×
Ad

ಸಾಕೇತ್ ಗೋಖಲೆ ಬಂಧನ ವಿಚಾರ: ಗುಜರಾತ್ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿದ ಮಾನವ ಹಕ್ಕುಗಳ ಆಯೋಗ

Update: 2022-12-29 12:29 IST

ಹೊಸದಿಲ್ಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಗುಜರಾತ್ ಪೊಲೀಸರ ವಿರುದ್ಧ ಅಕ್ರಮ ಬಂಧನದ ಪ್ರಕರಣವನ್ನು ದಾಖಲಿಸಿದೆ ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ ಗುರುವಾರ ಹೇಳಿದ್ದಾರೆ.

" ಮೂರು ವಾರಗಳ ಹಿಂದೆ ನನ್ನ ಬಂಧನಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಗುಜರಾತ್ ಪೊಲೀಸರ ವಿರುದ್ದ ಪ್ರಕರಣ ದಾಖಲಿಸಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಜೈಪುರದಿಂದ ಅಹಮದಾಬಾದ್‌ಗೆ ಟ್ರಾನ್ಸಿಟ್ ರಿಮಾಂಡ್ ಇಲ್ಲದೆ ಹಾಗೂ  ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ  ನನ್ನನ್ನು ಅಕ್ರಮವಾಗಿ ಬಂಧಿಸಿರುವುದಕ್ಕೆ ಈ  ಪ್ರಕರಣ ದಾಖಲಾಗಿದೆ" ಎಂದು ಗೋಖಲೆ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಮೋರ್ಬಿ ಸೇತುವೆ ಕುಸಿದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ 30 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಹೇಳಲಾದ ಮಾಹಿತಿ ಹಕ್ಕು ಅರ್ಜಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಕ್ಲಿಪ್ಪಿಂಗ್ ಅನ್ನು ಹಂಚಿಕೊಂಡ ಗೋಖಲೆ ಈ ತಿಂಗಳ ಆರಂಭದಲ್ಲಿ  ನಾಲ್ಕು ದಿನಗಳಲ್ಲಿ ಎರಡು ಬಾರಿ ಬಂಧಿಸಲ್ಪಟ್ಟಿದ್ದರು. ಆದರೆ, ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ ಈ ಮಾಹಿತಿಯು ನಕಲಿ ಎಂದು ಬಣ್ಣಿಸಿತ್ತು.

ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕುಸಿದು 141 ಜನರು ಸಾವನ್ನಪ್ಪಿದ ಒಂದು ದಿನದ ನಂತರ ನವೆಂಬರ್ 1 ರಂದು ಪ್ರಧಾನಿ ಮೋದಿ ಮೊರ್ಬಿಗೆ ಭೇಟಿ ನೀಡಿದ್ದರು.

ಗೋಖಲೆ ಅವರನ್ನು ಮೊದಲು ಡಿಸೆಂಬರ್ 5 ರಂದು ಜೈಪುರದಲ್ಲಿ ಗುಜರಾತ್ ಪೊಲೀಸರು ರಾಜಸ್ಥಾನ ಪೊಲೀಸರಿಗೆ ತಿಳಿಯದಂತೆ ಬಂಧಿಸಿದ್ದರು. ರಾಜಕೀಯ ಮೈಲೇಜ್ ಪಡೆಯಲು ಗೋಖಲೆ ಅವರು  ಮೋದಿಯವರ ಮೋರ್ಬಿ ಭೇಟಿಯ ಬಗ್ಗೆ ನಕಲಿ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ ಎಂದು ಗುಜರಾತ್ ಪೊಲೀಸರು ಆರೋಪಿಸಿದ್ದರು.

ಡಿಸೆಂಬರ್ 8 ರಂದು, ಅಹಮದಾಬಾದ್ ನ್ಯಾಯಾಲಯವು ಗೋಖಲೆ ಅವರಿಗೆ ಜಾಮೀನು ನೀಡಿತು. ಆದರೆ ಮೊರ್ಬಿ ಜಿಲ್ಲೆಯಲ್ಲಿ ದಾಖಲಾದ ಮತ್ತೊಂದು ಪ್ರಕರಣದಲ್ಲಿ ತಕ್ಷಣವೇ ಅವರನ್ನು ಮರು ಬಂಧಿಸಲಾಯಿತು.

ಡಿಸೆಂಬರ್ 9 ರಂದು ಗೋಖಲೆ ಎರಡನೇ ಪ್ರಕರಣದಲ್ಲೂ ಜಾಮೀನು ಪಡೆಯುವಲ್ಲಿ ಯಶಸ್ವಿಯಾದರು.

ಮೊದಲ ಪ್ರಕರಣದಲ್ಲಿ ಗುಜರಾತ್ ಪೊಲೀಸರು ತನ್ನನ್ನು ಬಂಧಿಸಿರುವುದು ಕಾನೂನುಬಾಹಿರ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ವಕ್ತಾರ ಗೋಖಲೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು.

Similar News