ಕಾಫಿನಾಡಿನಲ್ಲಿ ಕಾಡಾನೆ ಹಾವಳಿ ತಡೆಯಲು ಡಿಜಿಟಲ್ ಪ್ಲೆಕ್ಸ್, SMS ಸೇವೆ, ಸೋಲಾರ್ ಫೆನ್ಸಿಂಗ್, ರೇಡಿಯೊ ಕಾಲರ್ ಯೋಜನೆ

Update: 2022-12-29 19:09 GMT

ಚಿಕ್ಕಮಗಳೂರು, ಡಿ.29: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಲೇ ಇದೆ. ಕಾಡಾನೆ ಹಾವಳಿಗೆ ಮೂಡಿಗೆರೆ ತಾಲೂಕಿನ ಅರಣ್ಯದಂಚಿನ ಗ್ರಾಮಗಳ ಜನರು ರೋಸಿಹೋಗಿದ್ದು, ಕಾಫಿ, ಅಡಿಕೆ, ಭತ್ತ ಬೆಳೆದ ಕೃಷಿಕರು ಕಾಡಾನೆಗಳ ಕಾಟಕ್ಕೆ ನಲುಗಿದ್ದಾರೆ.

ಕಾಡಾನೆಗಳ ನಿರಂತರ ಹಾವಳಿಯಿಂದಾಗಿ ಜಿಲ್ಲೆಯಲ್ಲಿ ಈ ವರ್ಷ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಸರಕಾರ ಹಾಗೂ ಅರಣ್ಯ ಇಲಾಖೆ ಯಾವುದೇ ಕ್ರಮವಹಿಸುತ್ತಿಲ್ಲ ಎಂಬ ಆರೋಪದ ಮಧ್ಯೆ ರಾಜ್ಯ ಸರಕಾರ ಮೂಡಿಗೆರೆ ಭಾಗದಲ್ಲಿ 5 ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲು ಆದೇಶಿಸಿದ್ದು, ಇಲಾಖೆ ಈಗಾಗಲೇ ಮೂರು ಕಾಡಾನೆಗಳನ್ನು ಸೆರೆ ಹಿಡಿದಿದೆ. ಈ ಮಧ್ಯೆ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳ ಹಾವಳಿ, ದಾಳಿ ನಿಯಂತ್ರಣಕ್ಕೆ ಸದ್ದಿಲ್ಲದೇ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದೆ.

ಕಾಡಾನೆಗಳ ಹಾವಳಿ ಕಾಫಿ ನಾಡಿನ ಜ್ವಲಂತ ಸಮಸ್ಯೆಯಾಗಿದ್ದು, ಮಾನವ - ಪ್ರಾಣಿ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಿತಿ ಮೀರುತ್ತಿದೆ. ಮಾನವ - ಪ್ರಾಣಿ ಸಂಘರ್ಷದಿಂದ ಕಾಡಾನೆಗಳೂ ಪ್ರಾಣ ಕಳೆದುಕೊಳ್ಳುತ್ತಿವೆ. ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಜಮೀನು ಸುತ್ತ ಅಕ್ರಮವಾಗಿ ವಿದ್ಯುತ್ ಬೇಲಿ ನಿರ್ಮಿಸಿಕೊಂಡ ಪರಿಣಾಮ ಹಲವು ಕಾಡಾನೆಗಳು ಅಸುನೀಗಿರುವ ಘಟನೆಗಳು ಆಗಾಗ್ಗೆ ಜಿಲ್ಲೆಯಲ್ಲಿ ವರದಿಯಾಗುತ್ತಿದೆ. ಆಹಾರ ಅರಸಿ ಕಾಡಂಚಿನ ಗ್ರಾಮಗಳ ಕಾಫಿ, ಅಡಿಕೆ, ಭತ್ತದ ಗದ್ದೆಗಳಿಗೆ ದಾಂಗುಡಿ ಇಡುತ್ತಿರುವ ಕಾಡಾನೆಗಳು ಮನುಷ್ಯರ ಮೇಲೆ ದಾಳಿ ಮಾಡಿ ಕೊಂದು ಹಾಕುತ್ತಿರುವ ದಾರುಣ ಘಟನೆಗಳು ಜಿಲ್ಲೆಯಲ್ಲಿ ಹೆಚ್ಚುತ್ತಿದೆ.

ಮಾನವ - ಪ್ರಾಣಿ ಸಂಘರ್ಷ ತಪ್ಪಿಸುವ ಸಲುವಾಗಿ ರೈತರು, ಕಾಫಿ, ಅಡಿಕೆ ಬೆಳೆಗಾರರು ಶಾಶ್ವತ ಯೋಜನೆಗಳ ಜಾರಿಗೆ ಆಗ್ರಹಿಸುತ್ತಿದ್ದು, ಆನೆಕಾರಿಡಾರ್‌ಗಳ ವ್ಯಾಪ್ತಿಯಲ್ಲಿ ರೈಲ್ವೇ ಕಂಬಿಗಳ ತಡೆಗೋಡೆ ನಿರ್ಮಿಸಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕಳೆದ ಬಜೆಟ್‌ನಲ್ಲಿ 100 ಕೋ. ರೂ. ಅನುದಾನ ವಿುೀಸಲಿಟ್ಟಿದೆಯಾದರೂ ಜಿಲ್ಲೆಯಲ್ಲಿ ರೈಲ್ವೇ ಕಂಬಿಗಳನ್ನು ಬಳಸಿ ತಡೆಗೋಡೆ ನಿರ್ಮಿಸುವಂತಹ ಯೋಜನೆ ಇದುವರೆಗೂ ಜಾರಿಯಾಗಿಲ್ಲ. ಈ ಯೋಜನೆ ಜಾರಿ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲೇ ಗೊಂದಲವಿದ್ದು, ಯೋಜನೆ ಜಿಲ್ಲೆಯಲ್ಲಿ ಕಾರ್ಯಸಾಧುವಲ್ಲ ಎನ್ನುತ್ತಿದ್ದಾರೆ.

ಕಾಡಾನೆಗಳ ಬಗ್ಗೆ ಎಚ್ಚರಿಕೆ ನೀಡಲು ಡಿಜಿಟಲ್ ಪ್ಲೆಕ್ಸ್ (ಸೈನ್‌ಬೋರ್ಡ್) ಅಳವಡಿಕೆ: ಕಾಡಾನೆಗಳ ದಾಳಿಯಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವುದರಿಂದ ಅವುಗಳ ನಿಯಂತ್ರಣಕ್ಕೆ ಶಾಶ್ವತ ಯೋಜನೆ ಜಾರಿ ಮಾಡಬೇಕೆಂಬ ಆಗ್ರಹವಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಗಳು ಶಾಶ್ವತ ಯೋಜನೆಗಳ ಜಾರಿಗೆ ಮುಂದಾಗದಿದ್ದರೂ ಆನೆ ಹಾವಳಿ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕೆಲ ನೂತನ ಯೋಜನೆಗಳನ್ನು ಜಾರಿ ಮಾಡುತ್ತಿದ್ದಾರೆ. ಈ ಯೋಜನೆಗಳ ಪೈಕಿ ಆನೆ ಹಾವಳಿ ಹೆಚ್ಚಿರುವ ಗ್ರಾಮಗಳ ವ್ಯಾಪ್ತಿಯಲ್ಲಿ ಡಿಜಿಟಲ್ ಪ್ಲೆಕ್ಸ್ ಅಳವಡಿಸುವ ಯೋಜನೆಗೆ ಅರಣ್ಯ ಇಲಾಖೆ ಈಗಾಗಲೇ ಚಾಲನೆ ನೀಡಿದ್ದು, ಈ ಯೋಜನೆ ಕಾಡಾನೆಗಳ ಇರುವಿಕೆ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹೇಳುತ್ತಿದ್ದಾರೆ.

ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳ ಪೈಕಿ ಮೂಡಿಗೆರೆ ತಾಲೂಕು ಅತೀ ಹೆಚ್ಚು ಕಾಡಾನೆಗಳ ಹಾವಳಿಯಿಂದ ನಲುಗಿದೆ. ಈ ಕಾರಣಕ್ಕೆ ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಈ ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಪ್ರವೃತ್ತವಾಗಿದ್ದು, ಕಾಡಾನೆಗಳ ಹಾವಳಿ ತೀವ್ರವಾಗಿರುವ ತಾಲೂಕಿನ ದೇವರುಂದ, ಕುಂದೂರು, ಹುಲ್ಲೇಮನೆ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅರಣ್ಯ ಇಲಾಖೆ ಇತ್ತೀಚೆಗೆ ಡಿಜಿಟಲ್ ಪ್ಲೆಕ್ಸ್‌ಗಳನ್ನು ಅಳವಡಿಸಿದೆ. ಈ ಗ್ರಾಮಗಳ ವ್ಯಾಪ್ತಿಯಲ್ಲಿನ ಜನರು ಅಥವಾ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳು ಕಂಡು ಬಂದ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಅವರು ನೀಡಿದ ಮಾಹಿತಿಯನ್ನು ಅರಣ್ಯ ಇಲಾಖೆಯ ತರಬೇತಿ ಪಡೆದ ಸಿಬ್ಬಂದಿ ಇಲಾಖೆಯ ಸರ್ವರ್ ಬಳಸಿಕೊಂಡು ವಿವಿಧ ಗ್ರಾಮಗಳಲ್ಲಿ ಅಳವಡಿಸಿರುವ ಡಿಜಿಟಲ್ ಪ್ಲೆಕ್ಸ್‌ಗಳ ಮೂಲಕ ಕಾಡಾನೆ ಇರುವ ಮಾಹಿತಿಯನ್ನು ಪ್ರಕಟಿಸುತ್ತಾರೆ. ಕಾಡಾನೆ ಎಲ್ಲಿದೆ, ಯಾವ ರಸ್ತೆಯಲ್ಲಿ ಸಂಚರಿಸುತ್ತಿದೆ, ಆನೆಗಳ ಸಂಖ್ಯೆ ಸೇರಿದಂತೆ ಕಾಡಾನೆಗಳ ಚಲನವಲನಗಳ ಬಗ್ಗೆ ಈ ಡಿಜಿಟಲ್ ಪ್ಲೆಕ್ಸ್ ನಲ್ಲಿ ಕನ್ನಡ ಭಾಷೆಯಲ್ಲೇ ಮಾಹಿತಿ ನೀಡಲಾಗುತ್ತದೆ. ಈ ಮಾಹಿತಿ ಗಮನಿಸುವ ಸಾರ್ವಜನಿಕರು, ರೈತರು, ಕಾರ್ಮಿಕರು ಎಚ್ಚರಿಕೆಯಿಂದ ತಿರುಗಾಡಲು ಸಾಧ್ಯವಾಗಲಿದೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಎಸ್‌ಎಂಎಸ್ ಸೇವೆ: ಕಾಡಾನೆಗಳ ಬಗ್ಗೆ ಕಾಡಂಚಿನ ಗ್ರಾಮಗಳ ಜನರಿಗೆ ಮಾಹಿತಿ ನೀಡುವ ಸಲುವಾಗಿ ಅರಣ್ಯ ಇಲಾಖೆ ರೂಪಿಸುವ ಯೋಜನೆಗಳಲ್ಲಿ ಎಸ್‌ಎಂಎಸ್ ಯೋಜನೆಯೂ ಒಂದಾಗಿದ್ದು, ಕಾಡಾನೆಗಳ ಹಾವಳಿ ತೀವ್ರವಾಗಿರುವ ಗ್ರಾಮಗಳಲ್ಲಿರುವ ಜನರ ಮೊಬೈಲ್ ಸಂಖ್ಯೆಗೆ ಕಾಡಾನೆಗಳ ಚಲನವಲನಗಳ ಬಗ್ಗೆ ಸಂದೇಶ ಕಳುಹಿಸುವ ಯೋಜನೆ ಇದಾಗಿದೆ. ಗ್ರಾಮೀಣ ಭಾಗದಲ್ಲಿ ಕಾಡಾನೆಗಳು ಕಂಡು ಬಂದ ತಕ್ಷಣ ಆ ಮಾಹಿತಿಯನ್ನು ಸಾರ್ವಜನಿಕರು ಅರಣ್ಯ ಇಲಾಖೆಗೆ ನೀಡಿದ ತಕ್ಷಣ ಅರಣ್ಯ ಇಲಾಖೆ ಸರ್ವರ್ ಮೂಲಕವೇ ಗ್ರಾಮೀಣ ಭಾಗದ ಜನರ ಮೊಬೈಲ್ ಸಂಖ್ಯೆಗಳಿಗೆ ಏಕಕಾಲದಲ್ಲಿ ಸಂದೇಶ ರವಾನೆಯಾಗಲಿದೆ.

ಆನೆ ಇರುವ ಜಾಗ, ರಸ್ತೆ, ತೋಟ ಸೇರಿದಂತೆ ಕಾಡಾನೆಗಳು ಇರುವ ಪ್ರದೇಶದ ಬಗ್ಗೆ ಜನರ ಮೊಬೈಲ್ ಸಂಖ್ಯೆಗೆ ಎಸ್‌ಎಮ್‌ಎಸ್ ರವಾನೆಯಾಗಲಿದ್ದು, ಇದನ್ನು ಗಮನಿಸಿ ಸಾರ್ವಜನಿಕರು ಎಚ್ಚರ ವಹಿಸಲು ಸಾಧ್ಯವಾಗಲಿದೆ. ಸದ್ಯ ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ಇರುವ ಗ್ರಾಮಗಳ ಸುಮಾರು 1 ಸಾವಿರ ಮಂದಿಯ ಮೊಬೈಲ್ ನಂಬರ್‌ಗಳನ್ನು ಸಂಗ್ರಹಿಸಿದ್ದು, ಸುಮಾರು 2 ಸಾವಿರ ಮಂದಿಯ ಮೊಬೈಲ್ ಸಂಖ್ಯೆ ಸಂಗ್ರಹಿಸುವ ಗುರಿ ಹೊಂದಿದೆ. ಈ ಯೋಜನೆ ಈಗಾಗಲೇ ಕಾರ್ಯಗತವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಿಕ್ಕಮಗಳೂರು ವೃತ್ತದ ಡಿಎಫ್‌ಒ ಕ್ರಾಂತಿ ವಾರ್ತಾಭಾರತಿಗೆ ತಿಳಿಸಿದ್ದಾರೆ.

ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸುವ ಯೋಜನೆಗೆ ಪ್ರಸ್ತಾವ ಸಲ್ಲಿಕೆ: ಕಾಡಾನೆಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳಿಗೆ ರೇಡಿಯೊ ಕಾಲರ್ ಯೋಜನೆ ಜಾರಿ ಸಂಬಂಧ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಈ ಯೋಜನೆಗೆ ಸರಕಾರ ಅನಮೋದನೆ ನೀಡಿದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಪದೇ ಪದೇ ದಾಳಿ ಮಾಡುವ ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗುತ್ತದೆ. ಈ ರೇಡಿಯೊ ಕಾಲರ್ ಮೂಲಕ ಪುಂಡಾನೆಗಳ ಚಲನ ವಲನಗಳ ಬಗ್ಗೆ ಅರಣ್ಯ ಇಲಾಖೆಗೆ ಸದಾ ಮಾಹಿತಿ ಸಿಗಲಿದ್ದು, ಕಾಡಿನಲ್ಲಿರುವ ಆನೆಗಳು ಗ್ರಾಮೀಣ ಭಾಗದತ್ತ ಮುಖ ಮಾಡಿದಾಗ ಅರಣ್ಯ ಇಲಾಖೆ ಸಂಬಂಧಿಸಿದ ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡಲು ಸಾಧ್ಯವಾಗಲಿದೆ. ಅಲ್ಲದೇ ಅರಣ್ಯ ಇಲಾಖೆ ಸಿಬ್ಬಂದಿ ಇಂತಹ ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆಯನ್ನು ಸುಲಭವಾಗಿ ಮಾಡಬಹುದಾಗಿದೆ.

ಸೋಲಾರ್ ಫೆನ್ಸಿಂಗ್: ಕಾಡಾನೆಗಳು ಅರಣ್ಯದಿಂದ ಗ್ರಾಮಗಳತ್ತ ಬರುವ ನಿರ್ದಿಷ್ಟ ಪ್ರದೇಶದಲ್ಲಿ ಸೋಲಾರ್ ವಿದ್ಯುತ್ ಬಳಸಿಕೊಂಡು ಬೇಲಿ ನಿರ್ಮಿಸುವ ಯೋಜನೆ ಇದಾಗಿದ್ದು, ಕಾಡಾನೆಗಳು ಗ್ರಾಮಗಳತ್ತ ಬರುವ ಸಂದರ್ಭದಲ್ಲಿ ಸೋಲಾರ್ ಫೆನ್ಸ್‌ಗಳು ಆನೆಗಳ ದೇಹಕ್ಕೆ ತಾಗಿ ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಶಾಕ್‌ಗೆ ಒಳಗಾಗಿ ಹೆದರಿಕೆಯಿಂದ ಹಿಂದಕ್ಕೆ ಹೋಗಲಿವೆ. ಜಿಲ್ಲೆಯ ದೇವರುಂದ, ಕುಂದೂರು ಭಾಗದ ಕೆಲ ಕಾಡಂಚಿನ ಗ್ರಾಮಗಳಲ್ಲಿ ಈಗಾಗಲೇ ಸೋಲಾರ್ ಫೆನ್ಸಿಂಗ್ ನಿರ್ಮಿಸಲಾಗಿದ್ದು, ಸಾರಗೋಡು ಭಾಗದಲ್ಲಿ ಈ ಯೋಜನೆ ಪ್ರಗತಿಯಲ್ಲಿದೆ.

ಕಾಫಿನಾಡಿನಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ಹಾವಳಿಯಿಂದ ಜನರು ರೋಸಿ ಹೋಗಿದ್ದು, ಜನರ ಆತಂಕ ನಿವಾರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೈಕಟ್ಟಿ ಕೂರದೇ ತಮ್ಮದೇ ಆದ ವಿನೂತನ ಯೋಜನೆಗಳನ್ನು ಜಾರಿ ಮಾಡುತ್ತಿರುವುದು ಜನರ ಆತಂಕ ಕಡಿಮೆಯಾಗಲು ಕಾರಣವಾಗಿದೆ.

ಕಾಡಾನೆಗಳ ಹಾವಳಿ ಮಲೆನಾಡು ಭಾಗದಲ್ಲಿ ಇತ್ತೀಚಿಗೆ ಹೆಚ್ಚಾಗಿದೆ. ಜನರು ಬೆಳೆಯನ್ನಲ್ಲದೇ ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಕಾಡಾನೆಗಳ ನಿಯಂತ್ರಣದ ಉದ್ದೇಶದಿಂದ ಅರಣ್ಯ ಇಲಾಖೆ ಹಲವು ಯೋಜನೆಗಳನ್ನು ಜಾರಿ ಮಾಡಲು ಶ್ರಮಿಸುತ್ತಿದೆ. ಡಿಜಿಟಲ್ ಪ್ಲೆಕ್ಸ್, ಎಸ್‌ಎಂಸ್ ಸೇವೆ, ಸೋಲಾರ್ ಫೆನ್ಸಿಂಗ್ ಯೋಜನೆ ಕಾಡಾನೆಗಲ ಹಾವಳಿ ನಿಯಂತ್ರಣ ನಿಟ್ಟಿನಲ್ಲಿ ಯಶಸ್ವಿಯಾಗುತ್ತಿದೆ. ಆನೆ ಕಾರಿಡಾರ್‌ಗಳಲ್ಲಿ ರೈಲ್ವೆ ಕಂಬಿಗಳಿಂದ ತಡೆಗೋಡೆ ನಿರ್ಮಿಸಲು ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿ ಮಾಡಲು ಕಷ್ಟವಿದೆ. ಈ ಕಾರಣಕ್ಕೆ ಬೇರೆ ವಿಧಾನಗಳ ಮೊರೆ ಹೋಗಲಾಗುತ್ತಿದೆ.

- ಕ್ರಾಂತಿ, ಡಿಎಫ್‌ಒ, ಚಿಕ್ಕಮಗಳೂರು

Similar News