ಯೋಧರು ಮೊಬೈಲ್ ಬಳಸಿದ್ದು ಉಕ್ರೇನ್ ದಾಳಿ ನಡೆಸಲು ನೆರವಾಯಿತು: ರಶ್ಯ ಹೇಳಿಕೆ

Update: 2023-01-04 17:42 GMT

ಮಾಸ್ಕೊ, ಜ.4: ಪೂರ್ವ ಉಕ್ರೇನ್‍ನ ಡೊನೆಟ್ಸ್ಕ್ ವಲಯದಲ್ಲಿ 89 ಯೋಧರ ಸಾವಿಗೆ ಕಾರಣವಾದ ಉಕ್ರೇನ್ ಕ್ಷಿಪಣಿ ದಾಳಿಗೆ ರಶ್ಯದ ಯೋಧರು ಮೊಬೈಲ್ ಬಳಸಿರುವುದು ನೆರವಾಗಿದೆ ಎಂದು ರಶ್ಯದ ವಿದೇಶಾಂಗ ಇಲಾಖೆ ಬುಧವಾರ ಪ್ರತಿಪಾದಿಸಿದೆ.

ಉಕ್ರೇನ್‍ನಿಂದ ರಶ್ಯ ವಶಕ್ಕೆ ಪಡೆದಿರುವ ಡೊನೆಟ್ಸ್ಕ್ ವಲಯದಲ್ಲಿನ ಮಕೀವ್ಕಾ ನಗರದ ವೃತ್ತಿಪರ ಕಾಲೇಜಿನಲ್ಲಿ ಆಶ್ರಯ ಪಡೆದಿದ್ದ ರಶ್ಯದ ತುಕಡಿಯನ್ನು ಗುರಿಯಾಗಿಸಿ ಉಕ್ರೇನ್ ನಡೆಸಿದ್ದ ಕ್ಷಿಪಣಿ ದಾಳಿಯಲ್ಲಿ ರಶ್ಯದ 89 ಯೋಧರು ಹತರಾಗಿದ್ದರು. ಈ ಘಟನೆಯ ಬಗ್ಗೆ ರಶ್ಯದಲ್ಲಿ ಆಕ್ರೋಶ ಭುಗಿಲೆದ್ದಿದ್ದು ಇದು ರಶ್ಯ ಯೋಧರಿಗೆ ಆಗಿರುವ ಅವಮಾನವಾಗಿದ್ದು ಅಧ್ಯಕ್ಷ ಪುಟಿನ್‍ಗೆ ಆಗಿರುವ ಹಿನ್ನಡೆಯಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ರಶ್ಯ ಯೋಧರು ಹತ್ಯೆಯಾಗಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ, ಯೋಧರು ಅಕ್ರಮವಾಗಿ, ಸಾಮೂಹಿಕವಾಗಿ ಮೊಬೈಲ್ ಬಳಸಿರುವುದು ಈ ದಾಳಿಗೆ ಮೂಲಕಾರಣ ಎಂಬುದು ಸ್ಪಷ್ಟವಾಗಿದೆ. ಮೊಬೈಲ್ ಸಿಗ್ನಲ್ ಅನ್ನು ಪತ್ತೆಹಚ್ಚಿದ ಶತ್ರುಗಳು ನಮ್ಮ ಯೋಧರ ನೆಲೆಯ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ.

Similar News