ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಕೋಟ್ಯಾಂತರ ವಂಚನೆ: ಇನ್ನೂ 500-600 ಮಂದಿ ಹೂಡಿಕೆದಾರರ ದಾಖಲೆ ಸಂಗ್ರಹ

Update: 2022-12-30 15:34 GMT

ಉಡುಪಿ: ಸೊಸೈಟಿಯಲ್ಲಿ ಹಣವಿಟ್ಟ ಠೇವಣಿದಾರರಿಗೆ  ಕೋಟ್ಯಾಂತರ ರೂಪಾಯಿ ವಂಚಿಸಿ  ತಲೆಮರೆಸಿಕೊಂಡು ಡಿ.28ರಂದು ಬಂಧಿತನಾಗಿ 14 ದಿನಗಳ ಕಾಲ (ಜ.11ವರೆಗೆ) ನ್ಯಾಯಾಂಗ ಬಂಧನ ದಲ್ಲಿರುವ ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ಉಡುಪಿ ಇಂದ್ರಾಳಿ ಸಮೀಪದ ನಿವಾಸಿ ಬಿ.ವಿ. ಲಕ್ಷ್ಮೀನಾರಾಯಣ ಉಪಾಧ್ಯಾಯನ (63) ವಂಚನೆಯ ಒಂದಷ್ಟು ಅಧಿಕೃತ ಮಾಹಿತಿಗಳನ್ನು ಉಡುಪಿ ಪೊಲೀಸರು ನೀಡಿದ್ದಾರೆ.

ಉಡುಪಿ ಜಿಲ್ಲೆಯ ಮೂಡನಿಡಂಬೂರು ಗ್ರಾಮದ ಮಾರುತಿ ವಿಥಿಕಾ ರಸ್ತೆಯಲ್ಲಿರುವ ಕೃಷ್ಣಾಪುರ ಮಠ ಬಿಲ್ಡಿಂಗ್‌ನಲ್ಲಿ 2013ರಲ್ಲಿ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಪ್ರಾರಂಭವಾಗಿದ್ದು, ಬಿ.ವಿ ಲಕ್ಷ್ಮೀನಾರಾಯಣ  ಇದರ ಅಧ್ಯಕ್ಷರಾಗಿದ್ದರು. ಉಡುಪಿ ಮೂಲದ ರವಿ ಉಪಾಧ್ಯ, ಬಿ.ವಿ ಬಾಲಕೃಷ್ಣ, ಭಾಸ್ಕರ ಉಪಾಧ್ಯ, ಉದಯ ಉಪಾಧ್ಯ, ರಾಧಿಕ,  ಸುಜಾತ ಅವರು ಈ ಸಹಕಾರಿ ಸಂಘದ ನಿರ್ದೇಶಕರಾಗಿದ್ದರು.

ಕೋಟಿಗಟ್ಟಲೆ ಹೂಡಿಕೆ..!: ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘವು ಸಾರ್ವಜನಿಕರಿಗೆ ಅವರ ಠೇವಣಿ ಮೇಲೆ ಶೇ.10ರಿಂದ ಶೇ.12ರವರೆಗೆ ಬಡ್ಡಿದರ ನೀಡುವುದಾಗಿ ಸುಮಾರು 700 ಜನರಿಂದ 40ರಿಂದ 50 ಕೋಟಿ ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದು,ಜೂನ್ 2022ರಿಂದ  ಹೂಡಿಕೆದಾರ ರಿಗೆ ಬಡ್ಡಿಯನ್ನು ನೀಡದೇ ಕಛೇರಿಯನ್ನು ಮುಚ್ಚಿಕೊಂಡು ಹೋದ ಬಗ್ಗೆ ಕಾರ್ಕಳ ಮೂಲದ ಪ್ರಕಾಶ್ ಕಾಮತ್ ಎನ್ನುವರು ಡಿ.21ರಂದು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ ಹಾಕೆ ಮಾರ್ಗದರ್ಶನದಲ್ಲಿ, ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ನಿರೀಕ್ಷಕ ಮಂಜುನಾಥ್ ಹಾಗೂ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ. 

ಸರ್ಚ್ ವಾರೆಂಟ್ ಪಡೆದು ಶೋಧ: ತನಿಖೆ ಕೈಗೆತ್ತಿಕೊಂಡ ಪೊಲೀಸರ ತಂಡ ನ್ಯಾಯಾಲಯದಿಂದ ಶೋಧನಾ (ಸರ್ಚ್) ವಾರೆಂಟ್ ಪಡೆದು ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ತನಿಖೆ ಕೈಗೊಂಡು ತನಿಖೆಗೆ ಅಗತ್ಯ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಲ್ಲದೆ ಸಹಕಾರಿ ಸಂಘದ ಕಛೇರಿಯನ್ನು ಸೀಲ್ ಮಾಡಿದ್ದಾರೆ.

ಅಲ್ಲದೆ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಸಂಬಂಧಿಸಿದ ಸಂಘದ ಹೆಸರಿನಲ್ಲಿ ಹಾಗೂ ಆರೋಪಿಗಳ ಹೆಸರಿನಲ್ಲಿ ಉಡುಪಿ ಜಿಲ್ಲೆಯಲ್ಲಿರುವ ಆಸ್ತಿಗಳ ಗುರುತಿಸುವಿಕೆ, ಸಂಬಂಧಿತ ಆಸ್ತಿಗಳನ್ನು ಪರಭಾರೆ ಮಾಡಬಾರದು ಎಂದು ಪೌರಾಯುಕ್ತರು ನಗರಸಭೆ, ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ಉಪನೋಂದಣಾಧಿಕಾರಿಗಳಿಗೆ ಕೋರಿಕೆ ಪತ್ರವನ್ನು ಪೊಲೀಸರು  ಸಲ್ಲಿಸಿದ್ದಾರೆ.

ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಸಂಬಂಧಿಸಿದಂತೆ ಸಂಘದ ಹೆಸರಿನಲ್ಲಿ ಹಾಗೂ ಆರೋಪಿಗಳ ಹೆಸರಿನಲ್ಲಿ ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿ ಇರುವ ಬ್ಯಾಂಕ್ ಖಾತೆಗಳನ್ನು ಡೆಬಿಟ್ ಫ್ರೀಜ್ ಮಾಡಲು ಎಲ್ಲಾ ಬ್ಯಾಂಕ್ ಹಾಗೂ  ಸೊಸೈಟಿಗಳಿಗೆ ಕೋರಿಕೆ ಪತ್ರ ಸಲ್ಲಿಸಿದ್ದು, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ-ನಿಬಂಧಕರಿಗೆ ಈ ಸೊಸೈಟಿಯಲ್ಲಿ ನಡೆದ ವಂಚನೆ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡಲು ಪೊಲೀಸರು ಕೋರಿದ್ದಾರೆ.

ಕಸ್ಟಡಿಗೆ ಕೇಳಲಿರುವ ಪೊಲೀಸರು: ಪ್ರಕರಣದ ಪ್ರಮುಖ ಆರೋಪಿ  ಬಿ.ವಿ ಲಕ್ಷ್ಮೀನಾರಾಯಣ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು ಹಿರಿಯಡಕ ಸಬ್ ಜೈಲಿನಲ್ಲಿದ್ದಾನೆ. ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದು ಇನ್ನೂ ಹೆಚ್ಚಿನ ತನಿಖೆ ಮಾಡಲಾಗುತ್ತದೆ.  ವಂಚನೆ ಪ್ರಕರಣದಲ್ಲಿ ಈಗಾಗಲೇ 100 ಜನ ಹೂಡಿಕೆದಾರರು ಹೂಡಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಸೆನ್ ಅಪರಾಧ ಪೊಲೀಸ್ ಠಾಣೆಗೆ ನೀಡಿದ್ದು, ಇನ್ನೂ 500- 600 ಜನ ಹೂಡಿಕೆದಾರರು ದಾಖಲೆಗಳನ್ನು ತನಿಖೆಗೆ ಹಾಜರುಪಡಿಸಲು ಇನ್ನೂ ಬಾಕಿ ಇದೆ ಎನ್ನಲಾಗಿದೆ.

ಮೋಸವಾಗಿದ್ದರೆ ಮಾಹಿತಿ ನೀಡಿ: ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ(ನಿ) ಹಾಗೂ ಆರೋಪಿಗಳಿಗೆ  ಸಂಬಂಧಿಸಿದ ಆಸ್ತಿಯನ್ನು ಜಪ್ತಿ ಮಾಡಿ ನ್ಯಾಯಾಲಯದ ವಶಕ್ಕೆ ಲಗ್ಗತ್ತಿಸಲಾಗುತ್ತದೆ. ಆಸ್ತಿಗಳನ್ನು ನಿಯಮಾನುಸಾರ ವಿಲೇ ಮಾಡಿ, ಹೂಡಿಕೆದಾರರಿಗೆ ಪರಿಹಾರವನ್ನು ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಅದ್ದರಿಂದ ಈ ತನಕ ಕಮಲಾಕ್ಷಿ ಸೊಸೇಟಿಯಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರು ಸೆನ್ ಅಪರಾಧ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಹೆಚ್ಚಿನ ಬಡ್ಡಿದರ ಹಾಗೂ ಇತರ ಆಮಿಷಗಳಿಗೆ ಒಳಗಾಗಿ ಇದೇ ರೀತಿ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಬಾರದು ಎಂದು ಪೊಲೀಸರು ತಿಳಿಸಿದ್ದಾರೆ.

Similar News