×
Ad

ಹಿರ್ಗಾನ: ಕಾರು ಬೈಕ್ ಮುಖಾಮುಖಿ ಡಿಕ್ಕಿ; ಸವಾರ ಸಹಿತ ಮಗು ಗಂಭೀರ

Update: 2022-12-30 16:36 IST

ಕಾರ್ಕಳ: ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಹಾಗೂ ಎರಡು ವರ್ಷದ ಮಗು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಮಂಗಿಲಾರು ಕ್ರಾಸ್ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಗಾಯಗೊಂಡ ಬೈಕ್ ಸವಾರ ಅಂಡಾರು ಗ್ರಾಮದ ಕೊಂದಲ್ಕೆ ನಿವಾಸಿ ನಿತ್ಯಾನಂದ ಕುಲಾಲ್( 32) ಎಂದು ತಿಳಿದು ಬಂದಿದೆ. ಇವರ ಜತೆ ಬೈಕಿನಲ್ಲಿದ್ದ ಮೂರು ವರ್ಷದ ಮಗು ಕೂಡ ಗಂಭೀರವಾಗಿ ಗಾಯಗೊಂಡಿದೆ. ಗಾಯಗೊಂಡವರನ್ನು ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್ ಸವಾರ ನಿತ್ಯಾನಂದ ತನ್ನ ಸಹೋದರಿ ಮಗುವನ್ನು ಕೂರಿಸಿಕೊಂಡು ಕಾರ್ಕಳದಿಂದ ಅಂಡಾರು ಕಡೆಗೆ ಹೋಗುತ್ತಿದ್ದಾಗ ಹೆಬ್ರಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಮಾರುತಿ ಬಲೆನೊ ಕಾರು ಚಾಲಕ ಎದುರಿನಲ್ಲಿ ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಬಲಗಡೆ ತಿರುಗಿಸಿದಾಗ ನಿತ್ಯಾನಂದ ಕುಲಾಲ್ ಬೈಕಿಗೆ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಕಾರು ಡಿಕ್ಕಿಯ ರಭಸಕ್ಕೆ ಬೈಕ್ ಅಪ್ಪಚ್ಚಿಯಾಗಿದ್ದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ.

ಸರಣಿ ಅಪಘಾತ ತಪ್ಪಿಸಲು ಹೋಗಿ ನಡೆಯಿತೇ ದುರಂತ?

ಹೆಬ್ರಿ ಕಡೆಯಿಂದ ನಾಲ್ಕು ವಾಹನಗಳು ಒಟ್ಟಿಗೆ ಸಾಗುತ್ತಿದ್ದಾಗ ಎದುರಿನ ವಾಹನ ಎಡಕ್ಕೆ ತಿರುವು ಪಡೆಯಲು ತಿರುಗಿದಾಗ ಹಿಂದಿನಿಂದ ವೇಗವಾಗಿ ಬರುತ್ತಿದ್ದ ವಾಹನ ಡಿಕ್ಕಿಯಾಗಿದೆ ಇದೇವೆಳೆ ಈ ವಾಹನದ ಹಿಂದಿನಿಂದ ಬರುತ್ತಿದ್ದ ವಾಹನ ಕೂಡ ಡಿಕ್ಕಿಯಾಗಿದೆ. ಆದರೆ ಹಿಂದಿನಿಂದ ವೇಗವಾಗಿ ‌ಬರುತ್ತಿದ್ದ  ಕಾರು ಚಾಲಕ ನಿಖಿಲ್  ಎದುರಿನಿ ಕಾರಿಗೆ ಡಿಕ್ಕಿಯಾಗುವುದನ್ನು‌ ತಪ್ಪಿಸಲು ಹಠಾತ್ತಾಗಿ ಬಲಕ್ಕೆ ತಿರುಗಿಸಿದಾಗ ಬೈಕ್ ಗೆ ಡಿಕ್ಕಿಯಾಗಿದೆ ಎಂದು ಕಾರು ಚಾಲಕ ನಿಖಿಲ್ ಹೇಳಿದ್ದಾರೆ.

ಆದರೆ ಅತಿವೇಗದ ಹಾಗೂ ತೀರಾ ನಿರ್ಲಕ್ಷ್ಯದ ಚಾಲನೆಯಿಂದ ಅಮಾಯಕ ಬೈಕ್ ಸವಾರ ಹಾಗೂ ಮಗು ಗಂಭೀರವಾಗಿ ಗಾಯಗೊಂಡಿರುವುದು ನಿಜಕ್ಕೂ ಬೇಸರದ ಸಂಗತಿ.

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News