×
Ad

ನನ್ನ ಬ್ಯಾಗೇಜ್ ಕಾಣೆಯಾಗಿದೆ ಎಂದು ಟ್ವೀಟ್ ಮಾಡಿದ್ದ ಕ್ರಿಕೆಟಿಗ ಸಿರಾಜ್‌ಗೆ ಏರ್‌ಲೈನ್ಸ್ ಪ್ರತಿಕ್ರಿಯಿಸಿದ್ದು ಹೀಗೆ..

Update: 2022-12-28 16:34 IST

ಮುಂಬೈ: ಡಿಸೆಂಬರ್ 26ರಂದು ಢಾಕಾದಿಂದ ಮುಂಬೈಗೆ ಪ್ರಯಾಣಿಸಿದ ವಿಮಾನದಲ್ಲಿನ ನನ್ನ ಸಾಮಗ್ರಿಗಳಿದ್ದ ಬ್ಯಾಗ್ ಕಾಣೆಯಾಗಿದೆ. ಮೂರು ಬ್ಯಾಗ್‌ ಗಳನ್ನು ಹುಡುಕುವ ವೇಳೆ ವಿಸ್ತಾರ ಏರ್‌ಲೈನ್ಸ್ ಒಂದು ಬ್ಯಾಗ್‌ ಅನ್ನು ಮಾತ್ರ ತುಂಬಾ ಸಮಯ ನೀಡಲಿಲ್ಲ" ಎಂದು ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ದೂರಿದ್ದಾರೆ.

ಈ ಕುರಿತು ಡಿಸೆಂಬರ್ 27ರಂದು ಟ್ವೀಟ್ ಮಾಡಿರುವ ಮೊಹಮ್ಮದ್ ಸಿರಾಜ್, "@airvistara ಡಿಸೆಂಬರ್ 26ರಂದು ದಿಲ್ಲಿ ಮಾರ್ಗವಾಗಿ ನಾನು ಢಾಕಾದಿಂದ ಮುಂಬೈಗೆ ಕ್ರಮವಾಗಿ ವಿಮಾನ ಸಂಖ್ಯೆ UK182 ಮತ್ತು UK951ರಲ್ಲಿ ಪ್ರಯಾಣಿಸಿದ್ದೆ. ನಾನು ಪರಿಶೀಲಿಸಿದ ಮೂರು ಬ್ಯಾಗ್‌ ಗಳ ಪೈಕಿ ಒಂದು ‌ಬ್ಯಾಗ್ ಪತ್ತೆಯಾಗಲಿಲ್ಲ. ಯಾವುದೇ ವಿಳಂಬವಿಲ್ಲದೆ ಅದನ್ನು ತಲುಪಿಸಲಾಗುವುದು ಎಂದು ನನಗೆ ಭರವಸೆ ನೀಡಲಾಗಿತ್ತಾದರೂ, ಈವರೆಗೆ ಆ ಕುರಿತ ಯಾವ ಸುದ್ದಿಯೂ ನನ್ನ ಕಿವಿಗೆ ಬಿದ್ದಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಅದರಲ್ಲಿ ನನಗೆ ಸಂಬಂಧಿಸಿದ ಎಲ್ಲ ಪ್ರಮುಖ ದಾಖಲೆಗಳಿದ್ದವು. ಅದರ ಪತ್ತೆ ಕಾರ್ಯವನ್ನು ಮುಗಿಸಿ, ಆದಷ್ಟೂ ಶೀಘ್ರವಾಗಿ ಆ ಬ್ಯಾಗ್ ನನಗೆ ಹೈದರಾಬಾದ್‌‌ ಗೆ ತಲುಪಿಸಿ. @airvistara" ಎಂದು ಮನವಿ ಮಾಡಿದ್ದಾರೆ.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಟಾಟಾ ಒಡೆತನದ ವಿಸ್ತಾರ ಏರ್‌ಲೈನ್ಸ್, "ದಯವಿಟ್ಟು ನಮ್ಮ ಸಿಬ್ಬಂದಿಗಳು ಆ ಬ್ಯಾಗ್ ಪತ್ತೆ ಹಚ್ಚಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ ಎಂಬ ವಿಚಾರ ನಿಮ್ಮ ಗಮನದಲ್ಲಿರಲಿ ಮತ್ತು ಆ ಕುರಿತ ಮಾಹಿತಿಯನ್ನು ಆದಷ್ಟೂ ಶೀಘ್ರ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ನಿಮ್ಮನ್ನು ಸಂಪರ್ಕಿಸಲು ದಯವಿಟ್ಟು ನಿಮ್ಮ ಸಂಪರ್ಕ ಸಂಖ್ಯೆ ಮತ್ತು ನೀವು ಲಭ್ಯವಿರುವ ಸೂಕ್ತ ಸಮಯವನ್ನು ನಮ್ಮ ಉಪ ವ್ಯವಸ್ಥಾಪಕರೊಂದಿಗೆ ಹಂಚಿಕೊಳ್ಳಿ" ಎಂದು ಉತ್ತರಿಸಿದೆ.

ಬಾಂಗ್ಲಾ ದೇಶದಲ್ಲಿ ನಡೆದಿದ್ದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಭಾರತವು ಬಾಂಗ್ಲಾ ದೇಶವನ್ನು 2-0 ಅಂತರದಲ್ಲಿ ಸೋಲಿಸಿ, ಕ್ಲೀನ್ ಸ್ವೀಪ್ ಸಾಧನೆ ಮಾಡುವಲ್ಲಿ ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಮಹತ್ವದ ಪಾತ್ರ ವಹಿಸಿದ್ದರು.

Similar News