯವರ್ಧಕ ವಸ್ತುಗಳ ತಯಾರಿಯಲ್ಲಿ ಬಳಸುವುದರಿಂದ ಇದಕ್ಕೆ ಭಾರೀ ಬೇಡಿಕೆಯಿದೆ. ಮಲ್ಪೆ ಬಂದರಿನಲ್ಲೂ ಇದು ಅಪರೂಪಕ್ಕೆಂಬಂತೆ ಸಿಗುತ್ತದಾದರೂ, ಇಷ್ಟೊಂದು ದೊಡ್ಡ ಗಾತ್ರ ಹಾಗೂ ತೂಕದ ಮೀನು ಸಿಕ್ಕಿರುವುದು ಇದೇ ಮೊದಲೆನ್ನಲಾಗಿದೆ. 

Similar News