ಉಡುಪಿ: ಉಚಿತ ಮಾನಸಿಕ ಆರೋಗ್ಯ ಚಿಕಿತ್ಸಾ ಕಾರ್ಯಕ್ರಮ ಉದ್ಘಾಟನೆ
ಉಡುಪಿ: ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ ಉಡುಪಿ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇವರ ಜಂಟಿ ಆಶ್ರಯದಲ್ಲಿ ಶ್ರೀಮತಿ ಪಿ. ಮೀನಾಕ್ಷಿ ವರದರಾಯ ಭಂಡಾರಿ ಅವರ ಸ್ಮರಣಾರ್ಥ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸಾ ಕಾರ್ಯಕ್ರಮದ ಉದ್ಘಾಟನೆ ಉಡುಪಿಯ ಸದಾನಂದ ಟವರ್ಸ್‌ನ ಮಾನಸ ಕ್ಲಿನಿಕ್‌ನಲ್ಲಿ ಗುರುವಾರ ನಡೆಯಿತು.
ಗ್ರಾಹಕ ವೇದಿಕೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಡಾ. ರವೀಂದ್ರನಾಥ ಶಾನ್‌ಭಾಗ್ ಉಚಿತ ಮಾನಸಿಕ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಪಿ.ಮೀನಾಕ್ಷಿ ವರದರಾಯ ಭಂಡಾರಿ ಸಾಮಾಜಿಕ ಕಳಕಳಿಯುಳ್ಳ ಮಹಿಳೆಯಾಗಿದ್ದರು. ಅವರ ನೆನಪಿನಲ್ಲಿ ಉಚಿತ ಚಿಕಿತ್ಸೆ ನೀಡುತ್ತಿರುವುದು ಉತ್ತಮ ಕಾರ್ಯ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮನೋವೈದ್ಯ ಡಾ.ಪಿ.ವಿ.ಭಂಡಾರಿ, ಅರ್ಹ ಬಡವರು ಮಾನಸಿಕ ಚಿಕಿತ್ಸೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಉಚಿತ ಕ್ಲಿನಿಕ್ ತೆರೆಯಲಾಗಿದೆ. ಅಗತ್ಯ ಇರುವವರಿಗೆ ಇಲ್ಲಿ ಉಚಿತ ಚಿಕಿತ್ಸೆ ಮತ್ತು ಔಷಧಿ ನೀಡಲಾಗುವುದು. ಈಗಾಗಲೇ ಒಂದು ತಂಡ ರಚಿಸಿದ್ದು, ಅತೀ ಬಡವರಿಗೆ ಚಿಕಿತ್ಸೆ ಮತ್ತು ಔಷಧೋಪಚಾರವನ್ನು ಉಚಿತವಾಗಿ ನೀಡಿ ಅವರನ್ನು ಮತ್ತೆ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸುತ್ತೇವೆ ಎಂದು ಹೇಳಿದರು.
ಲೆಕ್ಕ ಪರಿಶೋಧಕ ಅನಂತನಾರಾಯಣ ಪೈ ಅತಿಥಿಯಾಗಿ ಭಾಗವಹಿ ಸಿದ್ದರು. ವಿಶಾಲಾಕ್ಷಿ ರಾವ್, ಡಾ. ಸುಲತಾ ವಿ.ಭಂಡಾರಿ, ಡಾ.ವಿರೂಪಾಕ್ಷ ದೇವರಮನೆ, ಸೌಜನ್ಯಾ ಶೆಟ್ಟಿ, ಕರುಣಾಕರ ಶೆಟ್ಟಿ, ಡಾ.ಮಾನಸ, ಡಾ.ದೀಪಕ್ ಮಲ್ಯ, ನಾಗರಾಜ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿ ತಿಂಗಳ ಮೊದಲ ಶುಕ್ರವಾರದಂದು ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಡಾ.ಪಿ.ವಿ.ಭಂಡಾರಿ ಇಲ್ಲಿ ಉಚಿತ ಸಂದರ್ಶನಕ್ಕೆ ಲಭ್ಯವಿರುತ್ತಾರೆ. ಅವಶ್ಯಕತೆ ಇರುವವರಿಗೆ ಉಚಿತ ಔಷಧಿಯನ್ನು ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ. ಯು.ಎಸ್ ನಾಯಕ್ ಚಾರಿಟೇಬಲ್ ಟ್ರಸ್ಟ್ ನ ಸುರೇಶ್ ಮತ್ತು ಪಿ. ಮೀನಾಕ್ಷಿ ವರದರಾಯ ಭಂಡಾರಿ ಅವರ ಪುತ್ರಿ ವಿಶಾಲಾಕ್ಷಿ ರಾವ್ ರೋಗಿ ಗಳಿಗೆ ಉಚಿತವಾಗಿ ಮಾತ್ರೆ ನೀಡಲು ಸಹಾಯ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.