×
Ad

ಜಲೀಲ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ 14 ದಿನ ಪೊಲೀಸ್ ಕಸ್ಟಡಿಗೆ

Update: 2022-12-28 19:10 IST

ಸುರತ್ಕಲ್: ಕೃಷ್ಣಾಪುರ ನಿವಾಸಿ ಜಲೀಲ್ ಹತ್ಯೆ ಪ್ರಕರಣ ಪ್ರಮುಖ ಆರೋಪಿ ಎನ್ನಲಾದ ಕಾಟಿಪಳ್ಳ 4ನೇ ಬ್ಲಾಕ್‌ ನಿವಾಸಿ ಲಕ್ಷ್ಮೀಶ ದೇವಾಡಿಗನಿಗೆ ನಾಯ್ಯಾಯಲವು 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.

ಈತ ಜಲೀಲ್ ಹತ್ಯೆ ಪ್ರಕರಣ ಸೂತ್ರದಾರ ಎನ್ನಲಾಗಿದ್ದು, ಹತ್ಯೆಗೆ ವಾರದ ಹಿಂದೆ ಜಲೀಲ್ ಅವರ ಅಂಗಡಿಗೆ ನುಗ್ಗಿ ಜಗಳವಾಡಿ, ಅಂಗಡಿಗೆ ಕಲ್ಲೆಸೆದು ಹಾನಿಮಾಡಿದ್ದಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಿದ್ದ ಎನ್ನಲಾಗಿದೆ.

ಈತ ಪಿಂಕಿ ನವಾಝ್ ಕೊಲೆ ಯತ್ನ ಪ್ರಕರಣದಲ್ಲೂ ಭಾಗಿಯಾಗಿದ್ದ. ಅಲ್ಲದೆ, ಗಾಂಜಾ ಸೇವನೆ ಮಾಡಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಮಕ್ಕಳಿಗೆ ಹಲ್ಲೆ ನಡೆಸಿ ಅವರಿಂದ ಹಣ ದೋಚಿದ್ದ ಎನ್ನಲಾಗಿದೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಈತನ ಮೇಲೆ ಈಗಾಗಲೇ ಸುರತ್ಕಲ್ ಮತ್ತು ಪಣಂಬೂರು ಪೊಲೀಸ್ ಠಾಣೆಗಳಲ್ಲಿ ರೌಡಿ ಶೀಟ್ ತೆರೆಯಲಾಗಿದೆ ಎಂದು ತಿಳಿದು ಬಂದಿದೆ.

ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಓರ್ವ ಮಹಿಳೆಯನ್ನು  ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತ ನಾಲ್ಕು ಮಂದಿ ಆರೋಪಿಗಳ ಪೈಕಿ ಕಾಟಿಪಳ್ಳ ನಿವಾಸಿ ಶೈಲೇಶ್ ಪೂಜಾರಿ ಮತ್ತು ಹೆಜಮಾಡಿಯ ನಿವಾಸಿ ಸುವಿನ್ ಕಾಂಚನ್ ಕೃತ್ಯದಲ್ಲಿ ನೇರಭಾಗಿಗಳು ಎನ್ನಲಾಗಿದ್ದು, ಅವರನ್ನು ರವಿವಾರ ಬೆಳಗ್ಗೆ ಕಾಪುವಿನ ಲಾಡ್ಜ್ ವೊ‌ಂದರಿಂದ ವಶಕ್ಕೆ ಪಡೆಯಲಾಗಿತ್ತು ಎಂದು ತಿಳಿದು ಬಂದಿದೆ.

ಮೂರನೇ ಆರೋಪಿ ಕೃಷ್ಣಾಪುರ 3ನೇ ಬ್ಲಾಕ್ ನಿವಾಸಿ  ಪವನ್ ಯಾನೆ ಪಚ್ಚು ಆರೋಪಿಗಳು ಕೃತ್ಯ ಎಸಗಿದ ಬಳಿಕ ಪರಾರಿಯಾಗಲು ಸಹಕರಿಸಿದ ಆರೋಪದಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ. ನಾಲ್ಕನೇ ಆರೋಪಿ ಲಕ್ಷ್ಮೀಶ ದೇವಾಡಿಗ ಜಲೀಲ್ ಕೊಲೆಯ ಸೂತ್ರದಾರ ಎನ್ನಲಾಗಿದ್ದು ಆತನನ್ನು ಪೊಲೀಸರು ಸೋಮವಾರ ಬಂಧಿಸಿದ್ದರು. 

Similar News