2022ರಲ್ಲಿ 22 ಡ್ರೋನ್ ಗಳ ನಾಶ, 317 ಕಿ.ಗ್ರಾಂ. ಹೆರಾಯಿನ್ ವಶ: ಬಿಎಸ್ಎಫ್

Update: 2023-01-01 18:03 GMT

ಹೊಸದಿಲ್ಲಿ, ಜ. 1: 2022ರಲ್ಲಿ ಪಂಜಾಬ್ ನ ಭಾರತ-ಪಾಕ್ ಗಡಿಯಲ್ಲಿ 22 ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ ಹಾಗೂ 317 ಕಿ.ಗ್ರಾಂ. ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆಯ ವಕ್ತಾರ ಶನಿವಾರ ತಿಳಿಸಿದ್ದಾರೆ.

ಗಡಿಯಲ್ಲಿ ಹೆಚ್ಚಿನ ಡ್ರೋನ್ ಗಳನ್ನು ಪತ್ತೆ ಹಚ್ಚಿರುವುದು ಹಾಗೂ ಹೊಡೆದುರುಳಿಸಿರುವುದು ಗಡಿ ಭದ್ರತಾ ಪಡೆ ಎಂದು ಅವರು ಹೇಳಿದ್ದಾರೆ.

ಮಾದಕ ದ್ರವ್ಯ, ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ಡ್ರೋನ್ ಗಳು ಅಕ್ರಮ ಸಾಗಾಟ ಮಾಡುವುದನ್ನು 2019ರಿಂದ ಗಮನಿಸಲಾಗಿತ್ತು. 2021ರಲ್ಲಿ ಪಂಜಾಬ್ ನಲ್ಲಿ ಗಡಿ ಭದ್ರತಾ ಪಡೆ ಒಂದು ಡ್ರೋನ್ ಅನ್ನು ಮಾತ್ರ ಹೊಡೆದುರುಳಿಸಿತ್ತು. 2022ರಲ್ಲಿ ಹೊಡೆದುರುಳಿಸಿದ ಡ್ರೋನ್ ಗಳ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ ಎಂದು ಅವು ತಿಳಿಸಿವೆ.

ಪಂಜಾಬ್ನ ಮುಂಚೂಣಿ ಪ್ರದೇಶದ ಗಡಿ ಭದ್ರತಾ ಪಡೆಯ ಯೋಧರು ಕಟ್ಟೆಚ್ಚರ ವಹಿಸಿದ ಪರಿಣಾಮ  2022ರಲ್ಲಿ ಪ್ರತ್ಯೇಕ ಘಟನೆಗಳಲ್ಲಿ 22 ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ, 316.988 ಕಿ.ಗ್ರಾಂ. ಹೆರಾಯಿನ್, 850 ಸುತ್ತು ಗುಂಡುಗಳೊಂದಿಗೆ 67 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಾಕಿಸ್ತಾನದ 23 ಒಳನುಸುಳುಕೋರರನ್ನು ಹತ್ಯೆಗೈಯಲಾಗಿದೆ, ಪಾಕಿಸ್ತಾನದ 23 ಪ್ರಜೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಬಿಎಸ್ಎಫ್ ವಕ್ತಾರ ತಿಳಿಸಿದ್ದಾರೆ. 

Similar News