ಕಾಂಗ್ರೆಸ್ ಗೆ ಮರಳುವ ಕುರಿತ ಪ್ರಶ್ನೆಗೆ ಗುಲಾಂ ನಬಿ ಆಝಾದ್ ಪ್ರತಿಕ್ರಿಯಿಸಿದ್ದು ಹೀಗೆ...

Update: 2022-12-31 11:09 GMT

ಹೊಸದಿಲ್ಲಿ: ಹಿರಿಯ ರಾಜಕಾರಣಿ ಮತ್ತು ಹೊಸದಾಗಿ ರಚನೆಯಾದ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಆಝಾದ್  ಪಕ್ಷದ ಮುಖ್ಯಸ್ಥ ಗುಲಾಂ ನಬಿ ಆಝಾದ್ ಅವರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳುತ್ತೀರ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ಈ ವರ್ಷದ ಆರಂಭದಲ್ಲಿ ತಮ್ಮ 52 ವರ್ಷಗಳ ಕಾಂಗ್ರೆಸ್ ನೊಂದಿಗಿನ ಸಂಬಂಧವನ್ನು  ಮುರಿದುಕೊಂಡಿರುವ ಆ ಪಕ್ಷಕ್ಕೆ  ಮರಳುವ ಯಾವುದೇ ಪ್ರಮೇಯವೇ ಇಲ್ಲ ಎಂದು ತಿಳಿಸಿದ್ದಾರೆ. 

ಈ ಸಂಬಂಧ ಸುದ್ದಿ ಸಂಸ್ಥೆಯ ಜೊತೆ ಮಾತನಾಡಿದ ಅವರು, ಮಾಜಿ ಕೇಂದ್ರ ಸಚಿವ, ಹಳೆಯ ಪಕ್ಷಕ್ಕೆ ಮರಳುತ್ತಾರೆ ಎಂದು ಸೂಚಿಸುವ ವರದಿಗಳು ಕಾಂಗ್ರೆಸ್‌ನ ಕೆಲವು ಪಟ್ಟಭದ್ರ ನಾಯಕರಿಂದ ಕೇಳಿ ಬಂದಿತ್ತು ಮತ್ತು ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದರು. 

"ಈ ಸಂಬಂಧ  ನಾನು ಯಾವುದೇ ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡಿಲ್ಲ ಮತ್ತು ಯಾರೂ ನನ್ನನ್ನು ಕರೆದಿಲ್ಲ. ಹಾಗಾಗಿ ಈ ರೀತಿಯ ಕಥೆಗಳನ್ನು ಮಾಧ್ಯಮಗಳಲ್ಲಿ ಏಕೆ ನಡೆಸಲಾಗುತ್ತದೆ ಎಂದು ನನಗೆ ಆಶ್ಚರ್ಯ ಆಗುತ್ತಿದೆ" ಎಂದು ಗುಲಾಂ ನಬಿ ಆಝಾದ್ ತಿಳಿಸಿದರು. 

ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ಅನಿಶ್ಚಿತತೆಯ ಭಾವನೆಯನ್ನು ಮೂಡಿಸಲು ಮತ್ತು ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸಲು ಕಾಂಗ್ರೆಸ್ ನಾಯಕರು ಈ ಪ್ರಯತ್ನಗಳನ್ನು ಮಾಡುತ್ತಿದ್ದಾರೆ  ಎಂದು ಆಝಾದ್ ಅವರು ಆರೋಪಿಸಿದರು 

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿರುವ ಆಝಾದ್, "ನಾನು ಯಾರೊಂದಿಗೂ ಯಾವುದೇ ಕೆಸರೆರಚಾಟದಲ್ಲಿ ತೊಡಗಿಲ್ಲ.  ನಾನು ಏನು ಹೇಳಬೇಕೋ ಅದನ್ನು ನನ್ನ ರಾಜೀನಾಮೆ ಪತ್ರದಲ್ಲಿ ಸ್ಪಷ್ಟಪಡಿಸಿದ್ದೇನೆ. ಇದಾದ ನಂತರ ನಾನು ನನ್ನದೇ ಹಾದಿಯಲ್ಲಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟಿರುವ ಜನರ ಸೇವೆ ಮಾಡುತ್ತೇನೆ ಎಂದರು. 

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಮುಂದಿನ ತಿಂಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸಿದಾಗ ಅದರಲ್ಲಿ ಸೇರಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗುಲಾಮ್ ನಬಿ ಆಝಾದ್  "ನನಗೆ ಅಂತಹ ಯಾವುದೇ ಯೋಜನೆ ಇಲ್ಲ. ನನಗೆ ಮಾಡಲು ಬೇಕಾದಷ್ಟು ಕೆಲಸವಿದೆ " ಎಂದು ಹೇಳಿದರು.

Similar News