ಸಿಸಿಐ-ನಿಟ್ಟೆ ಸಂಸ್ಥೆಯಿಂದ 18,000 ಸೀಳುತುಟಿ ರೋಗಿಗಳ ಯಶಸ್ವಿ ಶಸ್ತ್ರಚಿಕಿತ್ಸೆ: ಪ್ರೊ.ಹರ್ಮನ್ ಎಫ್.ಸೇಲರ್
ಕೊಣಾಜೆ: 2007ರಿಂದ ನಿಟ್ಟೆ ಸಂಸ್ಥೆ ಹಾಗೂ ಸಿಸಿಐ ಸಂಸ್ಥೆ ಸೇರಿಕೊಂಡು ಸೀಳುತುಟಿಯ 18,000 ಮಕ್ಕಳನ್ನು ಸಮಾಜದ ಮುಂದೆ ಆತ್ಮವಿಶ್ವಾಸದೊಂದಿಗೆ ಬಾಳಲು ಅವಕಾಶ ಕಲ್ಪಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಂವೇದನಾಶೀಲ ವೈದ್ಯರು ಹಾಗೂ ಸಂಸ್ಥೆಯ ಇನ್ನೊಬ್ಬರಿಗೆ ಒಳಿತನ್ನು ಮಾಡುವ ಪ್ರೋತ್ಸಾಹದೊಂದಿಗೆ ಸಾಧ್ಯವಾಗಿದೆ ಎಂದು ಕ್ಲೆಫ್ಟ್ ಚಿಲ್ಡ್ರನ್ ಇಂಟರ್ ನ್ಯಾಷನಲ್ (ಸಿಸಿಐ) ಇದರ ಸ್ಥಾಪಕ ಜರ್ಮನಿಯ ಪ್ರೊ.ಹರ್ಮನ್ ಎಫ್.ಸೇಲರ್ ಹೇಳಿದರು.
ಅವರು ನಿಟ್ಟೆ ಮೀನಾಕ್ಷಿ ಇನ್ಟ್ಟಿಟ್ಯೂಟ್ ಆಫ್ ಕ್ರೆನೊಫೇಷಿಯಲ್ ಸರ್ಜರಿ ಇದರ 22 ನೇ ಯಶಸ್ವಿ ವರ್ಷಾಚರಣೆಯ ಹಿನ್ನೆಲೆಯಲ್ಲಿ ದೇರಳಕಟ್ಟೆಯ ಕ್ಷೇಮ ಆಡಿಟೋರಿಯಂನ ಹೊರಾಂಗಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಶಾಸಕ ಯು.ಟಿ ಖಾದರ್ ಮಾತನಾಡಿ, ಹರ್ಮನ್ ಹಾಗೂ ನಿಟ್ಟೆ ಸಂಸ್ಥೆಗೆ ಇಲ್ಲಿನ ಜನ ಎಂದಿಗೂ ಕೃತಜ್ಞತಾಪೂರ್ವ, ನಿಮ್ಮಿಂದಾಗಿ ಸೀಳುತುಟಿ ನ್ಯೂನ್ಯತೆಯಿದ್ದ ಬಹುತೇಕರು ನಗುವಂತಾಗಿದೆ.ನಿಟ್ಟೆ ಸಂಸ್ಥೆ ಇಂತಹ ಯೋಜನಯೆನ್ನು ಪ್ರಥಮವಾಗಿ ಹಮ್ಮಿಕೊಂಡಿರುವುದು ಭಾರತದಲ್ಲೇ ಪ್ರಥಮ. ವೈದ್ಯಕೀಯ ವಿದ್ಯೆ ಜೊತೆಗೆ ಮಾನವೀಯತೆ ಮುಖ್ಯವಾಗುವುದು. ಸತತ 22 ವರ್ಷಗಳಿಂದ 18,000 ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ಪೂರೈಸಿದ ಡಾ. ವಿಕ್ರಮ್ ಶೆಟ್ಟಿ ಅದನ್ನು ಸಾಬೀತು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ತನ್ನ ಆರೋಗ್ಯ ಸಚಿವನಾಗಿದ್ದ ಅವಧಿಯಲ್ಲಿ ಓರಲ್ ಹೆಲ್ತ್ ಪಾಲಿಸಿಯನ್ನು ಜಾರಿಗೊಳಿಸಿದ್ದು, ಇದು ಬಡಜನರ ಪಾಲಿಗೆ ಸಾಕಷ್ಟು ವರದಾನವಾಗಿದೆ ಎಂದರು.
ಸುರತ್ಕಲ್ ಶಾಸಕ ವೈ.ಭರತ್ ಶೆಟ್ಟಿ ಮಾತನಾಡಿ, ದಿನಕ್ಕೆ ಮೂರು ಶಸ್ತ್ರಚಿಕಿತ್ಸೆ ಅಂದರೆ ಸುಲಭದ ಮಾತಲ್ಲ.ಇಂತಹ ವೈದ್ಯರ ಅಗತ್ಯತೆ ಇಂದು ಸಮಾಜಕ್ಕೆ ಬೇಕಿದೆ. ಆಸ್ಪತ್ರೆಯ ಆಡಳಿತದ ಬೆಂಬಲದೊಂದಿಗೆ ಕಳೆದ 22 ವರ್ಷಗಳಿಂದ ಉಚಿತವಾಗಿ ಶಸ್ತ್ರಚಿಕಿತ್ಸೆಯ ಜೊತೆಗೆ ಚಿಕಿತ್ಸೆಯನ್ನು ನೀಡಿರುವ ಕಾರ್ಯ ದೇಶ ಮೆಚ್ಚುವಂತದ್ದು. ಭಾರತದ ಪರವಾಗಿ ಕ್ಲೆಫ್ಟ್ ಚಿಲ್ಡ್ರೆನ್ ಅಸೋಸಿಯೇಷನ್ನಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಸಾಮಾಜಿಕ ಪಿಡುಗು ನಿರ್ಮೂಲನೆಗೊಳಿಸುವ ಪ್ರಯತ್ನದಲ್ಲಿರುವ ಹರ್ಮನ್ ಸೈಲರ್ ಮಾನವೀಯತೆಯ ಪ್ರತಿಪಾದಕ ಎಂದರು.
ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್ ವಿನಯ್ ಹೆಗ್ಡೆ ಮಾತನಾಡಿ, ಸಂಸ್ಥೆ ಅನೇಕ ಉತ್ತಮ ಕಾರ್ಯಗಳನ್ನು ಸಮಾಜಕ್ಕೆ ನೀಡಿದ್ದು, ಇದರಲ್ಲಿ ಕ್ರೆನೋಫೀಷಿಯಲ್ ಸರ್ಜರಿ ಕಾರ್ಯಕ್ರಮ ಅನೇಕರ ಬಾಳು ಬೆಳಗಾಗಿಸಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಕ್ಷೇಮ ಆಸ್ಪತ್ರೆ ವಾರ್ಷಿಕವಾಗಿ ರೂ.18 ಕೋಟಿಯನ್ನು ಮೀಸಲಿಟ್ಟಿದೆ. ಉಚಿತ ಪ್ರಸವ, ಮಾನಸಿಕ ರೋಗಿಗಳ ಚಿಕಿತ್ಸೆ , ಸೀಳು ತುಟಿ ಸೇರಿದಂತೆ ಇನ್ನಷ್ಟು ಉಚಿತವಾಗಿಯೇ ಚಿಕಿತ್ಸಾ ವಿಧಾನಗಳನ್ನು ನಡೆಸುತ್ತಾ ಬಂದಿದೆ. ಇದರಿಂದ 22 ವರ್ಷಗಳಲ್ಲಿ ಸಂಸ್ಥೆ ಗುಣಮಟ್ಟದ ಶಿಕ್ಷಣದ ಜೊತೆಗೆ ಆರೋಗ್ಯ ಸೇವೆಯನ್ನು ನೀಡಲು ಸಾಧ್ಯವಾಗಿದೆ. ಸೀಳುತುಟಿಯಲ್ಲಿ ಕೇರಳದ ಜನತೆ ಅನೇಕ ಕೊಡುಗೆಯನ್ನು ನೀಡಲಾಗಿದೆ. ಇದಕ್ಕೆಲ್ಲಾ ವೇದಿಕೆ ಕಲ್ಪಿಸಿಕೊಟ್ಟ ಹರ್ಮನ್ ದಂಪತಿಗೆ ನಿಟ್ಟೆ ಸಂಸ್ಥೆ ಎಂದಿಗೂ ಚಿರಋಣಿ ಎಂದರು.
ಕಾರ್ಯಕ್ರಮದಲ್ಲಿ ಕೇರಳ, ತಮಿಳುನಾಡು ಹಾಗೂ ಕರ್ನಾಟಕ ಭಾಗಗಳಲ್ಲಿ ಆರೋಗ್ಯ ಶಿಬಿರ ಕೈಗೊಂಡು ಹಲವು ಅಶಕ್ತರ ಮಕ್ಕಳಿಗೆ ಉಚಿತ ಚಿಕಿತ್ಸೆ ಕಲ್ಪಿಸಿಕೊಟ್ಟಂತಹ ಸಮಾಜಸೇವಕ ಉಮೇಶ್ ಪೋಚಪ್ಪನ್ ಅವರನ್ನು ಸನ್ಮಾನಿಸಲಾಯಿತು. ಸೀಳುತುಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾದ ಎಳೆಯ ಯುವಕ ಹಾಗೂ ಯುವತಿಯನ್ನು ಅಭಿನಂದಿಸಲಾಯಿತು.
ನಿಟ್ಟೆ ಸ್ವಾಯುತ್ತೆಗೊಳ್ಳಲಿರುವ ವಿ.ವಿ ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮುಖ್ಯ ಸಂಘಟಕ ಡಾ. ವಿಕ್ರಮ್ ಶೆಟ್ಟಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.