ಉಗ್ರರ ದಾಳಿ ಭೀತಿ: ಇಸ್ಲಾಮಾಬಾದ್ ನಲ್ಲಿ ವಿಶೇಷ ಭದ್ರತಾ ಯೋಜನೆ ಘೋಷಿಸಿದ ಪಾಕ್‌

Update: 2022-12-27 17:41 GMT

ಇಸ್ಲಾಮಬಾದ್,ಡಿ.27: ಭಯೋತ್ಪಾದಕ ದಾಳಿ ಭೀತಿಯ ಹಿನ್ನೆಲೆಯಲ್ಲಿ ರಾಜಧಾನಿ ಇಸ್ಲಾಮಾಬಾದ್(Islamabad) ನಲ್ಲಿ ಸುರಕ್ಷತೆಯನ್ನು ಬಲಪಡಿಸಲು ಪಾಕ್ ಸರಕಾರ ವಿಶೇಷ ಭದ್ರತಾ ಯೋಜನೆಗಳನ್ನು ಘೋಷಿಸಿದೆ. ತಮ್ಮ ಚಲನವಲನಗಳನ್ನು ಸೀಮಿತಗೊಳಿಸುವಂತೆ ಅಮೆರಿಕ, ಬ್ರಿಟನ್, ಸೌದಿ ಆರೇಬಿಯ ಹಾಗೂ ಆಸ್ಟ್ರೇಲಿಯ ಸೇರಿದಂತೆ ವಿವಿಧ ದೇಶಗಳು ಪಾಕಿಸ್ತಾನದಲ್ಲಿರುವ ತಮ್ಮ ಪ್ರಜೆಗಳಿಗೆ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಪಾಕ್ ಆಡಳಿತ ಈ ನಿರ್ಧಾರವನ್ನು ಪ್ರಕಟಿಸಿದೆ.

ಕೆಂಪು ವಲಯವೆಂದು ಪರಿಗಣಿಸಲಾದ ಪ್ರದೇಶಗಳ ಪ್ರವೇಶ ಸ್ಥಳಗಳಲ್ಲಿ ಸೇಫ್ಸಿಟಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದ.ಮೆಟ್ರೋ ಬಸ್ ಪ್ರಯಾಣಿಕರ ಮೇಲೂ ವಿಡಿಯೋ ಕಣ್ಗಾವಲು ನಡೆಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪಾಕ್ ನಾಗರಿಕರು ಹಾಗೂ ವಿದೇಶಿ ಪ್ರಜೆಗಳು ತಾವು ಪ್ರಯಾಣಿಸುವಾಗಲೆಲ್ಲಾ ತಮ್ಮಂದಿಗೆ ಗುರುತಿನ ದಾಖಲೆಗಳನ್ನು ಒಯ್ಯುವಂತೆ ಸೂಚಿಸಲಾಗಿದೆ ಎಂದು ಅವು ತಿಳಿಸಿವೆ.

ನಗರದ ಜನರು ತಮ್ಮ ಬಾಡಿಗೆ ಮನೆಗಳಲ್ಲಿ ವಾಸವಾಗಿರುವವರು ಹಾಗೂ ತಮ್ಮ ನೌಕರರನ್ನು ಸಮೀಪದ ಪೊಲೀಸ್ ಠಾಣೆಯಲ್ಲಿ ನೋಂದಾಯಿಸಿಕೊಳ್ಳಬೇಕು ಹಾಗೂ ನೋಂದಣಿಗೊಳ್ಳದ ಸ್ಥಳೀಯ ಅಥವಾ ವಿದೇಶಿ ನೌಕರರನ್ನು ಕೆಲಸಕ್ಕಿಟ್ಟುಕೊಂಡವರ ವಿರುದ್ಧ ತನಿಖೆ ನಡೆಸಲಾಗುವುದೆಂದು ಹೇಳಿಕೆಯು ಎಚ್ಚರಿಸಿದೆ. ತಮ್ಮ ಗಮನಕ್ಕೆ ಬರುವ ಯಾವುದೇ ಅಸಹಜ ಚಟುವಟಿಕೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸುವಂತೆ ತಿಳಿಸಲಾಗಿದೆಯೆಂದು ಮೂಲಗಳು ಹೇಳಿವೆ.

ಇಸ್ಲಾಮಾಬಾದ್ ನಲ್ಲಿ ಶುಕ್ರವಾರ ನಡೆದ ಆತ್ಮಹತ್ಯಾ ಬಾಂಬ್ದಾಳಿಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬ ಸಾವನ್ನಪ್ಪಿದ ಬೆನ್ನಲ್ಲೇ ಪಾಕ್ ಆಡಳಿತ ನೂತನ ಭದ್ರತಾ ಯೋಜನೆಯನ್ನು ಪ್ರಕಟಿಸಿದೆ.

Similar News