ನಿಮ್ಮ ದೋಚುವ ಆಡಳಿತದ ಅವನತಿ 2023ಕ್ಕೆ ಕರ್ನಾಟಕದಿಂದಲೇ ಶುರುವಾಗಲಿದೆ: ಬಿಜೆಪಿಗೆ ಜೆಡಿಎಸ್ ಎಚ್ಚರಿಕೆ

ಅಮುಲ್-ನಂದಿನಿ ವಿಲೀನಕ್ಕೆ ವಿರೋಧ

Update: 2023-01-01 04:32 GMT

ಬೆಂಗಳೂರು, ಜ.1: ಗುಜರಾತ್‌ನ ಹಾಲು ಉತ್ಪಾದಕ ಸಂಸ್ಥೆ ‘ಅಮುಲ್‌’ನೊಂದಿಗೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್–ನಂದಿನಿ)ಯನ್ನು ವಿಲೀನ ಮಾಡುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪ್ರಸ್ತಾವಕ್ಕೆ ಜೆಡಿಎಸ್‌ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಜೆಡಿಎಸ್‌, ನಿಮ್ಮ ದೋಚುವ ಆಡಳಿತದ ಅವನತಿ 2023ಕ್ಕೆ ಕರ್ನಾಟಕದಿಂದಲೇ ಶುರುವಾಗಲಿದೆ ಎಂದು ಎಚ್ಚರಿಸಿದೆ.

ಕೇಂದ್ರ ಸರ್ಕಾರ ರಾಜ್ಯಗಳ ವಿರೋಧದ ನಡುವೆಯೂ, ರಾಜ್ಯ ಪಟ್ಟಿಯಲ್ಲಿದ್ದ ಸಹಕಾರಿ ವಿಷಯದ ಮೇಲೆ ತರಾತುರಿಯಲ್ಲಿ ಸಚಿವಾಲಯವನ್ನು ಸ್ಥಾಪಿಸಿದ್ದರ ಹಿಂದಿರುವ ಮರ್ಮ ಈಗ ತಿಳಿಯುತ್ತಿದೆ. ಅಮಿತ್ ಶಾ ಅವರೇ ನೀವು ಕರ್ನಾಟಕಕ್ಕೆ ಬರುವುದರ ಉದ್ದೇಶವಾದರೂ ಏನು? ವೀಲಿನದ ಹೆಸರಲ್ಲಿ ಕರ್ನಾಟಕದ ಬ್ಯಾಂಕುಗಳನ್ನು ನುಂಗಿ ಹಾಕಿದ್ರಿ, ವಿಮಾನ ನಿಲ್ದಾಣಗಳನ್ನು ಬಂಡವಾಳಶಾಹಿಗಳ ವಶ ಮಾಡಿದ್ರಿ, ಈಗ ನಿಮ್ಮ ವಕ್ರದೃಷ್ಟಿ ನಮ್ಮ ಕೆಎಂಎಫ್ ಮೇಲೆ ಬಿದ್ದಂತಿದೆ ಎಂದು ಟೀಕಿಸಿದೆ.

ಕೆಎಂಎಫ್ ಗೆ ನಿಮ್ಮ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೊಡುಗೆಯಾದರೂ ಏನು? ಕರ್ನಾಟಕದ ಲಕ್ಷಾಂತರ ರೈತರು ಕಟ್ಟಿಬೆಳೆಸಿದ ಸಂಸ್ಥೆ ಇದು, ಇಂದು ರಾಜ್ಯದ ರೈತ ಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬುತ್ತಿರುವ ಸಂಸ್ಥೆಯನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹಗಲುಗನಸನ್ನು ಮೊದಲು ಬಿಟ್ಟುಬಿಡಿ ಎಂದು ಹೇಳಿದೆ.

ಕನ್ನಡಿಗರು ಕಟ್ಟಿಬೆಳೆಸಿದ ಸಂಸ್ಥೆಗಳ ಮೇಲೆ ಯಾಕಿಷ್ಟು ಅಸೂಯೆ ಅಮಿತ್ ಶಾ ಅವರೇ? ರಾಜ್ಯದಲ್ಲಿರುವ ನಿಮ್ಮದೇ ಸರ್ಕಾರ ಕಮಿಷನ್ ದಂದೆ, ಹಗರಣಗಳು ಹಾಗೂ ಭ್ರಷ್ಟಾಚಾರದ ಮೂಲಕ ರಾಜ್ಯವನ್ನು ದೋಚುತ್ತಿದ್ದರೆ, ನೀವು ವೀಲಿನದ ಹೆಸರಲ್ಲಿ ಕನ್ನಡಿಗರು ಕಟ್ಟಿಬೆಳೆಸಿದ ಲಾಭದಾಯಕ ಸಂಸ್ಥೆಗಳನ್ನೇ ದೋಚಲು ಮುಂದಾಗಿದ್ದಿರಾ? ಎಂದು ಜೆಡಿಎಸ್ ಪ್ರಶ್ನಿಸಿದೆ.

ನಿಮ್ಮದು ಡಬಲ್ ಇಂಜಿನ್ ಸರ್ಕಾರವಲ್ಲ ಕನ್ನಡಿಗರ ಪಾಲಿಗೆ ದೋಚುವ ಸರ್ಕಾರ. ನಿಮ್ಮ ದೋಚುವ ಆಡಳಿತದ ಅವನತಿ 2023ಕ್ಕೆ ಕರ್ನಾಟಕದಿಂದಲೇ ಶುರುವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಕೆಎಂಎಫ್ ಮತ್ತು ಅಮುಲ್ ಒಗ್ಗೂಡಿದರೆ ಕರ್ನಾಟಕದ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಅಮಿತ್ ಶಾ ಶುಕ್ರವಾರ ಮಂಡ್ಯದಲ್ಲಿ ಹೇಳಿದ್ದಾರೆ. ಇದಕ್ಕೆ ರಾಜ್ಯದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

Similar News