×
Ad

ಪುತ್ತೂರು | ಕ್ಷೇತ್ರದ ಹೆಸರಿನಲ್ಲಿ ನನ್ನ ವರ್ಗ ಭೂಮಿ ವಶ ಪಡಿಸಿ ದಬ್ಬಾಳಿಕೆ: ರವೀಂದ್ರ ಮಳಾರು ಆರೋಪ

Update: 2022-12-30 18:15 IST

ಪುತ್ತೂರು: ತನ್ನ ಮನೆಗೆ ತಾಗಿಕೊಂಡಿರುವ ಉದಯಗಿರಿ ಶ್ರೀ ವಿಷ್ಣುಮೂರ್ತಿ ಕ್ಷೇತ್ರದ ನೇಮ ಉತ್ಸವಾದಿಗಳನ್ನು ನನ್ನ ದೊಡ್ಡಪ್ಪ ಕಾಳಪ್ಪ ಪೂಜಾರಿ ಕಳೆದ 16 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಇದೀಗ ಒತ್ತೆಕೋಲ ಸಮಿತಿಯಲ್ಲಿರುವ ಹಿಂದಾರು ಭಾಸ್ಕರ ಆಚಾರ್ ಮತ್ತಿತರರು ಸೇರಿಕೊಂಡು ತನ್ನ ವರ್ಗ ಕೃಷಿ ಭೂಮಿಯನ್ನು ನ್ಯಾಯಾಲಯದಿಂದ ಇಂಜಕ್ಷನ್ ಆದೇಶವಿದ್ದರೂ ವಿಸ್ತರಣೆ ಮಾಡುವ ಮೂಲಕ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಮುಳಾರು ನಿವಾಸಿ ರವೀಂದ್ರ ಎಂಬವರು ಆರೋಪಿಸಿದ್ದಾರೆ. 

ಅವರು ಶುಕ್ರವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಮನೆಯ ಕೌಂಪೌಂಡ್‍ಗೆ ತಾಗಿಕೊಂಡು ಉದಯಗಿರಿ ವಿಷ್ಣುಮೂರ್ತಿ ಕ್ಷೇತ್ರವಿದೆ. ಇಲ್ಲಿ ನಡೆಯುತ್ತಿರುವ ಒತ್ತೆಕೋಲ ಇನ್ನಿತರ ದೈವದ ಕಾರ್ಯಕ್ರಮಗಳಿಗೆ ನೀರು ಸೇರಿದಂತೆ ವಿವಿಧ ಸಹಕಾರಗಳನ್ನು ನಾನು ನೀಡುತ್ತಾ ಬಂದಿರುತ್ತೇನೆ. ಆದರೆ ಇದೀಗ ಒತ್ತೆಕೋಲ ಸಮಿತಿಯಲ್ಲಿ ಸೇರಿಕೊಂಡಿರುವ ಭಾಸ್ಕರ ಆಚಾರ್ ಹಿಂದಾರು,  ಅರುಣ್ ಕುಮಾರ್ ಪುತ್ತಿಲ ಮತ್ತು ಸದಾಶಿವ ಪಟ್ಟೆ ಎಂಬವರು ತಮ್ಮ ಹಿಂಬಾಲಕರ ಗುಂಪು ಕಟ್ಟಿಕೊಂಡು ರಾತ್ರಿ ವೇಳೆ ನಮ್ಮ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜೆಸಿಬಿ ಮೂಲಕ ಮಣ್ಣು ತೆಗೆದಿರುತ್ತಾರೆ. ಈ ವೇಳೆ ತನ್ನ ಸಿಸಿ ಟಿವಿಯ ವಯರನ್ನು ಕತ್ತರಿಸಿ ನಾಶ ಮಾಡಿದ್ದಾರೆ. ವಿದ್ಯುತ್ ಸಂಪರ್ಕವನ್ನು ಕಡಿದು ಹಾಕಿದ್ದಾರೆ. ಇಂಟರ್‍ನೆಟ್ ವಯರನ್ನು ಕತ್ತರಿಸಿ ಹಾಕಿದ್ದಾರೆ. ಅಲ್ಲದೆ ಇದನ್ನು ತಡೆಯಲು ಹೋದ ನನ್ನ ಮೇಲೆ ಹಾಗೂ ನನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದೇನೆ. ಆದರೆ ಪೊಲೀಸರು ತನ್ನಿಂದ ಖಾಲಿ ಪೇಪರ್ ಗೆ ಸಹಿ ಹಾಕಿಸಿ ನಾನು ನೀಡಿದ ದೂರನ್ನು ಹರಿದು ಹಾಕಿ ತನಗೆ ಬೇಕಾದಂತೆ ದೂರಿನಲ್ಲಿ ಬರೆದು ಕೊಂಡು ಸಹಿ ಹಾಕಿಸಿಕೊಂಡಿದ್ದು ರಾಜಕೀಯ ಒತ್ತಡದ ಕಾರಣದಿಂದ ಅವರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ. ಅವರ ದಬ್ಬಾಳಿಕೆಗೆ ಹೆದರಿದ ಜನ ಯಾರೂ ಈ ಅನ್ಯಾಯದ ವಿರುದ್ದ ಮಾತನಾಡುತ್ತಿಲ್ಲ. ಇವರಿಂದ ನಮ್ಮ ಕುಟುಂಬದ ರಕ್ಷಣೆ, ಹೆಣ್ಣು ಮಕ್ಕಳ ರಕ್ಷಣೆ ನನಗೆ ಚಿಂತೆಯಾಗಿದೆ. ಅರಕ್ಷಕರಿಂದಲೂ ನ್ಯಾಯ ಸಿಗದ ಹಿನ್ನಲೆಯಲ್ಲಿ ಇದೀಗ ನಾನು ನ್ಯಾಯದ ಹೋರಾಟಕ್ಕಾಗಿ ಪತ್ರಿಕಾ ಮಾದ್ಯಮದ ಬಳಿ ಬಂದಿರುವುದಾಗಿ ರವೀಂದ್ರ ಅವರು ತಿಳಿಸಿದ್ದಾರೆ. 

Similar News