ರಾಜಕೀಯ ಜಾಹೀರಾತುಗಳ ಮೇಲಿನ ನಿಷೇದ ಸಡಿಲ: ಟ್ವಿಟರ್
ಹೊಸದಿಲ್ಲಿ, ಜ. 4: ರಾಜಕೀಯ ಜಾಹೀರಾತುಗಳ ಮೇಲಿನ ನಿಷೇಧವನ್ನು ಸಡಿಲಗೊಳಿಸುವುದಾಗಿ ಟ್ವಿಟರ್ ಮಂಗಳವಾರ ಹೇಳಿದೆ.
2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮುನ್ನ, 2019ರಲ್ಲಿ ತನ್ನ ಮಾಧ್ಯಮದಲ್ಲಿ ರಾಜಕೀಯ ಜಾಹೀರಾತುಗಳನ್ನು ಟ್ವಿಟರ್ ನಿಷೇಧಿಸಿತ್ತು. ಅಮೆರಿಕದ 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಲು ರಶ್ಯ ಪ್ರಯತ್ನಿಸಿತ್ತು ಎನ್ನುವ ಸಂಗತಿ ಬಯಲಾದ ಬಳಿಕ ಅದು ಈ ನಿರ್ಧಾರವನ್ನು ತೆಗೆದುಕೊಂಡಿತ್ತು.
‘‘ಇಂಟರ್ನೆಟ್ನಲ್ಲಿ ಪ್ರಸಾರಗೊಳ್ಳುವ ರಾಜಕೀಯ ಜಾಹೀರಾತುಗಳು ನಾಗರಿಕ ವಲಯಕ್ಕೆ ಸಂಪೂರ್ಣ ಹೊಸ ಸವಾಲುಗಳನ್ನು ಒಡ್ಡುತ್ತವೆ. ಆ ಸವಾಲುಗಳೆಂದರೆ: ಯಂತ್ರಗಳ ಮೂಲಕ ಸಂದೇಶ ಮತ್ತು ಅದರ ಗುರಿಯನ್ನು ಗರಿಷ್ಠಗೊಳಿಸುವುದು, ನಿರ್ಬಂಧರಹಿತ ತಪ್ಪು ಮಾಹಿತಿಗಳು ಮತ್ತು ಗಾಢ ಸುಳ್ಳು ಸುದ್ದಿಗಳು. ಇವೆಲ್ಲವೂ ದಿನೇ ದಿನೇ ತಮ್ಮ ವೇಗ, ನೈಪುಣ್ಯತೆ ಮತ್ತು ಅಗಾಧತೆಯನ್ನು ವಿಸ್ತರಿಸಿಕೊಳ್ಳುತ್ತಿವೆ’’ ಎಂಬುದಾಗಿ 2019ರಲ್ಲಿ ಟ್ವಿಟರ್ ಸ್ಥಾಪಕ ಜಾಕ್ ಡೊರ್ಸಿ ಹೇಳಿದ್ದರು.
ಆದರೆ, ಈಗ ನೂತನ ಮಾಲೀಕ ಎಲಾನ್ ಮಸ್ಕ್ರ ಒಡೆತನದಲ್ಲಿರುವ ಟ್ವಿಟರ್, ರಾಜಕೀಯ ಜಾಹೀರಾತುಗಳಿಗೆ ಮರುಜೀವ ನೀಡಲು ನಿರ್ಧರಿಸಿದೆ. ಈ ನಿರ್ಧಾರವು 2024ರಲ್ಲಿ ಅಮೆರಿಕ ಮತ್ತು ಭಾರತದಲ್ಲಿ ನಡೆಯಲಿರುವ ಚುನಾವಣೆಗಳ ಮೇಲೆ ಮಹತ್ವದ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ.
ಅಮೆರಿಕದಲ್ಲಿ, ‘ಕಾರಣ ಆಧಾರಿತ ಜಾಹೀರಾತು’ ನೀತಿಯಲ್ಲೂ ಸಡಿಲಿಕೆ ಮಾಡಲಾಗುವುದು ಎಂದು ಟ್ವಿಟರ್ ಹೇಳಿದೆ. ಅದೂ ಅಲ್ಲದೆ, ತನ್ನ ಜಾಹೀರಾತು ನೀತಿಯು ಟೆಲಿವಿಶನ್ ಮತ್ತು ಇತರ ಮಾಧ್ಯಮ ಕಂಪೆನಿಗಳ ನೀತಿಗಳಿಗೆ ಸಮವಾಗಿರುವಂತೆ ನೋಡಿಕೊಳ್ಳಲಾಗುವುದು ಎಂದಿದೆ.