ಸಂಘಪರಿವಾರದ ಮುನಿಸು ಎದುರಿಸಬೇಕಾಗಿದೆಯೇ ಈಶ್ವರಪ್ಪ?

Update: 2022-12-30 06:48 GMT

ಸಂಘಪರಿವಾರದ ವಿಶ್ವಾಸ ಕಳೆದುಕೊಂಡು ಆತಂಕದಲ್ಲಿದ್ದಾರೆಯೇ ಈಶ್ವರಪ್ಪ? ಮುಳುವಾಗಲಿದೆಯೇ ಬೇಕಾಬಿಟ್ಟಿ ಮಾತು, 40 ಪರ್ಸೆಂಟ್ ಕಮಿಷನ್ ಆರೋಪ? ಬಿಎಸ್‌ವೈ ಬೆಂಬಲವಿದ್ದರೇನೇ ಈಶ್ವರಪ್ಪಆಟ ಸಾಗೋದು ಎಂಬ ಮಾತು ನಿಜವೇ? ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಪೈಪೋಟಿ ಮಧ್ಯೆ ಈಶ್ವರಪ್ಪಭವಿಷ್ಯವೇನು?

ಶಿವಮೊಗ್ಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಪೈಪೋಟಿ ಶುರುವಾಗಿದೆ. ಇದು ಹಾಲಿ ಶಾಸಕ ಕೆ.ಎಸ್. ಈಶ್ವರಪ್ಪನವರ ಆತಂಕಕ್ಕೆ ಕಾರಣವಾಗಿದೆ. ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮತ್ತು ಎಸ್.ದತ್ತಾತ್ರಿ, ಎಸ್.ಎಸ್. ಜ್ಯೋತಿ ಪ್ರಕಾಶ್, ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಡಾ.ಧನಂಜಯ ಸರ್ಜಿ ಸೇರಿದಂತೆ ಪ್ರಭಾವಿ ಮುಖಂಡರ ಹೆಸರುಗಳು ಸೇರ್ಪಡೆ ಆಗಿರುವುದು ಕುತೂಹಲ ಮೂಡಿಸಿದೆ. ಇದು ಈಶ್ವರಪ್ಪಅವರನ್ನು ಆತಂಕಕ್ಕೆ ದೂಡಿದೆ.

ಸ್ಥಳೀಯ ಹಿಂದುತ್ವ ಸಂಘಟನೆ ಹಾಗೂ ಬಿಜೆಪಿಯ ಒಂದು ವರ್ಗಕ್ಕೆ ಈಶ್ವರಪ್ಪಬಗ್ಗೆ ಅಸಮಾಧಾನ ಹಾಗೂ ಆಕ್ರೋಶವಿದೆ. ಈಶ್ವರಪ್ಪನವರ ವಿಚಿತ್ರ ನಡವಳಿಕೆ ಮತ್ತು ಅಸಂಬದ್ಧ ಮಾತುಗಾರಿಕೆಯಿಂದ ಸಂಘ ಪರಿವಾರಕ್ಕೂ ಮುಜುಗರ ಆಗುತ್ತಿದೆ ಎಂಬ ಮಾತುಗಳಿವೆ.

ಇನ್ನೊಂದೆಡೆ, ಈಶ್ವರಪ್ಪವಿರುದ್ಧ 40 ಪರ್ಸೆಂಟ್ ಆರೋಪ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ, ಇತ್ತೀಚೆಗೆ ನಡೆದ ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಇವೆಲ್ಲವೂ ಒಟ್ಟಿಗೇ ಈಶ್ವರಪ್ಪನವರನ್ನು ಇಕ್ಕಟ್ಟಿಗೆ ಸಿಲುಕಿಸಿದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ. ಹರ್ಷನ ಕುಟುಂಬದವರು ಈಶ್ವರಪ್ಪಬಗ್ಗೆ ಅಸಮಾಧಾನದಿಂದ ಮಾತನಾಡುತ್ತಿರುವುದು ಕೂಡ ಅವರಿಗೆ ಮುಳುವಾಗಬಹುದಾದ ಸಾಧ್ಯತೆಯಿದೆ. ವಯಸ್ಸಿನ ಕಾರಣದಿಂದಲೂ ಈಶ್ವರಪ್ಪಅವರಿಗೆ ಟಿಕೆಟ್ ಸಿಗಲಾರದು ಎಂಬ ಲೆಕ್ಕಾಚಾರ ಬಿಜೆಪಿ ಬಿಡಾರದಲ್ಲಿ ಜೋರಾಗಿದೆ.

ಯಡಿಯೂಪ್ಪನವರ ಸಹಕಾರವಿಲ್ಲದೆ ಈಶ್ವರಪ್ಪಶಾಸಕರಾಗಿ ಆಯ್ಕೆಯಾಗಲು ಸಾಧ್ಯವೇ ಇಲ್ಲವೆಂಬ ಅಭಿಪ್ರಾಯ ಜಿಲ್ಲೆಯಲ್ಲಿದೆ. 2008ರಲ್ಲಿ ಯಡಿಯೂರಪ್ಪತಮ್ಮ ಸರಕಾರದಲ್ಲಿ ಈಶ್ವರಪ್ಪರನ್ನು ವಿದ್ಯುತ್ ಇಲಾಖೆಯ ಮಂತ್ರಿ ಮಾಡಿದರು. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಈಶ್ವರಪ್ಪರನ್ನು ಉಪ ಮುಖ್ಯಮಂತ್ರಿ ಮಾಡಲಾಯಿತು. ಯಡಿಯೂರಪ್ಪವಿರೋಧಿಯೆಂಬ ಕಾರಣಕ್ಕೆ ಸಂಘ ಪರಿವಾರದವರು ಈಶ್ವರಪ್ಪನವರಿಗೆ ಆಯಕಟ್ಟಿನ ಸ್ಥಾನಮಾನ ನೀಡುತ್ತಾ ಹೋದರು. ಯಡಿಯೂರಪ್ಪವಿರುದ್ಧ ಈಶ್ವರಪ್ಪಅದೆಷ್ಟೇ ಮಸಲತ್ತು ಮಾಡಿದರೂ, ಯಡಿಯೂಪ್ಪನವರ ಸಹಕಾರವಿಲ್ಲದೆ ಶಾಸಕರಾಗಿ ಆಯ್ಕೆಯಾಗಲು ಸಾಧ್ಯವೇ ಇಲ್ಲವೆಂಬ ವಾದವನ್ನು ಪುಷ್ಟೀಕರಿಸುತ್ತಿದೆ, 2013ರ ವಿಧಾನಸಭಾ ಚುನಾವಣೆಯ ಫಲಿತಾಂಶ.

2013ರ ಅಸೆಂಬ್ಲಿ ಚುನಾವಣೆಗೆ ಮೊದಲು ಯಡಿಯೂರಪ್ಪಬಿಜೆಪಿ ವಿರುದ್ಧ ಬಂಡೆದ್ದು ಕೆಜೆಪಿ ಕಟ್ಟಿದರು. ತನಗೆ ಬಿಜೆಪಿಯಲ್ಲಿ ಮಗ್ಗಲು ಮುಳ್ಳಾಗಿದ್ದ ಈಶ್ವರಪ್ಪನವರನ್ನು ಸೋಲಿಸುವ ಹಠ ಯಡಿಯೂರಪ್ಪತೊಟ್ಟಿದ್ದರೆನ್ನುವುದು ಜಿಲ್ಲೆಯ ರಾಜಕಾರಣದಲ್ಲಿ ಗೊತ್ತಿರುವ ಸಂಗತಿ.

2008ರಲ್ಲೇ ಈಶ್ವರಪ್ಪನವರಿಗೆ ಬಿಜೆಪಿ ಟಿಕೆಟ್ ತಪ್ಪಿಸಿ ಎಸ್.ರುದ್ರೇಗೌಡರಿಗೆ ಅಭ್ಯರ್ಥಿ ಮಾಡುವ ಯೋಚನೆ ಯಡಿಯೂರಪ್ಪನವರದ್ದಾಗಿತ್ತು. 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಲಿಂಗಾಯತ ಜನಾಂಗದ ಪ್ರಭಾವಿ ನಾಯಕ ರುದ್ರೇಗೌಡ ಅಖಾಡಕ್ಕಿಳಿದರು. ಬ್ರಾಹ್ಮಣ ಸಮುದಾಯದ ಕೆ.ಬಿ.ಪ್ರಸನ್ನಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿತ್ತು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಈಶ್ವರಪ್ಪ, ಜೆಡಿಎಸ್ ಅಭ್ಯರ್ಥಿಯಾಗಿ ಕುರುಬ ಸಮುದಾಯದ ಎಂ. ಶ್ರೀಕಾಂತ್ ಇದ್ದರು. ಈ ಚತುಷ್ಕೋನ ಸ್ಪರ್ಧೆಯಲ್ಲಿ ಕಾಂಗ್ರೆಸ್‌ನ ಕೆ.ಬಿ. ಪ್ರಸನ್ನಕುಮಾರ್ (39,355), ಸಮೀಪದ ಪ್ರತಿಸ್ಪರ್ಧಿ ಕೆಜೆಪಿಯ ರುದ್ರೇಗೌಡರನ್ನು (39,077) ಕೇವಲ 278 ಮತದಿಂದ ಸೋಲಿಸಿ ಶಾಸನಸಭೆಗೆ ಆಯ್ಕೆಯಾದರೆ, ಈಶ್ವರಪ್ಪ(33,462) ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಅಲ್ಲಿಗೆ ಯಡಿಯೂರಪ್ಪ ಇಲ್ಲದೆ ಈಶ್ವರಪ್ಪನವರಿಗೆ ಕ್ಷೇತ್ರದಲ್ಲಿ ಸ್ವತಂತ್ರ ಅಸ್ತಿತ್ವ ಇಲ್ಲವೆಂಬುದನ್ನು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.

2018ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಮಲೆನಾಡಿನಲ್ಲಾದ ದೊಡ್ಡಮಟ್ಟದ ಕೋಮು ಧ್ರುವೀಕರಣ ಮತ್ತು ಬಿಜೆಪಿಗೆ ಮರಳಿದ್ದ ಯಡಿಯೂರಪ್ಪಪ್ರಭಾವದಿಂದ ಈಶ್ವರಪ್ಪನವರು 1,04,027 ಮತ ಪಡೆದುಕೊಂಡರು. ಈಶ್ವರಪ್ಪಕಾಂಗ್ರೆಸ್‌ನ ಕೆ.ಬಿ. ಪ್ರಸನ್ನಕುಮಾರ್‌ರನ್ನು 46,107 ಮತಗಳ ಅಂತರದಿಂದ ಸೋಲಿಸಿ ಶಾಸಕರಾದರು.

ಈಶ್ವರಪ್ಪತಮಗೆ ಟಿಕೆಟ್ ತಪ್ಪಿದರೂ ಜಿ.ಪಂ. ಮಾಜಿ ಸದಸ್ಯನಾಗಿರುವ ಮಗ ಕಾಂತೇಶ್‌ಗೆ ಟಿಕೆಟ್ ಕೇಳುತ್ತಿದ್ದಾರೆಂಬ ಸುದ್ದಿಯಿದೆ. ಯಡಿಯೂರಪ್ಪನವರ ಮಗನಿಗೆ ಶಿಕಾರಿಪುರದಲ್ಲಿ ಅವಕಾಶ ಕೊಡುವುದಾದರೆ ತನ್ನ ಮಗನಿಗೂ ಶಿವಮೊಗ್ಗದಲ್ಲಿ ಟಿಕೆಟ್ ನೀಡುವಂತೆ ಕೇಳಿದ್ದಾರೆ ಎನ್ನುತ್ತಿವೆ ಭಾಜಪ ಮೂಲಗಳು. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಹೊಸದೇನಲ್ಲ. ಹೀಗಾಗಿ ಉಳಿದವರಿಗೆ ಅನ್ವಯಿಸುವ ನ್ಯಾಯವೇ ನನಗೂ ಅನ್ವಯಿಸುತ್ತದೆ ಎಂಬುದು ಈಶ್ವರಪ್ಪಮಾತು.

ಈಗಾಗಲೇ ಕೆ.ಇ. ಕಾಂತೇಶ್ ಸಕ್ರಿಯವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ತಮ್ಮ ತಂದೆ ಈಶ್ವರಪ್ಪಅವರ ಪ್ರಭಾವ ಮತ್ತು ಸಂಪರ್ಕವನ್ನು ಉಳಿಸಿ, ಬೆಳೆಸಿಕೊಳ್ಳುತ್ತಿದ್ದಾರೆ. ಜಿ.ಪಂ. ಸದಸ್ಯರಾಗಿ ಆಯ್ಕೆಯಾಗಿ ಒಂದು ಅವಧಿಯಲ್ಲಿ ಕೆಲಸ ಮಾಡುವ ಮೂಲಕ ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ.

ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರಾದ ಜ್ಯೋತಿ ಪ್ರಕಾಶ್, ಎಂಎಲ್‌ಸಿ ಆಯನೂರು ಮಂಜುನಾಥ್, ಖ್ಯಾತ ವೈದ್ಯ ಡಾ. ಧನಂಜಯ ಸರ್ಜಿ ಟಿಕೆಟ್ ಕೊಡುವಂತೆ ಸಂಘದ ಪ್ರಮುಖರಿಗೆ ದುಂಬಾಲು ಬಿದ್ದಿದ್ದಾರಂತೆ. ಅಲ್ಲದೆ ಈ ಬಾರಿ ಬ್ರಾಹ್ಮಣ ಸಮುದಾಯದ ಎಸ್. ದತ್ತಾತ್ರಿ ಕೂಡ ಟಿಕೆಟ್ ಆಕಾಂಕ್ಷಿ. ಅತಿ ಹೆಚ್ಚು ಬ್ರಾಹ್ಮಣರಿರುವ ವಿಧಾನಸಭಾ ಕ್ಷೇತ್ರದಲ್ಲಿ ಶಿವಮೊಗ್ಗವೂ ಒಂದು. ಹೀಗಾಗಿ ಈಶ್ವರಪ್ಪನವರಿಗೆ ಟಿಕೆಟ್ ನೀಡುವುದಿಲ್ಲ ಎಂದಾದರೆ ಅದು ತಮಗೆ ಸಿಗಬೇಕು ಎಂದು ದತ್ತಾತ್ರಿ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವುದು ಮಾಜಿ ಸಚಿವ ಈಶ್ವರಪ್ಪನವರ ಆತಂಕಕ್ಕೆ ಕಾರಣವಾಗಿದೆ. ಬಿಜೆಪಿ ಹೈಕಮಾಂಡ್ ಈ ಬಾರಿ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕೆ.ಎಸ್.ಈಶ್ವರಪ್ಪ

ಕೆ.ಎಸ್.ಈಶ್ವರಪ್ಪ ಬಿಜೆಪಿಯ ಹಿರಿಯ ನಾಯಕ. ಕುರುಬ ಸಮುದಾಯದ ಇವರು ಮಂತ್ರಿಯಾಗಿ, ಡಿಸಿಎಂ ಆಗಿ ಪ್ರಭಾವಿ ಎನ್ನಿಸಿಕೊಂಡರು. ಬೊಮ್ಮಾಯಿ ಸಂಪುಟದಲ್ಲಿಯೂ ಸಚಿವರಾಗಿದ್ದ ಈಶ್ವರಪ್ಪ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ರಾಜೀನಾಮೆ ನೀಡಬೇಕಾಯಿತು.

Similar News