ದ್ವೇಷದ ದಳ್ಳುರಿ ಎಬ್ಬಿಸುವ ಮಾತುಗಳಿಗೆ ಕಡಿವಾಣ ಯಾವಾಗ?

Update: 2023-01-03 03:55 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಕಳೆದ ಎರಡೂವರೆ ದಶಕದಿಂದ ದೇಶದಲ್ಲಿ ಜನಾಂಗ ದ್ವೇಷದ ವಿಷ ಕಕ್ಕುವ, ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ಪ್ರಚೋದನಾಕಾರಿ ಭಾಷಣಗಳಿಗೆ ಕಡಿವಾಣ ಹಾಕುವವರು ಇಲ್ಲವಾಗಿದೆ. ಸರಕಾರ ಅಧಿಕಾರ ಸೂತ್ರವೇ ಇಂತಹವರ ಕೈಯಲ್ಲಿ ಇರುವಾಗ ಪೊಲೀಸರು ಕಣ್ಣಿದ್ದೂ ಕುರುಡರಾಗಬೇಕಾಗಿದೆ. ಹೀಗೆ ಬೆಂಕಿಯುಗುಳುವ ಭಾಷಣ ಮಾಡುತ್ತಲೇ ಇಂತಹವರು ನಮ್ಮ ಶಾಸನ ಸಭೆಗಳನ್ನು ಪ್ರವೇಶಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಪ್ರಮೋದ್ ಮುತಾಲಿಕ್, ಜಗದೀಶ್ ಕಾರಂತರಂತಹವರು ಮಾತ್ರವಲ್ಲ ಶಾಸನಗಳನ್ನು ರೂಪಿಸುವ ಸದನದ ಸದಸ್ಯರಾಗಿರುವವರೂ ಸದಾ ಅಲ್ಪಸಂಖ್ಯಾತರ ವಿರುದ್ಧ ಅದರಲ್ಲೂ ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷವನ್ನು ಬಹಿರಂಗವಾಗಿ ಕಾರುತ್ತಲೇ ಇರುತ್ತಾರೆ. ಇತ್ತೀಚೆಗೆ ಶಿವಮೊಗ್ಗಕ್ಕೆ ಬಂದಿದ್ದ ಸಂಸತ್ ಸದಸ್ಯೆ ಪ್ರಜ್ಞಾ ಸಿಂಗ್ ಠಾಕೂರ್ ತಮ್ಮ ಸ್ಥಾನದ ಘನತೆಯನ್ನು ಗಾಳಿಗೆ ತೂರಿ ಮುಸ್ಲಿಮರ ವಿರುದ್ಧ ಹಿಂದೂಗಳು ಆಯುಧಗಳನ್ನು ಕೈಗೆತ್ತಿಕೊಳ್ಳಬೇಕೆಂದು ಬಹಿರಂಗವಾಗಿ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಕಳೆದ ಡಿಸೆಂಬರ್ 18ರಂದು ಹಿಂದೂ ಜಾಗರಣ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಜ್ಞಾ ಸಿಂಗ್ ಠಾಕೂರ್ ಹಿಂದೂಗಳು ತಮ್ಮ ಹೆಣ್ಣು ಮಕ್ಕಳ ರಕ್ಷಣೆಗೆ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಬೇಕೆಂದು ಕರೆ ನೀಡಿದ್ದಾರೆ. ‘‘ಮನೆಯಲ್ಲಿ ಹರಿತವಾಗಿರುವ ಚಾಕು, ಚೂರಿಗಳನ್ನು ಇಟ್ಟುಕೊಳ್ಳಿ. ಇವು ತರಕಾರಿಗಳನ್ನು ಕತ್ತರಿಸಿದಂತೆ ನಮ್ಮ ವೈರಿಗಳ ಬಾಯಿ ಮತ್ತು ತಲೆಗಳನ್ನು ಕತ್ತರಿಸಬಲ್ಲವು’’ ಎಂದು ಹೇಳಿದ್ದಾರೆ. ಈ ಪ್ರಜ್ಞಾ ಸಿಂಗ್ ಮಾತ್ರವಲ್ಲ ಪ್ರಚೋದನಾಕಾರಿ ಮಾತುಗಳಿಗೆ ಹೆಸರಾದ ಜಗದೀಶ್ ಕಾರಂತ್ ಎಂಬ ಸಂಘ ಪರಿವಾರದ ವ್ಯಕ್ತಿ ಇತ್ತೀಚೆಗೆ ಸಭೆಯೊಂದರಲ್ಲಿ ಆಯುಧಗಳಿಂದ ಮುಸಲ್ಮಾನರ ತಲೆ ಕತ್ತರಿಸಬೇಕೆಂದು ಬಹಿರಂಗವಾಗಿ ಕರೆ ನೀಡಿದ್ದಾನೆ. ಈತನಿಂದ ದಕ್ಷಿಣ ಕನ್ನಡ ಮತ್ತು ಕೊಡಗು ಮುಂತಾದ ಕಡೆ ಕೋಮು ಹಿಂಸಾಚಾರ ನಡೆದ ಉದಾಹರಣೆಗಳಿವೆ. ಈತನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ ರಾಜ್ಯ ಬಿಜೆಪಿ ಸರಕಾರ ಈತ ಮಾತ್ರವಲ್ಲ ಈ ರೀತಿ ಮಾತಾಡಿದ ಕೆಲವರ ಮೇಲೆ ಹಾಕಲಾಗಿದ್ದ ಮೊಕದ್ದಮೆ ಗಳನ್ನು ವಾಪಸ್ ಪಡೆದಿದೆ. ಇವರಷ್ಟೇ ಅಲ್ಲ ಸಂಸದರಾದ ನಳಿನ್ ಕುಮಾರ್ ಕಟೀಲು, ಶಾಸಕರಾದ ಸಿ.ಟಿ.ರವಿ, ಬಸನಗೌಡ ಪಾಟೀಲ (ಯತ್ನಾಳ) ಮುಂತಾದವರು ಲಂಗು ಲಗಾಮಿಲ್ಲದೇ ಇಂತಹ ಮಾತುಗಳನ್ನು ಆಡುತ್ತಲೇ ಇರುತ್ತಾರೆ

ಸಾಮಾಜಿಕ ಶಾಂತಿ ಮತ್ತು ನೆಮ್ಮದಿಯನ್ನು ಕದಡುವ ದ್ವೇಷ ಭಾಷಣಗಳಿಗೆ ಕಡಿವಾಣ ಹಾಕಬೇಕೆಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿತ್ತು. ಅದಕ್ಕಾಗಿ ಕೆಲವು ಮಾರ್ಗಸೂಚಿಗಳನ್ನು ನೀಡಿತ್ತು. ಯಾರೇ ಪ್ರಚೋದನಾಕಾರಿಯಾದ ದ್ವೇಷ ಭಾಷಣವನ್ನು ಮಾಡಿದರೂ ಸರಕಾರ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು, ದೂರು ಬರಲಿ ಎಂದು ಕಾಯಬಾರದು ಎಂದು ಸುಪ್ರೀಂ ಕೋರ್ಟ್ ಸರಕಾರಕ್ಕೆ ಸ್ಪಷ್ಟವಾಗಿ ಸೂಚನೆ ನೀಡಿತ್ತು. ಸುಪ್ರೀಂ ಕೋರ್ಟ್ ಸೂಚನೆ ನೀಡಿದ ನಂತರವೂ ಶಿವಮೊಗ್ಗದಲ್ಲಿ ಪ್ರಚೋದನಾಕಾರಿ ಮಾತುಗಳನ್ನು ಆಡಿದ ಪ್ರಜ್ಞಾ ಸಿಂಗ್ ಠಾಕೂರ್ ಮೇಲೆ ಪೊಲೀಸರು ಸುಪ್ರೀಂ ಕೋರ್ಟಿನ ಮಾರ್ಗ ಸೂಚಿಯನ್ನು ಪಾಲಿಸಲಿಲ್ಲ. ದೂರು ಬರುವವರೆಗೆ ಸುಮ್ಮನಿದ್ದು ಆನಂತರ ತಡ ಮಾಡಿ ಕಾಂಗ್ರೆಸ್ ಪಕ್ಷ ದೂರು ನೀಡಿದ ಮೇಲೆ ಅದನ್ನು ಆಧರಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ಹೀಗಾಗಿ ಹಿಂಸೆಗೆ ಪ್ರಚೋದಿಸುವ ಇಂತಹವರಿಗೆ ಕಡಿವಾಣವೇ ಇಲ್ಲದಂತಾಗಿದೆ.
ಈ ರೀತಿ ಪ್ರಚೋದನಾಕಾರಿ ಮಾತುಗಳನ್ನು ಆಡುವವರು ಯಾವ ಸಂಘಟನೆ, ಸಿದ್ಧಾಂತ ಮತ್ತು ಪಕ್ಷಕ್ಕೆ ಸೇರಿದವರೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ತಮ್ಮದೇ ಪಕ್ಷದ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರ ಗಮನವನ್ನು ಬೇರೆಡೆ ಸೆಳೆಯಲು, ರಾಜಕೀಯ ಲಾಭ ಮಾಡಿಕೊಳ್ಳಲು ಇಂತಹವರು ದ್ವೇಷ ಭಾಷಣವನ್ನು ಮಾಡುತ್ತಾರೆ. ಜಾತಿ, ಮತದ ಆಧಾರದಲ್ಲಿ ಜನರನ್ನು ವಿಭಜಿಸಿ ಬಹುಸಂಖ್ಯಾತರ ವೋಟ್ ಬ್ಯಾಂಕ್ ನಿರ್ಮಿಸಿ ಭದ್ರ ಮಾಡಿಕೊಳ್ಳುವುದು ಇವರ ರಹಸ್ಯ ಕಾರ್ಯಸೂಚಿಯಾಗಿರುತ್ತದೆ. ಜನರು ಇವರಿಗೆ ಅಧಿಕಾರ ನೀಡಿರುವುದು ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಶಾಂತಿ ಮತ್ತು ನೆಮ್ಮದಿಯಿಂದ ಬದುಕುವಂತೆ ಮಾಡಲಿ ಎಂದು. ಆದರೆ ಇವರು ಮಾಡುತ್ತಿರುವುದೇನು?

ತನ್ನ ಪರಿವಾರದವರಿಂದ ಸಾಧ್ವಿ ಎಂದು ಕರೆಸಿಕೊಳ್ಳುವ ಪ್ರಜ್ಞಾ ಸಿಂಗ್ ಠಾಕೂರ್ ಮಹಾರಾಷ್ಟ್ರದ ಮಾಲೆಗಾಂವ್ ಭಯೋತ್ಪಾದನಾ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾರೆ. ಆರು ಮಂದಿ ಅಮಾಯಕರ ಸಾವಿಗೆ ಕಾರಣವಾದ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಈಕೆ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಹಿಂಸೆಯನ್ನು ಪ್ರಚೋದಿಸುವ ಮಾತುಗಳನ್ನು ಆಡುವುದು ಈಕೆಯ ಚಾಳಿ. ಲವ್ ಜಿಹಾದ್, ಮತಾಂತರ, ಗೋ ಹತ್ಯೆ ಇಂತಹ ಹಲವಾರು ವಿಷಯಗಳನ್ನು ಎತ್ತಿಕೊಂಡು ಅತ್ಯಂತ ಹಿಂಸಾತ್ಮಕ ಮಾತುಗಳನ್ನು ಈಕೆ ಆಗಾಗ ಆಡುತ್ತಲೇ ಇರುತ್ತಾರೆ. ಹಿಂದೊಮ್ಮೆ ಗಾಂಧೀಜಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಮಹಾನ್ ದೇಶಭಕ್ತ ಎಂದು ಹೊಗಳಿ ಮಾತಾಡಿದ್ದರು. ಇಂತಹ ಹೇಳಿಕೆಯನ್ನು ನೀಡಿದ ಪ್ರಜ್ಞಾ ಸಿಂಗ್ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದರು. ಬಿಜೆಪಿಯ ಶಿಸ್ತು ಸಮಿತಿ ಕೂಡ ಗಮನ ಹರಿಸಿತ್ತು. ಆದರೆ ಇವೆಲ್ಲ ಬರೀ ಕಣ್ಣೊರೆಸುವ ತಂತ್ರವಷ್ಟೇ ಆಗಿದ್ದು ಮುಂದೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಪ್ರಜ್ಞಾ ಸಿಂಗ್ ದ್ವೇಷದ ವಿಷ ಕಕ್ಕುವ ಭಾಷಣಗಳನ್ನು ಮುಂದುವರಿಸಿದ್ದಾರೆ. ಪಕ್ಷವಾಗಲಿ, ಪ್ರಧಾನಿ ಅವರಾಗಲಿ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇದು ಭಾರತದ ಇಂದಿನ ಸ್ಥಿತಿ.

ಹಾದಿ, ಬೀದಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡುವ ಇಂತಹವರು ನಮ್ಮ ಸಂಸತ್ತನ್ನು ಪ್ರವೇಶಿಸಿರುವುದು ಪ್ರಜಾಪ್ರಭುತ್ವದ ದುರಂತ. ಇವರಿಗೆ ಸಂಸತ್ತಿನಲ್ಲಿ ಸ್ಥಾನ,ಮಾನ ಕಲ್ಪಿಸಿದ ಪಕ್ಷ ಮತ್ತು ಸಂಘಪರಿವಾರದ ನಾಯಕರು ಮತ್ತು ಬೆಂಬಲಿಗರು ಪ್ರಜ್ಞಾ ಸಿಂಗ್ ಠಾಕೂರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಇಂತಹ ಸಮರ್ಥನೆ ಅರ್ಥ ಹೀನ. ಸಂಘ ಪರಿವಾರಕ್ಕೆ ಸೇರಿದ ಪ್ರಜ್ಞಾ ಸಿಂಗ್‌ರಂತಹವರ ಗುರಿ ಅಲ್ಪಸಂಖ್ಯಾತರು ಮತ್ತು ಅದರಲ್ಲೂ ವಿಶೇಷವಾಗಿ ಮುಸಲ್ಮಾನರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಈಗ ಅಧಿಕಾರದಲ್ಲಿ ಇರುವವರು ಜಾಣ ಮೌನವನ್ನು ತಾಳಿದ್ದಾರೆ. ಪೊಲೀಸರು ಅಸಹಾಯಕರಾಗಿದ್ದಾರೆ.

ಭಾರತದ ನಾಗರಿಕರ ರಕ್ಷಣೆ ಮಾಡಲು, ಶಾಂತಿ ಕಾಪಾಡಲು ಪೊಲೀಸ್ ಇಲಾಖೆಯಿದೆ. ಕಾನೂನು ಬದ್ಧ ಆಡಳಿತ ವ್ಯವಸ್ಥೆ ಇದೆ. ಹೀಗಿರುವಾಗ ಹಿಂದೂಗಳು ತಮ್ಮ ರಕ್ಷಣೆಗಾಗಿ ಆಯುಧಗಳನ್ನು ಹರಿತ ಮಾಡಿಕೊಳ್ಳಬೇಕೆಂದು ಬಹಿರಂಗವಾಗಿ ಕರೆ ನೀಡುವುದು ಯಾವ ಉದ್ದೇಶದಿಂದ? ಇಂತಹ ಬಹಿರಂಗ ಕರೆ ನೀಡುವುದಾದರೆ ಪೊಲೀಸರಾದರೂ ಯಾಕೆ ಬೇಕು? ಸರಕಾರವಾದರೂ ಯಾಕಿರಬೇಕು? ಇಂಥ ನರಮೇಧಕ್ಕೆ ಪ್ರಚೋದನೆ ನೀಡುವ ಹೇಳಿಕೆ ಮೂಲಕ ತಮ್ಮ ಪರಿಕಲ್ಪನೆಯ ಮನುವಾದಿ ಹಿಂದೂ ರಾಷ್ಟ್ರವನ್ನು ನಿರ್ಮಿಸುವುದು ಇವರ ರಹಸ್ಯ ಕಾರ್ಯಸೂಚಿಯಾಗಿದೆ.

ಭಾರತದ ಪ್ರಜೆಗಳು ಬಿಜೆಪಿಗೆ ಅಧಿಕಾರ ನೀಡಿರುವುದು ಶಾಂತಿ, ನೆಮ್ಮದಿಯಿಂದ ಬದುಕುವ ಸರಕಾರ ನೀಡಲಿ ಎಂದು. ಆದರೆ ವಿಷಾದದ ಸಂಗತಿಯೆಂದರೆ ಜನರಿಗೆ ರಕ್ಷಣೆ ನೀಡಬೇಕಾದ ಸರಕಾರದ ಮಹತ್ವದ ಸ್ಥಾನದಲ್ಲಿ ಇರುವವರೇ ಬಹಿರಂಗವಾಗಿ ಆಯುಧ ಝಳಪಿಸಲು, ಪರೋಕ್ಷವಾಗಿ ರಕ್ತಪಾತಕ್ಕೆ ಕರೆ ನೀಡುವುದು ಅತ್ಯಂತ ಖಂಡನೀಯವಾದ ಸಂಗತಿ. ಇಂತಹವರಿಂದಾಗಿ ಸಮಾಜದಲ್ಲಿ ದ್ವೇಷದ ವಾತಾವರಣ ಸಹಜ ಎನ್ನುವಂತಾಗಿದೆ. ಪ್ರಜ್ಞಾವಂತ ಪ್ರಜೆಗಳು, ನಿಜವಾದ ದೇಶ ಭಕ್ತರು ಜಾಗೃತರಾದರೆ ಮಾತ್ರ ಈ ಬಹುತ್ವ ಭಾರತ ಸುರಕ್ಷಿತವಾಗಿ ಉಳಿಯುತ್ತದೆ.

Similar News