ಮಂಗಳೂರು | ಖೋಟಾ ನೋಟು ಚಲಾವಣೆ: ಇಬ್ಬರು ಆರೋಪಿಗಳ ಬಂಧನ
500 ರೂ. ಮುಖಬೆಲೆಯ 4.50 ಲಕ್ಷ ರೂ. ಖೋಟಾ ನೋಟುಗಳ ವಶಕ್ಕೆ
ಮಂಗಳೂರು, ಜ.3: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಮೇರೆಗೆ ಕದ್ರಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಮಂಗಳವಾರ ತನ್ನ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೋಮವಾರ ನಗರದ ನಂತೂರು ಜಂಕ್ಷನ್ ಬಳಿ ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಖೋಟಾ ನೋಟುಗಳನ್ನು ಚಲಾವಣೆಯ ಜಾಲ ಬಯಲಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ನಿವಾಸಿ ನಿಝಾಮುದ್ದೀನ್ ಯಾನೆ ನಿಝಾಮ್ (32), ಜಪ್ಪುವಿನ ರಝೀಮ್ ಯಾನೆ ರಾಫಿ (31) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 500 ರೂ. ಮುಖಬೆಲೆಯ 4.50 ಲಕ್ಷ ರೂ. ಖೋಟಾ ನೋಟುಗಳನ್ನು ವಶಪಡಿಸಲಾಗಿದೆ ಎಂದರು.
ಬೆಂಗಳೂರಿನ ಡ್ಯಾನಿಯಲ್ ಎಂಬಾತನಿಂದ ಖೋಟಾ ನೋಟುಗಳನ್ನು ಪಡೆದಿರುವ ಆರೋಪಿಗಳು ನಗರದಲ್ಲಿ ಸ್ಕೂಟರ್‌ವೊಂದನ್ನು ಕದ್ದು ಅದರಲ್ಲಿ ಹಣ ಚಲಾವಣೆಗೆ ಯತ್ನಿಸುತ್ತಿದ್ದರು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.