×
Ad

ಉಡುಪಿ: ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ನಡುವೆ ದೈನಂದಿನ ಮೆಮು ರೈಲು ಪುನರಾರಂಭ

Update: 2023-01-04 20:08 IST

ಉಡುಪಿ: ಕೋವಿಡ್-19ರ ಕಾರಣ ಕಳೆದ ಎರಡು ವರ್ಷಗಳಿಂದ ನಿಲ್ಲಿಸಲಾಗಿದ್ದ ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ನಡುವೆ ವಾರದಲ್ಲಿ ಆರು ದಿನ (ರವಿವಾರ ಹೊರತು ಪಡಿಸಿ) ಸಂಚರಿಸುವ ದೈನಂದಿನ ಮೆಮು (ಹಿಂದಿನ ಡೆಮು) ಎಕ್ಸ್‌ಪ್ರೆಸ್ ರೈಲು ನಾಳೆಯಿಂದ ತನ್ನ ಸಂಚಾರವನ್ನು ಪುನರಾರಂಭಿಸಲಿದೆ.

ಈ ಮೊದಲು ಡೀಸಲ್‌ನಲ್ಲಿ ಓಡುತಿದ್ದ ಡೆಮು ರೈಲು ಈ ಬಾರಿ ವಿದ್ಯುತ್ ರೈಲಾಗಿ (ರೈಲು ನಂ.10107/10108) ಪರಿವರ್ತನೆಯಾಗಿದೆ. ಇದು ಎಂಟು ಕಾರ್ ಮೆಮು ಕೋಚ್‌ಗಳನ್ನು ಹೊಂದಿರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲು ನಂ.10107 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಬೆಳಗ್ಗೆ 5:15ಕ್ಕೆ ಮಡಗಾಂವ್‌ನಿಂದ ಪ್ರಯಾಣ ಬೆಳೆಸಲಿದ್ದು, ಅದೇ ದಿನ ಅಪರಾಹ್ನ 12:15ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

ಬಳಿಕ ರೈಲು ನಂ.10108 ಆಗಿ ಪ್ರತಿದಿನ ಅಪರಾಹ್ನ 2:45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಪ್ರಯಾಣ ಪ್ರಾರಂಭಿಸುವ ರೈಲು ಅದೇ ದಿನ ರಾತ್ರಿ 10:00ಗಂಟೆಗೆ ಮಡಗಾಂವ್ ಜಂಕ್ಷನ್ ತಲುಪಲಿದೆ.

ಮೆಮು ರೈಲಿಗೆ ಕನಕೋಣ, ಅಸ್ನೋಟಿ, ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟಾ, ಹೊನ್ನಾವರ, ಮಂಕಿ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಸೇನಾಪುರ, ಕುಂದಾಪುರ, ಬಾರ್ಕೂರು, ಉಡುಪಿ, ಮೂಲ್ಕಿ, ಸುರತ್ಕಲ್ ಹಾಗೂ ಮಂಗಳೂರು ಜಂಕ್ಷನ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ನಿಲುಗಡೆಯ ಸಮಯ ಹಾಗೂ ರೈಲಿನ ಕುರಿತ ಇನ್ನಷ್ಟು ಮಾಹಿತಿಗಳಿಗಾಗಿ  ಕೊಂಕಣ ರೈಲ್ವೆಯ ವೆಬ್‌ಸೈಟ್ ಅಥವಾ ಎನ್‌ಟಿಇಎಸ್ ಆ್ಯಪ್‌ನ ಸಂಪರ್ಕಿಸುವಂತೆ ತಿಳಿಸಲಾಗಿದೆ. ಸೆನಟೈಸ್ ಬಳಕೆ, ಸಾಮಾಜಿಕ ಅಂತರ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೋವಿಡ್-19 ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಪಾಲಿಸಿ ರೈಲಿನಲ್ಲಿ ಪ್ರಯಾಣಿಸುವಂತೆ  ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Similar News