ಮಣಿಪಾಲ-ಪರ್ಕಳ ರಸ್ತೆಯ ಕೆಳಪರ್ಕಳ ಕಾಮಗಾರಿ ಪೂರ್ಣ: ವಾಹನ ಸಂಚಾರಕ್ಕೆ ಮುಕ್ತ

Update: 2022-12-27 16:51 GMT

ಉಡುಪಿ: ಕಳೆದೊಂದು ವರ್ಷಕ್ಕೂ ಅಧಿಕ ಸಮಯದಿಂದ  ನಿತ್ಯ ಸಂಚಾರಿಗಳಿಗೆ ತೀವ್ರ ಸಮಸ್ಯೆ ತಂದೊಡ್ಡುತಿದ್ದ ಪರ್ಕಳ- ಮಣಿಪಾಲ ಮುಖ್ಯ ರಸ್ತೆಯ ಕೆಳಪರ್ಕಳ ರಸ್ತೆ ಕಾಮಗಾರಿ ಇದೀಗ ಪೂರ್ಣಗೊಂಡಿದ್ದು, ವಾಹನಗಳು ಇದರಲ್ಲಿ ಸಂಚರಿಸತೊಡಗಿವೆ.

ಪರ್ಕಳ - ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವುದರಿಂದ ಮಣಿಪಾಲ - ಉಡುಪಿ ಸಂಪರ್ಕಿಸುವ ವಾಹನಗಳ ಸುಗಮ ಸಂಚಾರಕ್ಕೆ ಪ್ರಸ್ತುತ ಇರುವ ಕೆಳಪರ್ಕಳದ ರಸ್ತೆಯನ್ನು ಸರಿಪಡಿಸಲು ಸಂಸದರು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರ ಸೂಚನೆಯಂತೆ ಶಾಸಕ ಕೆ.ರಘುಪತಿ ಭಟ್  ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಣಿಪಾಲ- ಉಡುಪಿ ಸಂಪರ್ಕಿಸುವ ಕೆಳಪರ್ಕಳ ರಸ್ತೆಯನ್ನೂ ಕೂಡಲೇ ಸರಿಪಡಿಸುವಂತೆ ತಿಳಿಸಿದ್ದರು.

ಅದರಂತೆ ಕೈಗೊಂಡಿರುವ ಕೆಳಪರ್ಕಳ ರಸ್ತೆ ಕಾಮಗಾರಿ ಇದೀಗ ಪೂರ್ಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 160 ಎ ಇದರ ಪರ್ಕಳದಿಂದ ಮಣಿಪಾಲ ಸಂಪರ್ಕಿಸುವ ಮುಖ್ಯ ರಸ್ತೆಯ ಚತುಷ್ಪಥ ಕಾಮಗಾರಿ ನಡೆಯುತ್ತಿರುವುದರಿಂದ ಉಡುಪಿ - ಮಣಿಪಾಲ ಸಂಪರ್ಕಿಸುವ ಪ್ರಮುಖ ರಸ್ತೆಯಾದ ಕೆಳಪರ್ಕಳ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರ ಕಷ್ಟ ಸಾಧ್ಯವಾಗಿ ಪ್ರತಿನಿತ್ಯ ವಾಹನದಟ್ಟನೆಯಿಂದ ಸಾರ್ವಜನಿಕರು ಸಂಕಷ್ಟ ಪಡುತ್ತಿದ್ದರು.

ಈ ಹಿನ್ನೆಲೆಯಲ್ಲಿ ಕಳೆದ ವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಾಸಕರು ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿಯುವವರೆಗೆ ಪ್ರಸ್ತುತ ಇರುವ ಕೆಳಪರ್ಕಳದ ರಸ್ತೆಯನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವಂತೆ ತಿಳಿಸಿದ್ದರು.

Similar News