​ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸಂಗ್ರಹ ಆದೇಶ ವಾಪಸಿಗೆ ಆಗ್ರಹ

29ರಂದು ಉಡುಪಿ ತಾಲೂಕು ಕಚೇರಿ ಮುಂದೆ ಸಾಮೂಹಿಕ ಧರಣಿ

Update: 2022-12-27 15:57 GMT

ಉಡುಪಿ: ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸಂಗ್ರಹಿಸುವ ಆದೇಶದ ವಾಪಸಾತಿಗೆ ಆಗ್ರಹಿಸಿ ಡಿ.29ರ ಗುರುವಾರದಂದು  ಉಡುಪಿ  ತಾಲೂಕು ಕಚೇರಿ ಬಳಿ ಸಾಮೂಹಿಕ ಧರಣಿ ನಡೆಯಲಿದೆ.

ಸುರತ್ಕಲ್ ನ ಅಕ್ರಮ ಟೋಲ್ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಆದೇಶ ಜಾರಿಗೊಳ್ಳುವ ಆತಂಕದ ಹಿನ್ನೆಲೆಯಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಉಡುಪಿಯ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಈ ಧರಣಿ ನಡೆಯಲಿದೆ.

ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಆದೇಶ ರಾಜ್ಯ ಸರಕಾರದ ಅಧಿಕೃತ ಒಪ್ಪಿಗೆಯೊಂದಿಗೆ ಪ್ರಕಟಗೊಂಡಿದೆ. ಹೆಜಮಾಡಿ ಟೋಲ್ ಪ್ಲಾಜಾದ ಮಾಲಕತ್ವ ಹೊಂದಿರುವ  ನವಯುಗ್ ಕಂಪೆನಿ ಹೆಚ್ಚುವರಿ ಟೋಲ್ ಸಂಗ್ರಹಕ್ಕೆ ಹಿಂದೇಟು ಹಾಕಿರುವು ದರಿಂದ ತಾತ್ಕಾಲಿಕವಾಗಿಯಷ್ಟೆ ಹೆಜಮಾಡಿಯಲ್ಲಿ ಸಂಗ್ರಹಕ್ಕೆ ತಡೆ ಬಿದ್ದಿದೆ. ಜಿಲ್ಲಾಡಳಿತ ಸಮಾಯಾವಕಾಶ ಕೇಳಿದ್ದರೂ ರಾಜ್ಯ ಸರಕಾರದ ಒಪ್ಪಿಗೆ ಸಿಕ್ಕಿರುವುದರಿಂದ ಯಾವುದೇ ಕ್ಷಣದಲ್ಲಿ ಸಂಗ್ರಹ ಆರಂಭಗೊಳ್ಳಬಹುದು ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ಸಂಗ್ರಹದ ಆದೇಶವನ್ನು ಹೆದ್ದಾರಿ ಪ್ರಾಧಿಕಾರ ವಾಪಾಸು ಪಡೆಯುವುದು ಮಾತ್ರ ಶಾಶ್ವತ ಪರಿಹಾರ ವಾಗಿದ್ದು, ಆ ನಿಟ್ಟಿನಲ್ಲಿ ಎರಡೂ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರಾಂದೋಲನ ನಡೆಸಲು,  ಡಿ.29ರಂದು ಬೆಳಿಗ್ಗೆ 9:30ರಿಂದ ಮಧ್ಯಾಹ್ನ 1ಗಂಟೆಯ ವರೆಗೆ ಬನ್ನಂಜೆಯಲ್ಲಿರುವ ಉಡುಪಿ ತಾಲೂಕು ಕಚೇರಿ ಮುಂಭಾಗ ಬೃಹತ್ ಸಾಮೂಹಿಕ ಧರಣಿ ನಡೆಯಲಿದೆ.

ಉಡುಪಿ ಜಿಲ್ಲೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಬೇಕೆಂದು ಸಂಚಾಲಕ ಸಮಿತಿಯ ಪರವಾಗಿ ಮುನೀರ್ ಕಾಟಿಪಳ್ಳ, ಶೇಖರ ಹೆಜಮಾಡಿ, ಸುಂದರ ಮಾಸ್ತರ್, ಬಾಲಕೃಷ್ಣ ಶೆಟ್ಟಿ, ರಮೇಶ್ ಕಾಂಚನ್, ಪ್ರಶಾಂತ್ ಜತ್ತನ್ನ ಹಾಗೂ ಅಬ್ದುಲ್ ಅಝೀಝ್ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

Similar News