ಮಂಗಳೂರು: ಕೇಂದ್ರ, ರಾಜ್ಯ ಸರಕಾರದ ಅಡಿಕೆ ಬೆಳೆ ನೀತಿಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ

Update: 2022-12-31 10:06 GMT

ಮಂಗಳೂರು, ಡಿ.31: ಕೇಂದ್ರ ಹಾಗೂ ರಾಜ್ಯ ಸರಕಾರದ ಅಡಿಕೆ ಬೆಳೆ ನೀತಿಯನ್ನು ಖಂಡಿಸಿ ನಗರದ ಮಿನಿ ವಿಧಾನ ಸೌಧದ ಮುಂದೆ ಶನಿವಾರ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕಿಸಾನ್ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಭಟನೆಯ ನೇತೃತ್ವವನ್ನು ವಹಿಸಿ ಮಾತನಾಡಿದ ಮಾಜಿ ಶಾಸಕ ಜೆ.ಆರ್.ಲೋಬೊ, ವಿಧಾನಸಭಾ ಅಧಿವೇಶನದಲ್ಲಿ ಗೃಹಸಚಿವರು ಅಡಿಕೆ ಬೆಳೆಗೆ ಭವಿಷ್ಯವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಕ್ಕೆ ರೈತರ ಸಮಸ್ಯೆಗಳ ಬಗ್ಗೆ ಅರಿವು ಇಲ್ಲ. ರಾಜ್ಯದಲ್ಲಿ ಸುಮಾರು 16 ಜಿಲ್ಲೆಗಳಲ್ಲಿ ಸಹಸ್ರಾರು ಹೆಕ್ಟರ್ ಪ್ರದೇಶಗಳಲ್ಲಿ ನೂರಾರು ವರ್ಷಗಳಿಂದ ಅಡಿಕೆ ಬೆಳೆಯಲಾಗುತ್ತಿದೆ. ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಡಿಕೆ ಬೆಳೆಗಾರರ ಹಿತ ಕಾಯಲು ಕ್ಯಾಂಪ್ಕೊ ಸಂಸ್ಥೆಯನ್ನು ಸ್ಥಾಪಿಸಲು ನೆರವು ನೀಡಿತ್ತು. ಅಡಿಕೆ ಆಮದಿಗೆ ನಿರ್ಬಂಧ ವಿಧಿಸಿ ಅಡಿಕೆ ಬೆಳೆಗಾರರ ಹಿತವನ್ನುಕಾಯ್ದುಕೊಂಡಿತ್ತು. ಆದರೆ ಈಗ ವಿದೇಶಗಳಿಂದ ಮುಕ್ತ ಆಮದಿಗೆ ಅವಕಾಶ ಮಾಡಿಕೊಟ್ಟು ಅಡಿಕೆ ಬೆಳೆಗಾರರಿಗೆ ತೊಂದರೆಯನ್ನುಂಟು ಮಾಡಿದೆ ಎಂದರು.

ಹಳದಿ ರೋಗ, ಚುಕ್ಕಿ ರೋಗದಿಂದಾಗಿ ಅಡಿಕೆ ಬೆಳೆಗಾರರು ಅಪಾರ ನಷ್ಟ ಅನುಭವಿಸಿದ್ದಾರೆ. ಆದರೆ ಅವರಿಗೆ ಸರಕಾರ ಪರಿಹಾರ ನೀಡಿಲ್ಲ. ಜಿಲ್ಲೆಯಲ್ಲಿ 8 ಶಾಸಕರ ಪೈಕಿ 7 ಮಂದಿ ಆಡಳಿತಾರೂಢ ಬಿಜೆಪಿ ಸರಕಾರದ ಶಾಸಕರು ಇದ್ದರೂ ಅವರಿಗೆ ಅಡಿಕೆ ಬೆಳೆಗಾರರ ಬಗ್ಗೆ ಕಾಳಜಿ ಇಲ್ಲ ಎಂದು ದೂರಿದರು.

ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಮಾತನಾಡಿ, ಅಡಿಕೆಗೆ ಬೆಲೆ ಇಳಿದರೆ ರಾಜ್ಯದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ ಮಾತನಾಡಿ ರಾಜ್ಯ ಬಿಜೆಪಿ ಸರಕಾರದ ಅಡಿಕೆ ಬೆಳೆ ವಿರೋಧಿ ನೀತಿಯನ್ನು ಖಂಡಿಸಿದರು.

ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಕೆ.ಸುಧೀರ್, ಕಾರ್ಪೊರೇಟರ್ ಗಳಾದ ನವೀನ್ ಡಿಸೋಜ, ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್, ಅಬ್ದುಲ್ಲತೀಫ್, ಸಂಶುದ್ದೀನ್, ಅಶ್ರಫ್ ಬಜಾಲ್, ಪಕ್ಷದ ಪ್ರಮುಖರಾದ ನಝೀರ್ ಬಜಾಲ್, ನೀರಜ್ ಪಾಲ್, ಚೇತನ್, ರೀತೇಶ್, ಹೊನ್ನಯ್ಯ, ಸದಾಶಿವ ಅಮೀನ್, ಉದಯ್ ಕುಂದರ್, ರಾಕೇಶ್ ದೇವಾಡಿಗ,ಆಸಿಫ್ ಬೆಂಗ್ರೆ, ಲಿಯಾಕತ್ ಶಾಹ್, ಚಂದ್ರಕಲಾ ರಾವ್, ಭರತೇಶ್ ಅಮೀನ್, ಕವಿತಾ ವಾಸು, ಗೀತಾ ಅತ್ತಾವರ, ಶೈಲಜಾ, ಪದ್ಮನಾಭ ಅಮೀನ್, ಯೋಗೇಶ್ ನಾಯಕ್, ಶರತ್ ಕುಮಾರ್, ನವಾಝ್‌ಜೆಪ್ಪು, ಹೈದರಲಿ, ಲಕ್ಷ್ಮಣ್ ಶೆಟ್ಟಿ, ಶಾನ್ ಡಿಸೋಜ, ವಿದ್ಯಾ, ಅಬ್ದುಲ್ ಹಮೀದ್, ಅಬ್ದುಲ್ ಮಜೀದ್, ಪ್ರವೀತ್ ಕರ್ಕೇರ ಮೊದಲಾದವರು ಭಾಗವಹಿಸಿದ್ದರು.

Similar News