ಉಡುಪಿ: ಅಂಬಲಪಾಡಿ ಬೈಪಾಸ್ ಸಮೀಪ ಸರಣಿ ಅಪಘಾತ; ಹಲವರಿಗೆ ಗಾಯ, ವಾಹನಗಳು ಜಖಂ
ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಬೈಪಾಸ್ ಬಳಿ ಸರಣಿ ಅಪಘಾತದಿಂದ ಹಲವರಿಗೆ ಸಣ್ಣಪುಟ್ಟ ಗಾಯಗಳಾದ ಹಾಗೂ ಹಲವು ವಾಹನಗಳಿಗೆ ಜಖಂ ಆದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಅಂಬಲಪಾಡಿ ಸಮೀಪದ ಹೋಂಡಾ ಬೈಕ್ ಶೋರೂಮ್ ಬಳಿ ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೋವಾ ಕಾರೊಂದು ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ ಅದರ ಹಿಂದಿನಿಂದ ಬರುತ್ತಿದ್ದ ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಇದರಿಂದ ಹಲವರು ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಲಾರಿ, ಇನ್ನೋವಾ ವಾಹನ, ಮಹೀಂದ್ರಾ ಎಕ್ಸ್ ಯುವಿ 300 ಕಾರು, ಟಾಟಾ ನೆಕ್ಸಾನ್ ಕಾರುಗಳು ಜಖಂಗೊಂಡಿದ್ದು, ಮಹೀಂದ್ರಾ ಎಕ್ಸ್ ಯುವಿ 300 ಕಾರಿನಲ್ಲಿದ್ದ ಕುಟುಂಬದ ಮಹಿಳೆ ಹಾಗೂ ಮಗುವೊಂದು ಅಫಘಾತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾದರು.
ಅಪಘಾತದಿಂದ ಸ್ವಲ್ಪ ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲೀಸರು ಟ್ರಾಫಿಕ್ ಜಾಮ್ ಮುಕ್ತಗೊಳಿಸಿ ಸಂಚಾರಕ್ಕೆ ಅನುವು ಮಾಡಿದರು.