×
Ad

ಮಂಗಳೂರು: ವಿಶ್ವ ಬ್ರೈಲ್ ಲಿಪಿ ದಿನಾಚರಣೆ

Update: 2023-01-04 18:31 IST

ಮಂಗಳೂರು: ನಗರದ ಸೇವಾ ಭಾರತಿ ವತಿಯಿಂದ ಕೋಟೆಕಣಿಯಲ್ಲಿ ನಡೆಯುತ್ತಿರುವ ರೋಮನ್ ಆ್ಯಂಡ್ ಕ್ಯಾಥರಿನ್ ವಸತಿಯುತ ದೃಷ್ಟಿಮಾಂದ್ಯರ ಶಾಲೆಯಲ್ಲಿ ಬುಧವಾರ ವಿಶ್ವ ಬ್ರೈಲ್ ದಿನಾಚರಣೆ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಮೇಯರ್ ಶಶಿಧರ ಹೆಗ್ಡೆ, ದೃಷ್ಟಿಮಾಂದ್ಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತಂದು ಅವರ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಅವರ ಸೇವೆ ಸಲ್ಲುವಂತೆ ಮಾಡುವ ನಿಟ್ಟಿನಲ್ಲಿ ಬ್ರೈಲ್ ಲಿಪಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ದೃಷ್ಟಿಮಾಂದ್ಯರ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಜರ್ಮನಿಯಿಂದ ಆಗಮಿಸಿ ನಗರದಲ್ಲಿ ದೃಷ್ಟಿಮಾಂದ್ಯರ ಶಾಲೆ ಆರಂಭಿಸಿದ ಕ್ಯಾಥರಿನ್ ಲೋಬೊ ಕಂಡಿದ್ದ ಕನಸು ಈ ಶಾಲೆಯ ಮೂಲಕ ನನಸಾಗುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯು ಬ್ರೈಲ್ ಶಿಕ್ಷಣದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದು, ಸಮಾಜ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಭಾರತೀಯ ರೆಡ್ ಕ್ರಾಸ್‌ನ ಅಂಗವಿಕಲ ಉಪಸಮಿತಿ ಮುಖ್ಯಸ್ಥ ಡಾ.ಕೆ.ಆರ್.ಕಾಮತ್ ಮಾತನಾಡಿ, ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಮಂದಿ ದೃಷ್ಟಿಮಾಂದ್ಯರಿದ್ದು, ಬ್ರೈಲ್‌ಲಿಪಿ ಶಿಕ್ಷಣ ಅವರಿಗೆ ವರದಾನವಾಗಿದೆ ಎಂದರು.

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ನರರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜೋವರ್ ಲೋಬೊ,  ಪ್ರಾಚಾರ್ಯ ಡೇಸಾ,  ಸೇವಾಭಾರತಿ ಟ್ರಸ್ಟ್ ಅಧ್ಯಕ್ಷೆ ಸುಮತಿ ಶೆಣೈ, ಟ್ರಸ್ಟಿ ನಾಗರಾಜ ಭಟ್ ಮತ್ತಿತರರು ಉಪಸ್ಥಿತರಿದ್ದರು.

ದಿವ್ಯಾ ನಿತಿನ್ ಭಟ್ ಸ್ವಾಗತಿಸಿ, ಶಿಕ್ಷಕಿ ರಶ್ಮಿ ವಂದಿಸಿದರು.

Similar News