ವಿಕಲಚೇತನ ಸ್ನೇಹಿಯಲ್ಲದ ಹೊಸ ಬಸ್ ಗಳ ಖರೀದಿಗೆ ಆಕ್ಷೇಪ: ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಜ.3: ಬಿಎಂಟಿಸಿಯು (BMTC) 840 ಹೊಸ ಬಸ್ ಖರೀದಿಗೆ ಆಹ್ವಾನಿಸಿರುವ ಟೆಂಡರ್ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ವಿಶೇಷಚೇತನ ಸುನಿಲ್‍ಕುಮಾರ್ ಜೈನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ರಾಜ್ಯ ಸಾರಿಗೆ ಇಲಾಖೆ, ಕೇಂದ್ರ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಅರ್ಜಿದಾರರ ಪರ ವಕೀಲರು, 2022ರ ಅ.28ರಂದು ಬಿಎಂಟಿಸಿಯು 840 ಹೊಸ ಬಸ್‍ಗಳ ಖರೀದಿಗೆ ಟೆಂಡರ್ ಆಹ್ವಾನಿಸಿ, ಅಧಿಸೂಚನೆ ಹೊರಡಿಸಿದೆ. ಖರೀದಿಸಲು ಉದ್ದೇಶಿಸಿರುವ ಬಸ್‍ಗಳ ಅಂಗವಿಕಲರಿಗೆ ಸೂಕ್ತ ಸೌಲಭ್ಯಗಳಿಲ್ಲ. ಅವರು ಬಸ್ ಹತ್ತಲು ಹಾಗೂ ಗಾಲಿ ಕುರ್ಚಿ ಪ್ರವೇಶಿಸಲು ಅನುಕೂಲತೆ ಇಲ್ಲ. ಚಾಸಿಸ್‍ನ(ತಳಕಟ್ಟು) ಎತ್ತರ 1000 ಮಿಲಿ ಮೀಟರ್ ಇರಬೇಕೆಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಆದರೆ, ಇದು ಮೋಟಾರು ವಾಹನ ಕಾಯಿದೆಯ ನಿಯಮಗಳಿಗೆ ವಿರುದ್ಧವಾಗಿದೆ.
ಹೀಗಾಗಿ, ಖರೀದಿಸಲು ಉದ್ದೇಶಿಸಿರುವ ಬಸ್‍ಗಳ ಚಾಸಿಸ್‍ನ ಎತ್ತರ 1000 ಮಿಲಿ ಮೀಟರ್ ಇರಬೇಕು ಎನ್ನುವುದಕ್ಕೆ ಸೀಮಿತವಾಗಿ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ, ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.
ಇದನ್ನೂ ಓದಿ: ನಟ ಕಿಶೋರ್ ಟ್ವಿಟರ್ ಖಾತೆ ಅಮಾನತು