ಕುವೆಂಪು ಚಿಂತನೆಯಲ್ಲಿ ಮಹಿಳೆ

Update: 2022-12-30 06:35 GMT

‘‘ನಿರ್ಲಿಪ್ತತೆ ನನ್ನ ಬಾಳಿನ ಮುಖ್ಯ ಲಕ್ಷಣವೆಂದರೆ ತಪ್ಪಾಗಲಾರದು’’ ಎಂದು ಹೇಳಿದರೂ ಕುವೆಂಪು ಅವರು ತಮ್ಮ ಕುಟುಂಬಕ್ಕೆ, ವಿಶೇಷವಾಗಿ ತಮ್ಮ ಸಹಧರ್ಮಿಣಿಗೆ ಹೇಗೆ ಅಂಟಿಕೊಂಡಿದ್ದರು ಎಂಬುದು ಅವರು ಸಹಧರ್ಮಿಣಿಯನ್ನು ಕುರಿತು ಬರೆದ ಹಲವು ಕವಿತೆಗಳು ತೋರಿಸಿಕೊಡುತ್ತವೆ. ಈ ಕುಟುಂಬ ಕುವೆಂಪು ಚಿಂತನೆಯನ್ನು ವಿಸ್ತರಿಸಿ ವಿಶ್ವಕುಟುಂಬಕ್ಕೆ ಚಾಚುವುದನ್ನೂ ನೋಡಬಹುದು. ಮಹಿಳೆಯರ ಬಗ್ಗೆ ಕುವೆಂಪು ತೋರಿದ ತೀವ್ರ ಕಾಳಜಿ, ಅವರ ಚಿಂತನೆಯ ಘನತೆಯನ್ನು ತೋರುವಂತಿದೆ.

ಕುವೆಂಪು ಅವರನ್ನು ರಸಋಷಿ ಎಂದು ಕರೆಯಲಾಗಿದೆ. ಅವರು ರಾಷ್ಟ್ರಕವಿಯೂ ಹೌದು. ಅವರ ಪ್ರತಿಭೆ ಬಹಳ ಎತ್ತರದ್ದು. ಅವರ ಭಾವ ಸಂಪತ್ತು, ಕಲ್ಪನಾ ವಿಲಾಸ, ವಿದ್ವತ್ತು, ಪಾಶ್ಚಾತ್ಯ ಮತ್ತು ಭಾರತೀಯ ತತ್ವದರ್ಶನವನ್ನು ಅರಿತಿರುವ ಮತ್ತು ಅವುಗಳ ಆಳ-ಅಗಲಗಳನ್ನು ವಿಮರ್ಶೆಗೊಡ್ಡುವ ಅವರ ಸಾಮರ್ಥ್ಯ, ಅವರ ಪ್ರತಿಭಾ ಶಕ್ತಿ ಇವು ಅಸಾಧಾರಣವಾದವು. 20ನೇ ಶತಮಾನದಲ್ಲಿ ಕನ್ನಡ ಸಾಹಿತ್ಯದ ವೈಚಾರಿಕ ಪರಂಪರೆಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಕೀರ್ತಿಯೂ ಅವರಿಗೇ ಸಲ್ಲುತ್ತದೆ. ಈ ವೈಚಾರಿಕ ಹಿನ್ನೆಲೆಯೇ ಅವರ ವ್ಯಕ್ತಿತ್ವಕ್ಕೊಂದು ಪ್ರಖರ ಬೆಳಕನ್ನೂ ನೀಡಿದೆ. ಈ ವೈಚಾರಿಕ ನಿಲುವು ಕುವೆಂಪು ಸಾಹಿತ್ಯಕ್ಕೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಆಯಾಮಗಳನ್ನು ತಂದುಕೊಟ್ಟಿದೆ. ಕುವೆಂಪು ಅವರನ್ನು 20ನೇ ಶತಮಾನದ ಮಹಾಕವಿಯನ್ನಾಗಿ ಮಾಡಿದ ಈ ನಿಲುವಿನ ಹಿಂದೆ ಬಹುದೊಡ್ಡ ದಾರ್ಶನಿಕರಿದ್ದಾರೆ. ಗಾಂಧೀಜಿಯವರ ಸರ್ವೋದಯ, ರಾಮಕೃಷ್ಣ ಪರಮಹಂಸರ ಸಮನ್ವಯ ಮತ್ತು ಅರವಿಂದರ ಪೂರ್ಣದೃಷ್ಟಿ ತತ್ವಗಳನ್ನು ಒಪ್ಪಿಕೊಂಡು ತಮ್ಮ ತತ್ವದರ್ಶನವನ್ನು ರೂಪಿಸಿಕೊಂಡವರು ಕುವೆಂಪು. ಅವರ ‘ಮನುಜ ಮತ, ವಿಶ್ವಪಥ’ ಕೇವಲ ಘೋಷಣೆಯಲ್ಲ. ಅದು ಕುವೆಂಪು ಅವರು ನಡೆದ ದಾರಿ. ಜಾತಿಮತ ಪಂಥಗಳನ್ನು ಮೀರಿದ, ದೇಶ ಭಾಷೆ ಸಮಾಜ ಸಂಸ್ಕೃತಿಗಳನ್ನು ದಾಟಿದ ಬಹುದೊಡ್ಡ ಚಿಂತನೆ. ಅನೇಕ ಕಾರಣಗಳಿಗಾಗಿ ಮನುಷ್ಯ ಮನುಷ್ಯರನ್ನು ದೂರಮಾಡುವ ಸಂಕುಚಿತ ನೋಟವನ್ನು ಕೊನೆಗಾಣಿಸಿ, ವಿಶ್ವಮಾನವ ತತ್ವದ ಮೇಲೆ ಎಲ್ಲ ಮಾನವರ ಹೃದಯಗಳನ್ನು ಬೆಸೆಯುವ ಮಹಾನ್ ತತ್ವಾದರ್ಶವೇ ಕುವೆಂಪು ಅವರ ಚಿಂತನೆಯಲ್ಲಿ ಅಡಗಿದೆ. ಈ ದರ್ಶನವೇ ಅವರ ಬದುಕನ್ನು, ಸಾಹಿತ್ಯವನ್ನು, ಚಿಂತನೆಯನ್ನು ಮುನ್ನಡೆಸಿದೆ; ಕನ್ನಡದ ಘನತೆಯನ್ನು ಮೇಲ್ಮಟ್ಟಕ್ಕೆ ಏರಿಸಿದೆ. ಮನುಷ್ಯರನ್ನು ಒಡೆದ, ಅಸಮಾನತೆಯನ್ನು ಹುಟ್ಟಿನ ಆಧಾರದ ಮೇಲೆ ಜಾರಿಗೆ ತಂದ ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆಯನ್ನು ಅತ್ಯಂತಿಕ ನೆಲೆಯಲ್ಲಿ ನಿಂತು ದಿಟ್ಟತನದಿಂದ ವಿರೋಧಿಸಿದ ಕವಿ ಕುವೆಂಪು. ಬ್ರಾಹ್ಮಣ್ಯವನ್ನು, ಪುರೋಹಿತಶಾಹಿಯನ್ನು, ವೈದಿಕ ನಿಲುವನ್ನು ಅತ್ಯಂತ ಕಠಿಣ ಪದಗಳಲ್ಲಿ ಟೀಕಿಸಿ ಪಟ್ಟಭದ್ರರ ಕೋಪಕ್ಕೆ ಗುರಿಯಾದವರೂ ಕುವೆಂಪುವೇ. ತಮ್ಮ ನಿಚ್ಚಳ ನಿಲುವಿನಿಂದ ಒಂದಿಂಚೂ ಹಿಂದೆ ಸರಿಯದೆ, ಕೊನೆಯವರೆಗೂ ಶೋಷಿತರ ಪರವಾಗಿಯೇ ನಿಂತ ಕುವೆಂಪು ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂದು ಸಾರಿದವರು. ಗಾಂಧೀಜಿಯವರು ಒಪ್ಪಿಕೊಂಡಿದ್ದ ವರ್ಣಾಶ್ರಮ ಪದ್ಧತಿ ಯನ್ನು ಕುವೆಂಪು ಒಪ್ಪಲಿಲ್ಲ. ಅವರ ವಿಕೇಂದ್ರೀಕರಣ, ಗುಡಿ ಕೈಗಾರಿಕೆಗಳು, ಸ್ವಾವಲಂಬನೆಯ ಚಿಂತನೆ ಮತ್ತು ಆ ಮೂಲಕ ಗಾಂಧೀಜಿಯ ಸರ್ವೋದಯವನ್ನು ಬೆಂಬಲಿಸಿದವರು ಕುವೆಂಪು.

ಸಮಾನತೆ ಎಂಬುದು ಕುವೆಂಪು ನಿಲುವಿನಲ್ಲಿ ಎಲ್ಲ ಮನುಷ್ಯರ ಸಮಾನತೆಯೇ. ಗಂಡು-ಹೆಣ್ಣು ಎಂಬ ಭೇದವನ್ನು ಅವರೆಂದೂ ಮಾಡಲಿಲ್ಲ. ಲಿಂಗ ತಾರತಮ್ಯ ಅವರ ಹತ್ತಿರವೂ ಸುಳಿಯಲಿಲ್ಲ. ಅವರ ಎರಡು ಮಹತ್ವದ ಕಾದಂಬರಿಗಳು-‘ಕಾನೂರು ಹೆಗ್ಗಡಿತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’-ಹೆಸರೇ ಸೂಚಿಸುವಂತೆ ಮಹಿಳೆಯರ ಪರವಾಗಿ ನಿಂತವು. ಅಷ್ಟೇಕೆ ಈ ಸೃಷ್ಟಿಯ ಜೀವ ಜೀವಗಳಲ್ಲಿಯೂ ಅವರು ಭೇದವನ್ನು ಎಣಿಸಲಿಲ್ಲ. ‘‘ಇಲ್ಲಿಯ (ಮಲೆಗಳಲ್ಲಿ ಮದುಮಗಳು ಕಾದಂಬರಿ)ವಿರಾಡ್ ದೃಷ್ಟಿಗೆ ಮೇಲುಕೀಳುಗಳಿಲ್ಲ; ಐತ, ಪೀಂಚಲು, ಮುಕುಂದಯ್ಯ, ಚಿನ್ನಮ್ಮ, ಹುಲಿಯ, ಓಡುಹುಳು-ಎಲ್ಲ ಒಂದೇ. ಲೋಕಸಂಗ್ರಹಕ್ಕೆ ಇಂದಿರಾಗಾಂಧಿಯವರು ಎಸಗಿದ ಅಂತರ್‌ರಾಷ್ಟ್ರೀಯ ಘಟನೆ ಎಷ್ಟು ಮುಖ್ಯವೋ ಓಡುಹುಳುವಿನ ಕಾರ್ಯವೂ ಅಷ್ಟೇ ಮುಖ್ಯ’’ ಎನ್ನುತ್ತಾರೆ. ಕುವೆಂಪು ಅವರ ಎರಡೂ ಕಾದಂಬರಿಗಳ ಶಕ್ತಿ ಕೇಂದ್ರಗಳು ಮಹಿಳೆಯರೇ. ತಮ್ಮ ಬದುಕು, ಚಿಂತನೆ ಮತ್ತು ಸಾಹಿತ್ಯಕ್ಕೆ ಮುಖ್ಯ ಪ್ರೇರಣೆ ಯಾರೆಂಬುದನ್ನು ಹೇಳುವಾಗ ಕುವೆಂಪು ಮೂರು ಹೆಸರುಗಳನ್ನು ಹೇಳುತ್ತಾರೆ. ಮೊದಲನೆಯದು ಗಾಂಧೀಜಿ. ಎರಡನೆಯದು- ತಮ್ಮ ‘ಬದುಕನ್ನು ಕತ್ತಲಿನಿಂದ ಬೆಳಕಿಗೆ ನಡೆಸಿದ’ ಸ್ವಾಮಿ ಸಿದ್ಧೇಶ್ವರಾನಂದರದು. ಮೂರನೆಯ ಹೆಸರು, ಅವರ ಪತ್ನಿ ಹೇಮಾವತಿಯವರದು. ಅವರನ್ನು ಕುವೆಂಪು ಹೆಂಡತಿ ಅಥವಾ ಪತ್ನಿ ಎಂದು ಕರೆಯದೆ ಸಹಧರ್ಮಿಣಿ ಎಂದು ಕರೆಯುವುದು ಕೂಡಾ ಅವರ ನಿಲುವನ್ನು ಸೂಚಿಸುವ ಪದವೇ ಆಗಿದೆ. ತಮ್ಮ ಸಹಧರ್ಮಿಣಿಯ ಬಗ್ಗೆ ಕುವೆಂಪು ಅವರು ಬರೆದ ಒಂದು ಕವಿತೆಯಲ್ಲಿ:

ಜಗವನಾಳುವ ತಾಯೆ ನನ್ನನಾಳುವ ಮಾಯೆ

ತಾನಾಗಿ ಬಂದಿಹಳು ನನ್ನ ಜಾಯೆ!

ಭೂಮೆ ತಾನಾಗಿಯೂ ಅಲ್ಪೆ, ತಾನೆನುವೋಲು

ಒಲಿದಪ್ಪಿಮಲಗಿಹಳು ಈ ಕೃಪಾಲು

ಸೂರ್ಯ ನಕ್ಷತ್ರಾದಿ ಭೂವ್ಯೋಮ ಸಾಗರವ

ಮಾಡಿ ಆಡಿಪ ದಿವ್ಯೆ ಆ ಸರ್ವಶಕ್ತೆ

ಇಲ್ಲಿ ಅಬಲೆಯೆ ಆಗಿ, ಒಲಿದ ಹೆಂಡತಿಯಾಗಿ

ಮಕ್ಕಳೊಂದಿಗೆ ಚಿಕ್ಕ ಸಂಸಾರಾನುರಕ್ತೆ

ಎಂದು ಹೇಳುತ್ತಾರೆ.

‘ಸ್ವರ್ಗದ್ವಾರದಿ ಯಕ್ಷಪ್ರಶ್ನೆ’ ಎನ್ನುವ ಇನ್ನೊಂದು ಕವಿತೆಯಲ್ಲಿ ಕವಿ ಸ್ವಪ್ನದಲ್ಲಿ ಸ್ವರ್ಗದ ಬಾಗಿಲ ಮುಂದೆ ಬಂದು ನಿಂತಾಗ ‘ಯಾರು?’ ಎನ್ನುವ ಧ್ವನಿ ಮೊಳಗುವುದು. ‘ಪುಟ್ಟಪ್ಪ’ ಎಂದು ಹೆಮ್ಮೆಯಲ್ಲಿ ಹೇಳಿದರೂ ಬಾಗಿಲು ತೆರೆಯುವುದಿಲ್ಲ. ತಾವು ಜಗತ್ಪ್ರಸಿದ್ಧ ಎಂದುಕೊಂಡಿದ್ದ ಅವರು ಮತ್ತೆ ‘ಕುವೆಂಪು’ ಎಂದು ಹೇಳುತ್ತಾರೆ. ಏನೇನೋ ಉಪಾದಿಗಳನ್ನು ಹೇಳಿದರೂ ತೆಗೆಯದ ಬಾಗಿಲು ಕೊನೆಯಲ್ಲಿ, ‘ನಾನು, ನಾನು, ನಾನು ಹೇಮೀ ಗಂಡ’ ಎಂದಾಗ ಆ ಬಾಗಿಲು ತೆರೆದುಕೊಳ್ಳುತ್ತದೆ.

 ಇದೊಂದು ಕನಸಿನಂತೆ, ತಮಾಷೆಯಂತೆ ಕಂಡರೂ, ಕವಿಯ ನಿಲುವನ್ನು ಈ ಕವಿತೆ ಪ್ರಕಟಿಸುತ್ತದೆ.

‘‘ಯಾವೊಬ್ಬ ವ್ಯಕ್ತಿಯೂ ಪೂರ್ತಿ ಪುರುಷನೂ ಅಲ್ಲ, ಪೂರ್ತಿ ಸ್ತ್ರೀಯೂ ಅಲ್ಲ. ಇದರಿಂದಲೇ ಅರ್ಧನಾರೀಶ್ವರನ ಕಲ್ಪನೆ ಬಂದದ್ದು. ಪರಮಹಂಸರು ಯಶೋಧರೆಯಂತೆ ಸೀರೆ ಉಟ್ಟುಕೊಂಡು ಕೃಷ್ಣನನ್ನು ಪ್ರೀತಿಸಿದ್ದು ಮಾತ್ರವಲ್ಲ, ತಮಗೆ ಮುಟ್ಟು ಕೂಡಾ ಆಗ್ತದೆ ಎಂದದ್ದುಂಟು. ಸೃಷ್ಟಿ ಶಕ್ತಿಯೇ ಸರಸ್ವತಿ. ಸಕಲ ವಿದ್ಯೆಗಳೂ ಅವಳ ಅಂಶಗಳೇ. ..’’ (1985ರಲ್ಲಿ ದೇಜಗೌ ಅವರಿಗೆ ನೀಡಿದ ಸಂದರ್ಶನ)

‘‘ಗಂಡಸು ಮೇಲು, ಹೆಂಗಸು ಕೀಳೆಂಬ ಭಾವನೆಯನ್ನು ನಾನು ಕನಸಿನಲ್ಲಿಯೂ ಒಪ್ಪುವವನಲ್ಲ. ಅವರಿಗೆ ಆತ್ಮ ಸ್ವಾತಂತ್ರ್ಯ ಸಂಪೂರ್ಣವಾಗಿ ಬೇಕು. ಆಧ್ಯಾತ್ಮಿಕವಾಗಿ ಪುರುಷನಿಗಿಂತ ಸ್ತ್ರೀ ಹೆಚ್ಚು ವಿಕಾಸಗೊಂಡಿದ್ದಾಳೆಂದೇ ನನ್ನ ಭಾವನೆ

ನನ್ನ ದೃಷ್ಟಿಯಲ್ಲಿ ಹೆಣ್ಣು ಕೇವಲ ಮಾನುಷಿಯಲ್ಲ; ಅಬಲೆಯೂ ಅಲ್ಲ; ಅವಳೊಂದು ಮಹಾಶಕ್ತಿ’’ ಎಂದು ಕುವೆಂಪು ಹೇಳುತ್ತಾರೆ.

ಇಂಥ ನಿಲುವಿನ, ಗಾಢ ನಂಬಿಕೆಯ ಕುವೆಂಪು ತಮ್ಮ ಸಾಹಿತ್ಯ ಸೃಷ್ಟಿಯಲ್ಲಿಯೂ ಇದೇ ನಿಲುವು ನಂಬಿಕೆಗಳಿಗೆ ಬದ್ಧರಾಗಿರುವುದನ್ನು ಗುರುತಿಸಬಹುದು: ‘ಶ್ರೀ ರಾಮಾಯಣ ದರ್ಶನಂ’ ಕೃತಿಯಲ್ಲಿ ಮಂಥರೆಯ ಪಾತ್ರವನ್ನು ಗ್ರಹಿಸಿದ, ಚಿತ್ರಿಸಿದ ರೀತಿಯನ್ನು ಹಲವರು ಗುರುತಿಸಿದ್ದಾರೆ. ಶ್ರೀರಾಮನ ವನವಾಸಕ್ಕೆ, ಅಯೋಧ್ಯೆಯ ಅಂದಿನ ದುರಂತಕ್ಕೆ ಮಂಥರೆ ಕಾರಣಳು ಎನ್ನುವ ಮಾತನ್ನು ಕುವೆಂಪು ಒಪ್ಪುವುದಿಲ್ಲ. ಅದನ್ನು ‘ಲೌಕಿಕದ ಮಾತು’ ಎಂದು ತಳ್ಳಿಹಾಕುತ್ತಾರೆ. ಶ್ರೀರಾಮನ ನಿರೀಕ್ಷಣಾ ಕುತೂಹಲಿಯಾಗಿದ್ದ ಭರತನನ್ನು ಸಂತೈಸಲು ಮಂಥರೆ ಸುರಾಂಗನಾ ರೂಪದಲ್ಲಿ ಎದುರಾಗಿ ನುಡಿಯುತ್ತಾಳೆ- ‘ ವತ್ಸ, ಕಾರಣಳಲ್ತು; ಬರಿ ಕರಣಮಾ ಕುಬ್ಜೆ./ ಮಂಥರಾ ಪ್ರೇಮದಂತಃಕರಣಮಂ ಕಾಣೆ/ ನೀಂ.’ ಶ್ರೀರಾಮನನ್ನು ಕಾಡಿಗೆ ಕಳುಹಿಸುವ ಸಂದರ್ಭದಲ್ಲಿ ಕೌಸಲ್ಯೆ ಅನುಭವಿಸಿದ ಸಂಕಟದ ತೀವ್ರತೆಯನ್ನು ವರ್ಣಿಸುವಾಗ ತಮಗೆ ತಮ್ಮ ತಾಯಿಯ ನೆನಪು ಬಂದಿತೆಂದು ಕುವೆಂಪು ಹೇಳುತ್ತಾರೆ. ಹಾಗೆಯೇ, ‘ಕಾನೂರು ಹೆಗ್ಗಡಿತಿ’ಯ ನಾಗಮ್ಮ ಮತ್ತು ‘ಮಲೆಗಳಲ್ಲಿ ಮದುಮಗಳು’ವಿನ ದಾನಮ್ಮ ಹೆಗ್ಗಡಿತಿಯರ ಮತ್ತು ಚಿನ್ನಮ್ಮನ ಅಜ್ಜಿಯ ಪಾತ್ರ ರಚನೆಯಲ್ಲಿಯೂ ತಾಯಿಯ ನೆನಪು ಮರುಕಳಿಸಿತು ಎನ್ನುತ್ತಾರೆ ಕುವೆಂಪು.

‘‘ನಿರ್ಲಿಪ್ತತೆ ನನ್ನ ಬಾಳಿನ ಮುಖ್ಯ ಲಕ್ಷಣವೆಂದರೆ ತಪ್ಪಾಗಲಾರದು’’ ಎಂದು ಹೇಳಿದರೂ ಕುವೆಂಪು ಅವರು ತಮ್ಮ ಕುಟುಂಬಕ್ಕೆ, ವಿಶೇಷವಾಗಿ ತಮ್ಮ ಸಹಧರ್ಮಿಣಿಗೆ ಹೇಗೆ ಅಂಟಿಕೊಂಡಿದ್ದರು ಎಂಬುದು ಅವರು ಸಹಧರ್ಮಿಣಿಯನ್ನು ಕುರಿತು ಬರೆದ ಹಲವು ಕವಿತೆಗಳು ತೋರಿಸಿಕೊಡುತ್ತವೆ. ಈ ಕುಟುಂಬ ಕುವೆಂಪು ಚಿಂತನೆಯನ್ನು ವಿಸ್ತರಿಸಿ ವಿಶ್ವಕುಟುಂಬಕ್ಕೆ ಚಾಚುವುದನ್ನೂ ನೋಡಬಹುದು. ಮಹಿಳೆಯರ ಬಗ್ಗೆ ಕುವೆಂಪು ತೋರಿದ ತೀವ್ರ ಕಾಳಜಿ, ಅವರ ಚಿಂತನೆಯ ಘನತೆಯನ್ನು ತೋರುವಂತಿದೆ.

‘ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’ ‘ನೀರೆಲ್ಲವೂ ತೀರ್ಥ’ ಎಂಬ ವಿಚಾರಧಾರೆಯ ಕುವೆಂಪು ಸೃಷ್ಟಿಯಲ್ಲಿ ಜಡ-ಚೇತನ ಎಂಬ ಭೇದವನ್ನು ಒಪ್ಪುವುದೇ ಇಲ್ಲ. ಚೇತನ ಎಚ್ಚರದ ಸ್ಥಿತಿಯಲ್ಲಿಲ್ಲದಾಗ ಜಡದಂತೆ ಕಾಣಬಹುದು, ಜಡ ಎನ್ನುವುದು ಇಲ್ಲವೇ ಇಲ್ಲ ಎನ್ನುವ ತಾತ್ವಿಕ ದರ್ಶನ ಅವರದು. ಈ ದರ್ಶನವೇ ಅವರ ಕೃತಿಯಲ್ಲಿ ಮುಖ ಪಡೆದಿದೆ. ‘ಶ್ರೀ ರಾಮಾಯಣ ದರ್ಶನಂ’ನಲ್ಲಿ ಅಹಲ್ಯೆಯ ಪ್ರಸಂಗವನ್ನು ಚಿತ್ರಿಸುವಾಗಲೂ ಕುವೆಂಪು ಈ ನಂಬಿಕೆಯನ್ನು ಪ್ರಕಟಿಸುತ್ತಾರೆ:

 ‘ಬೆಂಗದಿರನುರಿಗೆ ಕರ್ಪೂರಶಿಲೆಯಂತೆವೋಲ್?

ದ್ರವಿಸಿತಾ ಕರ್ಬಂಡೆ: ದಿವ್ಯ ಮಾಯಾ ಶಿಲ್ಪಿ

ಕಲ್ಪನಾ ದೇವಿಯಂ ಕಲ್ಲ ಸೆರೆಯಿಂ ಬಿಡಿಸಿ

ಕೃತಿಸಿದನೆನಲ್?, ರಘು ತನೂಜನಡಿದಾವರೆಗೆ

ಹಣೆಮಣಿದು ನಿಂತುದೊರ್ವ ತಪಸ್ವಿನೀ ವಿಗ್ರಹಂ.’

ಮಹಿಳೆಯರನ್ನು ಸಮಾನತೆಯಿಂದ, ಗೌರವದಿಂದ ಕಾಣುವ ಕುವೆಂಪು ಈ ಚಿತ್ರವನ್ನು ಇಲ್ಲಿಗೇ ನಿಲ್ಲಿಸುವುದಿಲ್ಲ. ಅವರು ಮುಂದಿನ ಸಾಲುಗಳಲ್ಲಿ ಕಾಣಿಸುವ ಚಿತ್ರ ಕುವೆಂಪು ಚಿಂತನೆಯನ್ನು ಮುಂದೊಯ್ಯುತ್ತದೆ:

‘ಪೆತ್ತ ತಾಯಂ ಮತ್ತೆ ತಾನೆ ಪಡೆದಂತಾಗಿ

ನಮಿಸಿದನೊ ರಘುಜನುಂ ಗೌತಮ ಸತಿಯ ಪದಕೆ,

ತನ್ನ ಕಾವ್ಯಕೆ ತಾಂ ಮಹಾಕವಿ ಮಣಿವಂತೆ!’

 ಕುವೆಂಪು ಅವರ ಸೃಜನಶೀಲ, ಸೃಜನೇತರ ಬರಹಗಳು, ಚಿಂತನೆ, ಭಾಷಣ, ಮಾತುಕತೆ, ಬದುಕು, ನಡೆ ಹೀಗೆ ಎಲ್ಲವನ್ನೂ ಆವರಿಸಿಕೊಂಡಿದ್ದ ಅವರ ಒಟ್ಟು ನಡೆಯಲ್ಲಿ ಮಹಿಳೆ ಎಂದೂ ಉಪೇಕ್ಷೆಗೆ, ಅವಗಣನೆಗೆ ಒಳಗಾಗಿಲ್ಲ. ಇದು ಕುವೆಂಪು ಅವರ ವ್ಯಕ್ತಿತ್ವವನ್ನು ಮೇಲಕ್ಕೆ ಕೊಂಡೊಯ್ಯುವ ಮುಖ್ಯ ಅಂಶವಾಗಿದೆ.

Similar News