ಉಡುಪಿ: ಜ.1ರಂದು ಅಮರಶಿಲ್ಪಿ ಜಕಣಾಚಾರ್ಯ ಸಂಸ್ಮರಣೆ

Update: 2022-12-30 15:38 GMT

ಉಡುಪಿ: ಅಮರಶಿಲ್ಪಿ ಜಕಣಾಚಾರ್ಯರ ಚರಿತ್ರೆಯನ್ನು ಪುಣ್ಯಭೂಮಿಯ ಮುಂದಿನ ಪೀಳಿಗೆಗೆ ಪರಿಚಯಿಸುವುದು ಹಾಗೂ ಅವರನ್ನು ಎಲ್ಲಾ ಕಾಲದಲ್ಲೂ ಸ್ಮರಿಸುವುದರ ಮೂಲಕ ಶಿಲ್ಪ ಪರಂಪರೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ವಿಶ್ವಕರ್ಮ ಸಂಘ ಸಂಸ್ಥೆಗಳ ಕೇಂದ್ರ ಸಂಸ್ಥೆಯಾದ ವಿಶ್ವಕರ್ಮ ಒಕ್ಕೂಟದಿಂದ ಜ.1ರ ರವಿವಾರ ಉಡುಪಿ ಕುಂಜಿಬೆಟ್ಟುವಿನ ಎಂ.ಜಿ.ಎಂ ಕ್ರೀಡಾಂಗಣದಲ್ಲಿ ‘ಅಮರಶಿಲ್ಪಿ ಜಕಣಾಚಾರ್ಯ ಸಂಸ್ಮರಣೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಮರಶಿಲ್ಪಿ ಜಕಣಾಚಾರ್ಯ ಸಂಸ್ಮರಣಾ ಸಮಿತಿ ಸಂಚಾಲಕ ಅಲೆವೂರು ಯೋಗೀಶ್ ಆಚಾರ್ಯ ಹೇಳಿದ್ದಾರೆ.

ಉಡುಪಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು,  ಭಾರತೀಯ ಸಂಸ್ಕೃತಿಯ ಶ್ರೇಷ್ಠ ಪರಂಪರೆಗಳಲ್ಲಿ ಶಿಲ್ಪಕಲೆ ಅಗ್ರಮಾನ್ಯ ವಾದುದು. ಶಿಲ್ಪಕ್ಕೂ, ಶಿಲ್ಪಿಗೂ ಅವಿನಾಭಾವ ಸಂಬಂಧವಿರುತ್ತದೆ. ತನ್ನ ಶಿಲ್ಪ ವಿದ್ಯಾಪ್ರಾವೀಣ್ಯದಿಂದ ಲೋಕಪ್ರಸಿದ್ಧರಾದವರು ಜಕಣಾಚಾರ್ಯರು. ತನ್ನ ನವೀನ ಶೈಲಿಯಿಂದ ಪ್ರಭಾವಿತಗೊಳಿಸಿ, ಜನರಿಂದಲೇ ಅಮರಶಿಲ್ಪಿ ಎಂಬ ಮಾನ್ಯತೆ ಗಳಿಸಿದ ಜಕಣಾಚಾರ್ಯರು ಕನ್ನಡ ನಾಡಿನವರು ಎಂಬುದು ಹೆಮ್ಮೆ ಪಡಬೇಕಾದ ವಿಚಾರ ಎಂದರು.

ಜಕಣಾಚಾರ್ಯರ ಸಂಸ್ಮರಣೆ ಅಂಗವಾಗಿ ರವಿವಾರ ಅಪರಾಹ್ನ 2:30ಕ್ಕೆ ಉಡುಪಿಯ ಜೋಡುಕಟ್ಟೆಯಿಂದ ಸ್ತಬ್ಧಚಿತ್ರಗಳೊಂದಿಗೆ, ವೈಭವದ ಶೋಭಾಯಾತ್ರೆ ಹಾಗೂ ಬೈಕ್ ರ್ಯಾಲಿ ಎಂ.ಜಿ.ಎಂ. ಕ್ರೀಡಾಂಗಣದಲ್ಲಿ ಸಂಪನ್ನಗೊಳ್ಳಲಿದೆ. 

ಸಂಜೆ 4:00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಆನೆಗುಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಇವರ ಉಪಸ್ಥಿತಿಯಲ್ಲಿ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ ಎಂದರು.

2012ರಲ್ಲಿ  ವಿಶ್ವಕರ್ಮ ಸಮಾಜದ ಬೃಹತ್ ಸಮಾವೇಶ ನಡೆದಿತ್ತು. ಈ ಬಾರಿಯೂ ಎರಡು ಜಿಲ್ಲೆಗಳ ಸಮಾಜಬಾಂಧವರನ್ನು ಒಗ್ಗೂಡಿಸಿಕೊಂಡು ಉಡುಪಿಯಲ್ಲಿ ಸಮಾವೇಶ ಮಾಡಲು ಚಿಂತನೆ ನಡೆಸಲಾಗುತ್ತಿದೆ. ರವಿವಾರದ ಕಾರ್ಯಕ್ರಮ ಇದಕ್ಕೆ ಪೂರ್ವಭಾವಿಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಗೌರವಾಧ್ಯಕ್ಷ ಯು.ಕೆ.ಎಸ್. ಸೀತಾರಾಮ ಆಚಾರ್ಯ, ಕೋಶಾಧಿಕಾರಿ ಜನಾರ್ಧನ್ ಎಸ್., ಹರ್ಷವರ್ಧನ್ ನಿಟ್ಟೆ ಉಪಸ್ಥಿತರಿದ್ದರು. 

Similar News