ಬಹುಕೋಟಿ ರೂ. ಹಗರಣ: ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷನಿಗೆ ಜ.11ರವರೆಗೆ ನ್ಯಾಯಾಂಗ ಬಂಧನ
ಉಡುಪಿ, ಡಿ.29: ತನ್ನ ಸಹಕಾರಿ ಸಂಘದಲ್ಲಿ ಹಣವಿಟ್ಟ ಠೇವಣಿದಾರರಿಗೆ ನೂರಾರು ಕೋಟಿ ರೂ. ವಂಚಿಸಿದ ಪ್ರಕರಣದ ಆರೋಪಿ ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಬಿ.ವಿ.ಲಕ್ಷ್ಮೀನಾರಾಯಣ ಉಪಾಧ್ಯಾಯರಿಗೆ 14 ದಿನಗಳ ಕಾಲ (ಜ.11) ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಿ.ವಿ. ಲಕ್ಷ್ಮೀನಾರಾಯಣ ಉಪಾಧ್ಯಾಯರನ್ನು ಬ್ರಹ್ಮಾವರ ಬಳಿ ಮಟಪಾಡಿಯಲ್ಲಿ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇಂದು ಆರೋಪಿಯನ್ನು ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು, ಕಿರಿಯ ವಿಭಾಗ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದ್ದರು.
ಆರೋಪಿ ತನ್ನ ವಕೀಲರ ಮೂಲಕ ಈಗಾಗಾಲೇ ಜಾಮೀನು ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ಜ.2ಕ್ಕೆ ನಡೆಯಲಿದೆ ಎಂದು ತಿಳಿದುಬಂದಿದೆ.
ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಆರೋಪಿ ಲಕ್ಷ್ಮೀನಾರಾಯಣ ಪರ ವಕೀಲರು, ಈಗಾಗಾಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದೇವೆ. ಸೊಸೈಟಿಯಲ್ಲಿ ನಡೆದ ವ್ಯವಹಾರ ಹಾಗೂ ಕೊರೋನ ಬಳಿಕ ಸಾಲ ಮರುಪಾವತಿಯಾಗದೆ ಈ ಸಮಸ್ಯೆ ಆಗಿದ್ದು ಲಕ್ಷ್ಮೀನಾರಾಯಣ ಕೊಡಬೇಕಾದ ಹಣವನ್ನು ಮುಂದಿನ ದಿನಗಳಲ್ಲಿ ವಾಪಸ್ ಮಾಡುವ ಬಗ್ಗೆ ತಿಳಿಸಿದ್ದಾರೆ. ವಿಚಾರಣೆ ಹಂತದಲ್ಲಿರುವ ಕಾರಣ ಹೆಚ್ಚೇನು ಹೇಳಲಾಗುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಬಹುಕೋಟಿ ಹಗರಣ ಪ್ರಕರಣ: ಉಡುಪಿಯ ಕಮಾಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷನ ಬಂಧನ