ಚಳಿಗೆ ತತ್ತರಿಸಿದ ಉತ್ತರ ಭಾರತ

Update: 2022-12-27 16:26 GMT

ಹೊಸದಿಲ್ಲಿ, ಡಿ. 27: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ದಟ್ಟ ಮಂಜು ಕವಿದಿರುವುದು ಮಂಗಳವಾರ ಕೂಡ ಮುಂದುವರಿದಿದೆ. ಹರ್ಯಾಣ, ದಿಲ್ಲಿ, ಪಂಜಾಬ್ ಹಾಗೂ ಉತ್ತರಾಖಂಡದ ಕೆಲವು ಭಾಗಗಳು ಇಂದು ಬೆಳಗ್ಗೆ ಮಂಜಿನಿಂದ ಆವೃತ್ತವಾಗಿದ್ದವು.

ಪಶ್ಚಿಮ ಉತ್ತರಪ್ರದೇಶ ಹಾಗೂ ಉತ್ತರ ರಾಜಸ್ಥಾನದೊಂದಿಗೆ ಪಂಜಾಬ್, ಹರ್ಯಾಣ, ಚಂಡಿಗಢಗಳ ಹಲವು ಪ್ರದೇಶಗಳಲ್ಲಿ ಮಂಜು ಮುಸುಕುವ ಮುನ್ನೆಚ್ಚರಿಕೆಯನ್ನು ಭಾರತ ಹವಾಮಾನ ಇಲಾಖೆ ನೀಡಿತ್ತು. ಆದರೆ, ದಟ್ಟ ಮಂಜು ಮಂಗಳವಾರ ರಾತ್ರಿಯಿಂದ ಕಡಿಮೆಯಾಗಲು ಆರಂಭಿಸಿದೆ. ರಾಜಸ್ಥಾನ, ಪಶ್ಚಿಮ ಉತ್ತರಪ್ರದೇಶ, ಈಶಾನ್ಯ ಮಧ್ಯಪ್ರದೇಶದೊಂದಿಗೆ ಪಂಜಾಬ್, ಹರ್ಯಾಣ, ಚಂಡಿಗಡ ಹಾಗೂ ದಿಲ್ಲಿಗಳ ಕೆಲವು ಭಾಗಗಳಲ್ಲಿ ಜನರು 3ರಿಂದ 7 ಡಿಗ್ರಿ ಸೆಲ್ಸಿಯಸ್ ನಡುವಿನ ಶೀತವನ್ನು ಅನುಭವಿಸಿದ್ದಾರೆ.

ಪೂರ್ವ ರಾಜಸ್ಥಾನ, ಹರ್ಯಾಣ, ಹಿಮಾಚಲಪ್ರದೇಶ, ಪಂಜಾಬ್ ಹಾಗೂ ದಿಲ್ಲಿಯ ಕೆಲವು ಪ್ರದೇಶಗಳಲ್ಲಿ ಸೋಮವಾರ ಶೀತ ಗಾಳಿ ಬೀಸಿದೆ. ರಾಜಸ್ಥಾನದ ಚುರು ಶೂನ್ಯ ಡಿಗ್ರಿ ಸೆಲ್ಸಿಯಸ್ನಲ್ಲಿ ನಡುಗಿದರೆ, ಕಾಶ್ಮೀರ ಕೊರೆಯುವ ಚಳಿಯಿಂದ ತತ್ತರಿಸಿದೆ. ಉತ್ತರಾಖಂಡ, ಪಂಜಾಬ್, ಹರ್ಯಾಣ, ಚಂಡಿಗಢ, ದಿಲ್ಲಿ ಹಾಗೂ ಪಶ್ಚಿಮ ರಾಜಸ್ಥಾನದ ಭಾಗಗಳಲ್ಲಿ ಮುಂದಿನ 24 ಗಂಟೆಗಳ ಕಾಲ ದಟ್ಟ ಮಂಜು ಮುಂದುವರಿಯಲಿದೆ. ಅನಂತರ ಅದರ ತೀವ್ರತೆ ಕಡಿಮೆಯಾಗಲಿದೆ.

ಪಂಜಾಬ್ನಲ್ಲಿ ಮುಂದಿನ ಮೂರು ದಿನಗಳ ಕಾಲ ದಟ್ಟ ಮಂಜು ಇರಲಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ರಾಜಸ್ಥಾನ, ಪಂಜಾಬ್, ಹರ್ಯಾಣ, ಚಂಡಿಗಢ ಹಾಗೂ ದಿಲ್ಲಿಯ ಕೆಲವು ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಶೀತ ಅಥವಾ ತೀವ್ರ ಶೀತ ಗಾಳಿಯ ಪರಿಸ್ಥಿತಿ ಇರಲಿದೆ.

Similar News