ದಿಲ್ಲಿ: ರಸ್ತೆ ಅಪಘಾತದಲ್ಲಿ ಯುವತಿ ಸಾವು 12 ಕಿ.ಮೀ. ವರೆಗೆ ಎಳೆದೊಯ್ದ ಕಾರು

Update: 2023-01-02 09:20 GMT

ಹೊಸದಿಲ್ಲಿ, ಜ. 1: ಹೊಸ ವರ್ಷದ ಮೊದಲ ದಿನವೇ ದಿಲ್ಲಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕಾರೊಂದು ಸ್ಕೂಟಿಗೆ ಢಿಕ್ಕಿಯಾದ ಬಳಿಕ ಕೆಳಗೆ ಬಿದ್ದ 20 ವರ್ಷದ ಯುವತಿಯನ್ನು 12 ಕಿ.ಮೀ. ಎಳೆದೊಯ್ದಿದೆ. ಇದರ ಪರಿಣಾಮ ಗಂಭೀರ ಗಾಯಗೊಂಡು ಯುವತಿ ಮೃತಪಟ್ಟಿದ್ದಾಳೆ. 

 ಘಟನೆಯ ಬಳಿಕ ಮಾರುತಿ ಸುಝುಕಿ ಬಲೆನೋ ಕಾರನ್ನು ಪತ್ತೆ ಹಚ್ಚಲಾಗಿದ್ದು, ಅದರಲ್ಲಿದ್ದ ಐವರು ಆರೋಪಿಗಳನ್ನು ಬಂಧಿಸಲಾಯಿತು. ಬಂಧಿತರಲ್ಲಿ ಕ್ರೆಡಿಟ್ ಕಾರ್ಡ್ ಸಂಗ್ರಹಗಾರ, ಚಾಲಕ ಹಾಗೂ ಪಡಿತರ ಅಂಗಡಿಯ ಮಾಲಕ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ದಿಲ್ಲಿಯ ಸುಲ್ತಾನ್ಪುರಿಯಲ್ಲಿ ಈ ಘಟನೆ ನಡೆದಿದೆ. ಸ್ಕೂಟಿಗೆ ಕಾರು ಢಿಕ್ಕಿಯಾದ ಪರಿಣಾಮ ಕಾರಿನ ಚಕ್ರದ ಎಡೆಯಲ್ಲಿ ಯುವತಿಯ ಕಾಲು ಸಿಲುಕಿಕೊಂಡಿತ್ತು. ಆದರೂ ಕಾರು 12 ಕಿ.ಮೀ. ಸಂಚರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪೊಲೀಸ್ ನಿಯಂತ್ರಣ ಕೊಠಡಿಗೆ ಮುಂಜಾನೆ 3.24 ಕರೆಯೊಂದು ಬಂದಿತ್ತು. ಕಾರೊಂದು ಯುವತಿಯ ಮೃತದೇಹವನ್ನು ಎಳೆದೊಯ್ಯುತ್ತಿದೆ ಎಂದು ಕರೆ ಮಾಡಿದ ವ್ಯಕ್ತಿ ತಿಳಿಸಿದ್ದರು. ಬಳಿಕ 4.11ಕ್ಕೆ ಇನ್ನೊಂದು ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ರಸ್ತೆ ಬದಿಯಲ್ಲಿ ಯುವತಿಯ ಮೃತದೇಹವೊಂದು ಬಿದ್ದಿದೆ ಎಂದು ಮಾಹಿತಿ ನೀಡಿದ್ದ. ಕೂಡಲೇ ಪೊಲೀಸರು ಕಾರ್ಯ ಪ್ರವೃತ್ತರಾದರು.   
 
ಮೃತಪಟ್ಟಿ ಯುವತಿಯನ್ನು ಅಂಜಲಿ ಎಂದು ಗುರುತಿಸಲಾಗಿದೆ. ಅಮನ್ ವಿಹಾರ್ನ ನಿವಾಸಿಯಾಗಿರುವ ಅವರು ತಾಯಿ ನಾಲ್ವರು ಸಹೋದರಿಯರು ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ. ಅವರ ತಂದೆ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದರು. 

ಕಾರಿನ ನೋಂದಣಿ ಸಂಖ್ಯೆಯ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಲಾಗಿತ್ತು.  ಆದರೆ ಆರೋಪಿಗಳು, ‘‘ನಮ್ಮ ಕಾರು ಸ್ಕೂಟಿಗೆ ಢಿಕ್ಕಿ ಹೊಡೆಯಿತು. ಆದರೆ, ನಮ್ಮ ಕಾರು ಆಕೆಯನ್ನು ಹಲವು ಕಿ.ಮೀ. ವರೆಗೆ ಎಳೆದೊಯ್ದಿರುವುದು ಗಮನಕ್ಕೆ ಬಂದಿರಲಿಲ್ಲ’’ ಎಂದಿರುವುದಾಗಿ ದಿಲ್ಲಿ ಪೊಲೀಸ್ ಅಧಿಕಾರಿ ಹರೇಂದ್ರ ಕೆ. ಸಿಂಗ್ ತಿಳಿಸಿದ್ದಾರೆ. 

Similar News