ಕಾಂಗ್ರೆಸ್ ತೆಕ್ಕೆಗೆ ಮರಳುವುದೇ ಚಿಕ್ಕಬಳ್ಳಾಪುರ?

Update: 2023-06-27 11:01 GMT

ತೆಕ್ಕೆಗೆ ಬಂದಿರುವ ಚಿಕ್ಕಬಳ್ಳಾಪುರವನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಬಿಜೆಪಿ, ಕೈತಪ್ಪಿರುವ ಕ್ಷೇತ್ರವನ್ನು ಪುನಃ ಪಡೆದು ಇಡೀ ಜಿಲ್ಲೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಹಠದಲ್ಲಿ ಕಾಂಗ್ರೆಸ್, ಇವೆರಡರ ನಡುವೆ ಹಳೆಯ ಅಭ್ಯರ್ಥಿಯನ್ನೇ ನೆಚ್ಚಿ ನಿಂತಿರುವ ಜೆಡಿಎಸ್ ಹೂಡಬಹುದಾದ ರಣತಂತ್ರ - ಇವೆಲ್ಲವುಗಳ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಕದನ ಕಣ ಹಲವು ಕುತೂಹಲಗಳಿಗೆ ಕಾರಣವಾಗಲಿದೆ ಎಂಬುದಂತೂ ಸತ್ಯ.

ಹೇಗಿದೆ, ಆಪರೇಷನ್ ಕಮಲಕ್ಕೆ ಒಳಗಾಗಿ ಅಧಿಕಾರ ಪಡೆದ ಸುಧಾಕರ್ ಪ್ರಭಾವ? ಏನಿರಲಿದೆ, ಕಳೆದುಕೊಂಡ ಕ್ಷೇತ್ರವನ್ನು ಮರಳಿ ಗಳಿಸಲು ಕಾಂಗ್ರೆಸ್ ರಣತಂತ್ರ? ಚುನಾವಣೆ ವೇಳೆಗೆ ಸುಧಾಕರ್ ಬಿಜೆಪಿಯಲ್ಲಿರುವುದಿಲ್ಲ ಎಂಬ ವದಂತಿ ನಿಜವಾದೀತೆ? ಚಿಕ್ಕಬಳ್ಳಾಪುರ ಅಖಾಡದಲ್ಲಿ ಈ ಬಾರಿ ಮತದಾರ ಕೈಹಿಡಿಯೋದು ಯಾವ ಪಕ್ಷವನ್ನು?

1978ರವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದ ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರವನ್ನು 1978ರಿಂದ 2008ರವರೆಗೆ 30 ವರ್ಷಗಳ ಕಾಲ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವನ್ನಾಗಿ ಮಾಡಲಾಗಿತ್ತು. ಆನಂತರ ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ 2008ರಿಂದ ಅದು ಮತ್ತೆ ಸಾಮಾನ್ಯ ವಿಧಾನಸಭಾ ಕ್ಷೇತ್ರವಾಗಿದೆ. ಈವರೆಗೆ 15 ಚುನಾವಣೆಗಳನ್ನು ಕಂಡಿದೆ. ಅದರಲ್ಲಿ ಒಂದು ಉಪಚುನಾವಣೆಯೂ ಸೇರಿದೆ. ಹಾಗೆ ನೋಡಿದರೆ ಇಲ್ಲಿ 9 ಬಾರಿ ಗೆದ್ದು ಕ್ಷೇತ್ರವನ್ನು ತನ್ನ ಭದ್ರಕೋಟೆಯನ್ನಾಗಿಸಿಕೊಂಡಿದ್ದು ಕಾಂಗ್ರೆಸ್. ಆದರೆ, ಅದಕ್ಕೆ ಮುಳುವಾದದ್ದು ಬಿಜೆಪಿಯ ಆಪರೇಷನ್ ಕಮಲ. ಉಳಿದಂತೆ 4 ಬಾರಿ ಸ್ವತಂತ್ರ ಅಭ್ಯರ್ಥಿಗಳು, ಒಮ್ಮೆ ಜೆಡಿಎಸ್ ಅಭ್ಯರ್ಥಿ ಗೆದ್ದಿದ್ದರೆ, ಕಳೆದ ಬಾರಿಯ ಉಪಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರವು ಬಿಜೆಪಿ ಪಾಲಾಯಿತು. ಸುಧಾಕರ್ ಈ ಕ್ಷೇತ್ರದ ಹಾಲಿ ಶಾಸಕ.

ಸನ್ನಿವೇಶ ಬದಲಿಸಿದ ಆಪರೇಷನ್ ಕಮಲ

2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಡಾ.ಸುಧಾಕರ್ ಪ್ರವೇಶವಾಯಿತು. 15 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಬಚ್ಚೇಗೌಡರನ್ನು ಸೋಲಿಸಿ ಸುಧಾಕರ ಗೆಲುವು ಸಾಧಿಸಿದ್ದರು. 2018ರಲ್ಲಿಯೂ ಕಾಂಗ್ರೆಸ್ ಪಕ್ಷದಿಂದ ಎರಡನೇ ಬಾರಿ ಕಣಕ್ಕಿಳಿದ ಸುಧಾಕರ್ 82 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಬಚ್ಚೇಗೌಡರ ಎದುರು 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರು. ಈ ಗೆಲುವಿನೊಂದಿಗೆ, ಚಿಕ್ಕಬಳ್ಳಾಪುರಕ್ಷೇತ್ರದಲ್ಲಿ ಸತತ ಎರಡನೇ ಬಾರಿ ಗೆದ್ದ ಮೊದಲ ಶಾಸಕ ಎಂಬ ಹೆಗ್ಗಳಿಕೆಯೂ ಅವರದಾಯಿತು. ಅದು ಕಾಂಗ್ರೆಸ್ ತೊರೆದು ಬಿಜೆಪಿ ಯಿಂದ ಉಪಚುನಾವಣೆಗೆ ಸ್ಪರ್ಧಿಸಿದಾಗಲೂ ಮುಂದುವರಿದು, ಮತ್ತೊಮ್ಮೆ ಗೆಲುವು ಸಾಧಿಸಿದರು.

ಹೌದು. ಆಪರೇಷನ್ ಕಮಲ ಚಿಕ್ಕಬಳ್ಳಾಪುರ ಕ್ಷೇತ್ರದ ಚಿತ್ರವನ್ನು ಬದಲಿಸಿಬಿಟ್ಟಿತು. ಕಾಂಗ್ರೆಸ್ ಕೈಯಲ್ಲಿದ್ದ ಚಿಕ್ಕಬಳ್ಳಾಪುರ ಬಿಜೆಪಿಯ ತೆಕ್ಕೆಗೆ ಹೋಯಿತು. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರಕಾರ ಬೀಳಲು ಕಾರಣರಾದ 18 ಶಾಸಕರ ಪೈಕಿ ಸುಧಾಕರ್ ಕೂಡ ಒಬ್ಬರಾಗಿದ್ದರು. ಅಧಿಕಾರಕ್ಕಾಗಿ ಬಿಜೆಪಿಯವರ ಆಪರೇಷನ್ ಕಮಲಕ್ಕೆ ಒಳಗಾದ ಸುಧಾಕರ್ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಬಳಿಕ 2019ರಲ್ಲಿ ಉಪಚುನಾವಣೆ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿಯನ್ನು 35 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ, ಇಲ್ಲೇನಿದ್ದರೂ ತನ್ನದೇ ಹವಾ ಎಂದು ತೋರಿಸಿಬಿಟ್ಟರು ಸುಧಾಕರ್. ಅಧಿಕಾರವೂ ಸಿಕ್ಕಿತು. ಯಡಿಯೂರಪ್ಪ ಸಂಪುಟದಿಂದ ಶುರುವಾದ ಸುಧಾಕರ್ ಮಂತ್ರಿಗಿರಿ, ಬೊಮ್ಮಾಯಿ ಸರಕಾರದಲ್ಲಿಯೂ ಮುಂದುವರಿದಿದೆ.

ಚಿಕ್ಕಬಳ್ಳಾಪುರ ವಿಧಾನಸಭೆ ಚುನಾವಣೆ ಇತಿಹಾಸದಲ್ಲಿಯೇ ಮೊದಲ ಬಾರಿ ಬಿಜೆಪಿ ಇಲ್ಲಿ ಗೆಲ್ಲುವಂತಾದದ್ದು ಆಪರೇಷನ್ ಕಮಲದ ಕಾರಣದಿಂದ. ಕಾಂಗ್ರೆಸ್‌ನಲ್ಲಿದ್ದು ರಾಜಕೀಯದಲ್ಲಿ ಮೇಲೆ ಬಂದಿದ್ದ ಸುಧಾಕರ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ, ಕಾಂಗ್ರೆಸನ್ನೇ ಸೋಲಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಯಾವ ಕ್ಷೇತ್ರದಲ್ಲಿ ಯೂನೆಲೆಯಿಲ್ಲದ ಬಿಜೆಪಿ ಇಲ್ಲಿ ನೆಲೆ ಕಾಣುವಂತಾಯಿತು. ಕಳೆದುಕೊಂಡಿ ರುವ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬುದು ಕಾಂಗ್ರೆಸ್ ನಾಯಕರ ಹಂಬಲ. ಅದಕ್ಕಾಗಿ ಅವರೀಗ ದೊಡ್ಡ ಯತ್ನವನ್ನೇ ನಡೆಸಿದ್ದಾರೆ.

ಜೆಡಿಎಸ್ ದುರ್ಬಲವಾಗಿದೆಯೆ?

ಜೆಡಿಎಸ್‌ನಿಂದ ಮತ್ತೊಮ್ಮೆ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರೇ ಸ್ಪರ್ಧಿಸುವುದು ಖಚಿತವಾಗಿದೆ. ತಮಗೆ ಇಷ್ಟವಿಲ್ಲದಿದ್ದರೂ, ಪಕ್ಷದ ವರಿಷ್ಠರ ಮಾತಿಗೆ ಬೆಲೆಕೊಟ್ಟು ಸ್ಪರ್ಧಿಸುತ್ತಿರುವುದಾಗಿ ಬಚ್ಚೇಗೌಡರು ಹೇಳಿದ್ದಾರೆನ್ನಲಾಗಿದೆ. 2008ರಲ್ಲಿ ಗೆದ್ದಿದ್ದ ಅವರು 2013 ಮತ್ತು 2018ರಲ್ಲಿ ಸೋತ ಬಳಿಕ ಉಪಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ ಜೆಡಿಎಸ್ ಪಾಲಿನ ದೊಡ್ಡ ಸಮಸ್ಯೆಯೆಂದರೆ, ಪಕ್ಷದೊಳಗೆ ಕ್ಷೇತ್ರದಲ್ಲಿ ಹೇಳಿಕೊಳ್ಳುವಂಥ ಒಗ್ಗಟ್ಟು ಇಲ್ಲವೆಂಬುದು. ಪಕ್ಷದ ಬಹಳಷ್ಟು ಮುಖಂಡರು ಈಗಾಗಲೇ ಬಿಜೆಪಿ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ. ಸೋತು ಹಿಂದಕ್ಕೆ ಸರಿದಿದ್ದ ಬಚ್ಚೇಗೌಡರು ಹೊಸ ಸನ್ನಿವೇಶದಲ್ಲಿ ಮತದಾರರನ್ನು ಸೆಳೆಯಲು ಸಾಕಷ್ಟು ಪ್ರಯತ್ನಿಸಬೇಕಾದ ಅಗತ್ಯವಿದೆ. ಮುಖಂಡರೆಲ್ಲ ದೂರವಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್ ದುರ್ಬಲವಾಗಿದೆಯೆಂಬ ಮಾತುಗಳೇ ಕೇಳಿಬರುತ್ತಿವೆ. ತನ್ನ ಪಾಲಿನ ಮತಗಳನ್ನು ಕ್ರೋಡೀಕರಿಸುವ ಮತ್ತು ಉಳಿಸಿಕೊಳ್ಳುವ ಸವಾಲು ಜೆಡಿಎಸ್ ಎದುರಿಗಿದೆ ಎನ್ನಲಾಗುತ್ತಿದೆ.

ಬೆನ್ನುಬಿದ್ದಿರುವ ಅಕ್ರಮ ಆರೋಪಗಳು

ಕ್ಷೇತ್ರದ ಮೇಲೆ ಹಿಡಿತ ಹೊಂದಿರುವ ಸುಧಾಕರ್‌ಗೆ ಎದುರಾಳಿಗಳೇ ಇಲ್ಲ ಎಂದೇ ಹೇಳಲಾಗುತ್ತಿದೆ. ಅದಕ್ಕೆ ಪೂರಕವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳಲ್ಲಿ ಪ್ರಬಲ ಅಭ್ಯರ್ಥಿಗಳು ಇಲ್ಲವಾಗಿದ್ದಾರೆ. ಜೆಡಿಎಸ್ ಅಂತೂ ಸೋತಿರುವ ಅಭ್ಯರ್ಥಿಯನ್ನೇ ಮತ್ತೊಮ್ಮೆ ನೆಚ್ಚಿದೆ. ಕಾಂಗ್ರೆಸ್ ಕಣಕ್ಕಿಳಿಸಬಹುದಾದ ಅಭ್ಯರ್ಥಿ ಯಾರು ಎಂಬುದು ಅಖಾಡದ ಬಲಾಬಲವನ್ನು ನಿರ್ಣಯಿಸಲಿದೆ.

ಈ ಮಧ್ಯೆ ಸುಧಾಕರ್ ವಿರುದ್ಧ ಇರುವ ಹಲವಾರು ಅಕ್ರಮಗಳು, ಸರಕಾರಿ ಯಂತ್ರದ ದುರ್ಬಳಕೆ, ಅವರದೇನಿದ್ದರೂ ಹಣಬಲದ ಆಟ ಎಂಬ ಆರೋಪಗಳು ಅವರ ಬೆನ್ನುಬಿದ್ದಿವೆ. ಅವರ ವಿರುದ್ಧದ ಈ ಹಲವಾರು ಆರೋಪಗಳೇ ಅವರಿಗೆ ಮೈನಸ್ ಪಾಯಿಂಟ್ ಆದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ಚಿಕ್ಕಬಳ್ಳಾಪುರದಲ್ಲಿ ಎಲ್ಲವೂ ಸುಧಾಕರ್ ಹಿಡಿತದಲ್ಲೇ ಇವೆಯೆಂಬ ಆರೋಪಗಳಿವೆ. ಕಳೆದ 10 ವರ್ಷಗಳಲ್ಲಿ ಕ್ಷೇತ್ರಕ್ಕೆ ಸುಧಾಕರ್ ಏನನ್ನೂ ಮಾಡಿಲ್ಲ, ಆದರೆ ಎಲ್ಲವೂ ತಮ್ಮ ಮರ್ಜಿಯಲ್ಲೇ ನಡೆಯಬೇಕು ಎನ್ನುತ್ತಾರೆ ಎಂದೂ ಆರೋಪಿಸಲಾಗುತ್ತದೆ. ಆಸ್ಪತ್ರೆ ಹೆಸರಲ್ಲಿ ಅಕ್ರಮ, ವರ್ಗಾವಣೆ, ಅಭಿವೃದ್ಧಿ ಹೆಸರಲ್ಲಿ ತಾನಂದುಕೊಂಡಂತೆಯೇ ಆಗಬೇಕೆಂಬ ಮಟ್ಟಿಗೆ ಪರಿಸ್ಥಿತಿಯನ್ನು ತಂದಿಟ್ಟಿರುವುದು ಮೊದಲಾದ ಆರೋಪಗಳನ್ನು ಪ್ರತಿಪಕ್ಷಗಳು ಮಾಡುತ್ತಲೇ ಬಂದಿವೆ. ಎಲ್ಲವನ್ನೂ ಸುಧಾಕರ್ ಹಣದಿಂದಲೇ ಸಾಧಿಸುತ್ತಿದ್ದಾರೆ. ತಮ್ಮ ಮಾತು ಕೇಳದ ವರನ್ನು ಬೆದರಿಸಿ ಮಣಿಸುತ್ತಾರೆ ಎಂಬುದೂ ಅವರ ಮೇಲಿರುವ ಮತ್ತೊಂದು ಆರೋಪ. ಅಭಿವೃದ್ಧಿಯೆಂಬುದು ಬರೀ ಮಾತಲ್ಲೇ ಉಳಿದಿದೆ. ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳೂ ಕಾರ್ಯರೂಪಕ್ಕೆ ಬಂದಿಲ್ಲ. ಆದರೆ ಕ್ಷೇತ್ರವನ್ನು ಮಾತ್ರ ತನ್ನ ಅಂಕೆಯಲ್ಲಿಟ್ಟುಕೊಂಡಿರುವ ಬಗ್ಗೆ ಸುಧಾಕರ್ ವಿರುದ್ಧ ಜನರಲ್ಲಿ ಒಳಗೊಳಗೇ ಆಕ್ರೋಶವಿದೆ ಎಂಬ ಮಾತುಗಳಿವೆ.

ಜನರ ಕೈಗೆಂದೂ ಸಿಗದ, ಆದರೆ ತನ್ನ ವಿರುದ್ಧ ದನಿಯೆತ್ತುವವರನ್ನು ಬೆದರಿಸಿ ಹಣಿಯುವ ತಂತ್ರವನ್ನು ಮಾಡಿಕೊಂಡೇ ಬಂದಿದ್ದಾರೆ ಎಂಬುದು ಕೂಡ ಸುಧಾಕರ್ ವಿರುದ್ಧ ಇರುವ ಅರೋಪ. ಅವರ ವಿರುದ್ಧದ ಇಂಥ ಆರೋಪಗಳು ನಿಜ ಎಂಬುದಕ್ಕೆ ಸಾಕ್ಷಿ ಇತ್ತೀಚೆಗೆ ಜನಪ್ರತಿನಿಧಿಗಳ ಕೋರ್ಟ್ ಸುಧಾಕರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲು ಆದೇಶಿಸಿತ್ತೆಂಬುದನ್ನು ನೆನಪಿಸಿಕೊಳ್ಳಬಹುದು.

ಸುಧಾಕರ್ ಇಡೀ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಂದು ಬಗೆಯ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂಬುದು ಸ್ಥಳೀಯರ ಮಾತು. ಅವರ ಸುತ್ತ ಇರುವವರು ಇಂಥ ಭಯದ ಕಾರಣದಿಂದಾಗಿಯೇ ಅವರ ಜೊತೆಗಿದ್ದಾರೆ ಎಂಬ ಮಾತುಗಳೂ ಇವೆ. ಚಿಕ್ಕಬಳ್ಳಾಪುರದಲ್ಲಿ ಇರುವುದು ಬಿಜೆಪಿಯ ವರ್ಚಸ್ಸಲ್ಲ, ಅದು ಸುಧಾಕರ್ ತಮ್ಮ ಹಣಬಲ ಮತ್ತು ಅಧಿಕಾರ ಬಲದಿಂದ ಉಂಟುಮಾಡಿರುವ ಭ್ರಮೆ ಎಂಬ ವಿಶ್ಲೇಷಣೆಗಳೂ ಇವೆ. ಅವರ ವಿರುದ್ಧ ಕ್ಷೇತ್ರದಲ್ಲಿ ಒಳಗೊಳಗೇ ಬೂದಿ ಮುಚ್ಚಿದ ಕೆಂಡದಂತಿರುವ ಅಸಮಾಧಾನ ಈ ಸಲ ಅವರಿಗೆ ಕೈಕೊಡಬಹುದು ಎಂದೂ ಹೇಳಲಾಗುತ್ತಿದೆ. ಅವರ ಸುತ್ತ ಇರುವವರೇ ಅವರ ವಿರುದ್ಧ ತಿರುಗಿಬೀಳಬಹುದೆಂದೂ ಹೇಳಲಾಗುತ್ತಿದೆ.

ಇದೆಲ್ಲದರ ನಡುವೆಯೇ, ಸುಧಾಕರ್ ಬಿಜೆಪಿ ಬಿಡಲಿದ್ದಾರೆ ಎಂಬ ವದಂತಿಗಳೂ ಇವೆ. ಇದು ಅವರ ತಂತ್ರದ ಭಾಗವೊ ಅಥವಾ ನಿಜವೊ ಎಂಬುದು ಸ್ಪಷ್ಟವಿಲ್ಲ. ಆಪರೇಷನ್ ಕಮಲದ ಭಾಗವಾಗಿದ್ದ ಸುಧಾಕರ್ ಇಂಥ ತಂತ್ರಗಳ ಮೊರೆಹೋದರೂ ಆಶ್ಚರ್ಯವಿಲ್ಲ ಎಂದೂ ವಿಶ್ಲೇಷಿಸ ಲಾಗುತ್ತಿದೆ.

ತೆಕ್ಕೆಗೆ ಬಂದಿರುವ ಚಿಕ್ಕಬಳ್ಳಾಪುರವನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಬಿಜೆಪಿ, ಕೈತಪ್ಪಿರುವ ಕ್ಷೇತ್ರವನ್ನು ಪುನಃ ಪಡೆದು ಇಡೀ ಜಿಲ್ಲೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಹಠದಲ್ಲಿ ಕಾಂಗ್ರೆಸ್, ಇವೆರಡರ ನಡುವೆ ಹಳೆಯ ಅಭ್ಯರ್ಥಿಯನ್ನೇ ನೆಚ್ಚಿ ನಿಂತಿರುವ ಜೆಡಿಎಸ್ ಹೂಡಬಹು ದಾದ ರಣತಂತ್ರ - ಇವೆಲ್ಲವುಗಳ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಕದನ ಕಣ ಹಲವು ಕುತೂಹಲಗಳಿಗೆ ಕಾರಣವಾಗಲಿದೆ ಎಂಬುದಂತೂ ಸತ್ಯ.

Similar News

ಈ ವಾರ
ಈ ವಾರ
ಈ ವಾರ
ಈ ವಾರ