ಚರ್ಚ್‌ಗಳ ಮೇಲೆ ನಿಗಾ ವಹಿಸಲು ಅಸ್ಸಾಂ ಪೊಲೀಸರ ರಹಸ್ಯ ಪತ್ರ: ಮೇಘಾಲಯದಲ್ಲಿ ರಾಜಕೀಯ ಬಿರುಗಾಳಿ

Update: 2022-12-29 18:04 GMT

ಗುವಾಹಟಿ: ಚರ್ಚ್‌ ಹಾಗೂ ಮತಾಂತರ ಕುರಿತು ನಿಗಾ ವಹಿಸುವಂತೆ ಹಾಗೂ ಮಾಹಿತಿ ನೀಡುವಂತೆ ಅಸ್ಸಾಂ ಪೊಲೀಸ್ ವಿಶೇಷ ಬ್ರಾಂಚ್ ಎಸ್‌ಪಿ ರಾಜ್ಯದ ಜಿಲ್ಲೆಯ ಎಲ್ಲಾ ಎಸ್‌ಪಿಗಳಿಗೆ ʼರಹಸ್ಯʼ ಪತ್ರ ಬರೆದಿರುವ ವಿವಾದವು ಪಕ್ಕದ ಮೇಘಾಲಯದಲ್ಲಿ ರಾಜಕೀಯ ಸುಳಿಯನ್ನು ಎಬ್ಬಿಸಿದೆ. ಚುನಾವಣೆಗೆ ಸಜ್ಜಾಗಿರುವ ಮೇಘಾಲಯದಲ್ಲಿ ಕಾಲೂರಲು ಬಯಸುತ್ತಿರುವ ಟಿಎಂಸಿಯು ಈ ವಿಚಾರ ಇಟ್ಟುಕೊಂಡು ಆಡಳಿತರೂಢ ಬಿಜೆಪಿಯನ್ನು ತೀವ್ರ ತರಾಟೆಗೆ ಎತ್ತಿಕೊಂಡಿದೆ.

 ಅಸ್ಸಾಂ ರಾಜ್ಯದ ಚರ್ಚ್ ಗಳ ಬಗ್ಗೆ ನಿಗಾ ಇರಿಸಲು ಬರೆದಿರುವ ಪತ್ರದ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿ ವ್ಯಾಟಿಕನ್‌ನ ಪವಿತ್ರ ರಾಯಭಾರ ಕಚೇರಿಗೆ ಟಿಎಂಸಿ ಗುರುವಾರ ಪತ್ರ ಬರೆದಿದೆ. ಈ ನಡೆಯು "ಕ್ರೈಸ್ತರ ಮೇಲೆ ಸರ್ಕಾರಿ ಪ್ರಾಯೋಜಿತ ಕಿರುಕುಳ" ಎಂದು ಟಿಎಂಸಿ  ಹೇಳಿದೆ.

  ಭಾರತ ಸರ್ಕಾರದೊಂದಿಗೆ ಸೂಕ್ತ ರಾಜತಾಂತ್ರಿಕ ವೇದಿಕೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಟಿಎಂಸಿ ಮನವಿ ಮಾಡಿಕೊಂಡಿದೆ.

ವ್ಯಾಟಿಕನ್‌ನ ಹೋಲಿ ಸೀ ರಾಯಭಾರ ಕಚೇರಿಯ ಭಾರತದ ಅಪೋಸ್ಟೋಲಿಕ್ ನನ್ಸಿಯೋ ರೆವರೆಂಡ್ ಲಿಯೋಪೋಲ್ಡೊ ಗಿರೆಲ್ಲಿ ಅವರಿಗೆ ಟಿಎಂಸಿಯ ಸಾಕೇತ್ ಗೋಖಲೆ ಅವರು ಪತ್ರ ಬರೆದಿದ್ದು, “ಇದರ ಮೂಲಕ, ಅಸ್ಸಾಂ ರಾಜ್ಯದ ಈ ಅತ್ಯಂತ ಗಂಭೀರ ಸಮಸ್ಯೆಯನ್ನು ನಾವು ನಿಮಗೆ ತಿಳಿಸಲು ಬಯಸುತ್ತೇವೆ. ಕ್ರಿಶ್ಚಿಯನ್ನರ ಮೇ ಸರ್ಕಾರಿ ಪ್ರಾಯೋಜಿತ ಕಿರುಕುಳದ ಬಗ್ಗೆ ನಿಮಗೆ ಸೂಕ್ತವೆಂದು ಅನಿಸಿದ ಭಾರತ ಸರ್ಕಾರದ ಸಂಬಂಧಿತ ರಾಜತಾಂತ್ರಿಕ ವೇದಿಕೆಗಳಲ್ಲಿ ಈ ವಿಷಯವನ್ನು ಕೈಗೆತ್ತಿಕೊಳ್ಳಬೇಕು” ಎಂದು ಕೇಳಿಕೊಂಡಿದ್ದಾರೆ.

 ಮತಾಂತರ ಮಾಡುವವರ ಬಗ್ಗೆ ನಿಗಾ ವಹಿಸಲು ಅಸ್ಸಾಂ ಪೊಲೀಸರು ಬರೆದಿರುವ ರಹಸ್ಯ ಪತ್ರವನ್ನು ಉಲ್ಲೇಖಿಸಿರುವ ಗೋಖಲೆ ಅವರು, ಅಸ್ಸಾಂ ಸರ್ಕಾರವು ಪೊಲೀಸ್ ಮತ್ತು ಗುಪ್ತಚರ ಇಲಾಖೆಯನ್ನು "ರಾಜ್ಯದಲ್ಲಿರುವ ಕ್ರಿಶ್ಚಿಯನ್ ಪಾದ್ರಿಗಳನ್ನು ಮಾತ್ರವಲ್ಲದೆ ಲಾರ್ಡ್ ಜೀಸಸ್ ಕ್ರೈಸ್ಟ್ನ ಬೋಧನೆಗಳನ್ನು ಸ್ವೀಕರಿಸಲು ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಆಯ್ಕೆಮಾಡಿದ ಜನರನ್ನು ಗುರಿಯಾಗಿಸಲು ಮತ್ತು ಕಿರುಕುಳ ನೀಡಲು ಬಳಸುತ್ತಿದೆ" ಎಂದು ಆರೋಪಿಸಿದ್ದಾರೆ.

“ಒಬ್ಬರ ನಂಬಿಕೆಯನ್ನು ಪ್ರತಿಪಾದಿಸುವ, ಪ್ರಚಾರ ಮಾಡುವ ಮತ್ತು ಅಭ್ಯಾಸ ಮಾಡುವ ಹಕ್ಕು ಭಾರತದ ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕು. ಇದಲ್ಲದೆ, ಅಂತರರಾಷ್ಟ್ರೀಯ ಕಾನೂನು, ಹಾಗೆಯೇ ಜಿನೀವಾ ಕನ್ವೆನ್ಷನ್, ತನ್ನ ಆಯ್ಕೆಯ ಧರ್ಮ ಮತ್ತು ನಂಬಿಕೆಯನ್ನು ಮುಕ್ತವಾಗಿ ಅಭ್ಯಾಸ ಮಾಡುವ ಹಕ್ಕನ್ನು ಮೂಲಭೂತ ಮಾನವ ಹಕ್ಕು ಎಂದು ಗುರುತಿಸುತ್ತದೆ, ”ಎಂದು ಗೋಖಲೆ ಹೇಳಿದ್ದಾರೆ.

Similar News