ಮ.ಪ್ರ: ಹಂದಿ ಜ್ವರ ಭೀತಿ; 700ಕ್ಕೂ ಅಧಿಕ ಹಂದಿಗಳ ಹತ್ಯೆ
ದಾಮೋಹ್, ಜ. 5: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಆಫ್ರಿಕನ್ ಹಂದಿ ಜ್ವರದ ಭೀತಿಯ ನಡುವೆ ಜಿಲ್ಲಾಡಳಿತ 700ಕ್ಕೂ ಅಧಿಕ ಹಂದಿಗಳನ್ನು ಹತ್ಯೆಗೈದಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಪ್ರಾಣಿಗಳ ಸಾವು ವರದಿಯಾಗುತ್ತಿವೆ.
ಪ್ರಾಣಿಯೊಂದು ಹಠಾತ್ ಸಾವಿಗೀಡಾದ ಮೊದಲ ಪ್ರಕರಣ ಜಿಲ್ಲೆಯ ಹಟಾ ಬ್ಲಾಕ್ನಲ್ಲಿ ಬೆಳಕಿಗೆ ಬಂದಿತ್ತು. ಅನಂತರ ಜಿಲ್ಲೆಯ ಬಾಣಾವರ ಪ್ರದೇಶದಲ್ಲಿ ಹಸು, ಎತ್ತು ಹಾಗೂ ಹಂದಿಗಳು ಸೇರಿದಂತೆ ನೂರಾರು ಪ್ರಾಣಿಗಳು ಸಾವನ್ನಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಅನಂತರ ಸ್ಥಳೀಯರು ಪಶು ಸಂಗೋಪನೆ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದರು.
ಇಲಾಖೆ ಘಟನೆ ಬಗ್ಗೆ ತನಿಖೆ ನಡೆಸಿದಾಗ ಅದು ಆಫ್ರಿಕನ್ ಹಂದಿ ಜ್ವರ ಎಂಬುದು ದೃಢಪಟ್ಟಿತು ಎಂದು ಮೂಲಗಳು ತಿಳಿಸಿವೆ. ‘‘ಜಿಲ್ಲಾಡಳಿತ ಸೂಚನೆ ನೀಡಿದ ಬಳಿಕ ರೋಗಗ್ರಸ್ತ ಹಂದಿಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಯಿತು.
ವರದಿಯಲ್ಲಿ ಜಿಲ್ಲೆಯ ಹಟಾ ಹಾಗೂ ಬಾಣಾವರ ಪ್ರದೇಶದಲ್ಲಿ ಸಾವನ್ನಪ್ಪಿದ ಪ್ರಾಣಿಗಳಲ್ಲಿ ಆಫ್ರಿಕನ್ ಹಂದಿ ಜ್ವರದ ವೈರಸ್ ಇರುವುದು ಪತ್ತೆಯಾಯಿತು’’ ಎಂದು ಪಶು ವೈದ್ಯ ಡಾ. ಸೋಮಿಲ್ ರಾಯ್ ಅವರು ತಿಳಿಸಿದ್ದಾರೆ.