ವಿದೇಶಿಗರು ಎರಡು ವರ್ಷಗಳ ಕಾಲ ಮನೆ ಖರೀದಿಸದಂತೆ ನಿಷೇಧ ಹೇರಿದ ಕೆನಡಾ: ಕಾರಣವೇನು ಗೊತ್ತೇ?

Update: 2023-01-02 09:46 GMT

ಒಟ್ಟಾವ: ವಸತಿ ಸಮಸ್ಯೆ ಎದುರಿಸುತ್ತಿರುವ ಸ್ಥಳೀಯರಿಗೆ ಮನೆ ದೊರೆಯುವಂತೆ ಮಾಡಲು ಕೆನಡಾ ಸರ್ಕಾರ ವಿದೇಶಿಗರು ತನ್ನ ದೇಶದಲ್ಲಿ ಎರಡು ವರ್ಷಗಳ ಕಾಲ ಮನೆ ಖರೀದಿಸದಂತೆ ಹೇರಿರುವ ನಿಷೇಧ ರವಿವಾರದಿಂದ ಜಾರಿಗೆ ಬಂದಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ನೂತನ ಕಾಯ್ದೆಯು, ಕೆನಡಾದ ಪ್ರಜೆಗಳಲ್ಲದಿದ್ದರೂ ಕೆನಡಾದಲ್ಲಿ ಖಾಯಂ ಆಗಿ ನೆಲೆಸಿರುವ ನಿವಾಸಿಗಳು ಹಾಗೂ ನಿರಾಶ್ರಿತರಿಗೆ ಮನೆ ಖರೀದಿಸುವ ಅವಕಾಶ ಒದಗಿಸಿದೆ ಎಂದು ವರದಿಯಾಗಿದೆ.

ಈ ಕುರಿತು ಒಟ್ಟಾವ ಸ್ಥಳೀಯ ಆಡಳಿತ ಕೂಡಾ ಡಿಸೆಂಬರ್‌ನಲ್ಲಿ ಸ್ಪಷ್ಟನೆ ನೀಡಿದ್ದು, ಈ ನಿಷೇಧವು ನಗರ ಕೇಂದ್ರಿತ ವಸತಿ ಪ್ರದೇಶಗಳಿಗೆ ಅನ್ವಯಿಸುತ್ತದೆಯೇ ಹೊರತು ವಿಹಾರ ಸ್ವತ್ತುಗಳಾದ ಬೇಸಿಗೆ ಕುಟೀರಗಳಿಗಲ್ಲ ಎಂದು ಹೇಳಿತ್ತು.

ವಸತಿ ನಿಲಯಗಳ ಬೆಲೆ ಗಗನಕ್ಕೇರಿ ಕೆನಡಾ ಪ್ರಜೆಗಳಿಗೆ ಕೈಗೆಟುಕದ ಸ್ಥಿತಿ ತಲುಪಿದ್ದಾಗ, 2021ರ ಚುನಾವಣಾ ಪ್ರಚಾರದಲ್ಲಿ ತಾತ್ಕಾಲಿಕ ಎರಡು ವರ್ಷಗಳ ನಿಷೇಧ ಕ್ರಮ ಜಾರಿಗೊಳಿಸುವ ಕುರಿತು ಪ್ರಧಾನಿ ಜಸ್ಟಿನ್ ಟ್ರುಡೋ ಭರವಸೆ ನೀಡಿದ್ದರು.

ಚುನಾವಣಾ ಪ್ರಚಾರದ ಸಮಯದಲ್ಲಿ, "ಕೆನಡಾ ಪ್ರಜೆಗಳ ಮನೆ ಹೊಂದುವ ಅಪೇಕ್ಷೆಯು ಲಾಭಕೋರರು, ಶ್ರೀಮಂತ ಕಂಪನಿಗಳು ಹಾಗೂ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಇದರಿಂದ ಸಾಕಷ್ಟು ಬಳಕೆಯಾಗದ ಮತ್ತು ಖಾಲಿ ಉಳಿದಿರುವ ಮನೆಗಳು, ವಿಪರೀತ ವದಂತಿಗಳು ಮತ್ತು ಏರುಗತಿಯ ಬೆಲೆಯೇರಿಕೆಯಂತಹ ನೈಜ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಮನೆಗಳು ಜನರಿಗೇ ಹೊರತು ಹೂಡಿಕೆದಾರರಿಗಲ್ಲ" ಎಂದು ಲಿಬರಲ್ ಪಕ್ಷ ವಾಗ್ದಾಳಿ ನಡೆಸಿತ್ತು.

2021ರ ಚುನಾವಣಾ ಗೆಲುವಿನ ನಂತರ ತಾನು ನೀಡಿದ್ದ ಭರವಸೆಯಂತೆಯೇ 'ಕೆನಡಾ ಪ್ರಜೆಗಳಲ್ಲದವರಿಂದ ವಸತಿ ಸ್ವತ್ತಿನ ಖರೀದಿಗೆ ನಿಷೇಧ' ಕಾಯ್ದೆಯನ್ನು ಲಿಬರಲ್ ಪಕ್ಷ ಜಾರಿಗೊಳಿಸಿದೆ.

ವಸತಿ ಪ್ರದೇಶಗಳ ಪ್ರಮುಖ ಮಾರುಕಟ್ಟೆಗಳಾದ ವಾಂಕೋವರ್ ಮತ್ತು ಟೊರೊಂಟೊ ನಗರಾಡಳಿತಗಳೂ ಕೆನಡಾ ಪ್ರಜೆಗಳಲ್ಲದವರು ಹಾಗೂ ಖಾಲಿ ಮನೆಗಳ ಮೇಲೆ ತೆರಿಗೆ ಜಾರಿಗೊಳಿಸಿವೆ.

ಕೆನಡಿಯನ್ ರಿಯಲ್ ಎಸ್ಟೇಟ್ ಅಸೋಸಿಯೇಷನ್ ಪ್ರಕಾರ, 2022ರಲ್ಲಿ ಮನೆಗಳ ದರವು ಗರಿಷ್ಠ ಪ್ರಮಾಣಕ್ಕೆ ತಲುಪಿ, ಸರಾಸರಿ 8,00,000 ಕೆನಡಾ ಡಾಲರ್‌ನಷ್ಟಿದ್ದದ್ದು, ಕಳೆದ ತಿಂಗಳಿನಿಂದ 6,00,000 ಕೆನಡಾ ಡಾಲರ್‌ಗೆ ಕುಸಿದಿದೆ ಎಂದು ತಿಳಿಸಿದೆ.

ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ವಸತಿ ವಲಯದ ತಜ್ಞರು, ಕೆನಡಾದಲ್ಲಿ ವಸತಿ ಮಾಲಕತ್ವ ಹೊಂದಿರುವ ವಿದೇಶಿಗರ ಪ್ರಮಾಣ ಶೇ. 5ಕ್ಕಿಂತ ಕಡಿಮೆ ಇದ್ದು, ರಾಷ್ಟ್ರೀಯ ಸಾಂಖ್ಯಿಕ ಇಲಾಖೆಯ ಪ್ರಕಾರ, ವಿದೇಶಿ ಖರೀದಿದಾರರ ಮೇಲೆ ಹೇರಿರುವ ನಿಷೇಧವು ಮನೆಗಳ ದರ ಹೆಚ್ಚು ಅಗ್ಗವಾಗಿಸುವಲ್ಲಿ ನಿರೀಕ್ಷಿತ ಪರಿಣಾಮ ಬೀರಲಾರದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ರಸ್ತೆ ಗುಂಡಿ ತಪ್ಪಿಸುವ ಪ್ರಯತ್ನದಲ್ಲಿ ಅಪಘಾತಕ್ಕೀಡಾದ ರಿಷಭ್ ಪಂತ್: ಉತ್ತರಾಖಂಡ ಸಿಎಂ

Similar News