ನಿಯತ್ತಾಗಿರಬೇಕಾದುದು ಯಾರಿಗೆ?

Update: 2023-01-06 04:09 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

‘‘ಮುಖ್ಯಮಂತ್ರಿಯವರೇ ನಿಮಗೆ ದಮ್ಮಿದ್ದರೆ ಕೇಂದ್ರದಿಂದ ಕರ್ನಾಟಕಕ್ಕೆ ಬರಬೇಕಿದ್ದ ಅನುದಾನಗಳನ್ನು ತನ್ನಿ. ಪ್ರಧಾನಿ ಮೋದಿಯವರ ಮುಂದೆ ನೀವು ನಾಯಿ ಮರಿಯಂತೆ ಇರ್ತೀರಿ. ಅವರನ್ನು ಕಂಡರೆ ಗಡಗಡ ನಡುಗುತ್ತೀರಿ’’ ಹೀಗೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ ಬೆನ್ನಿಗೇ ಬಿಜೆಪಿ ನಾಯಕರು ತಿರುಗಿ ಬಿದ್ದಿದ್ದಾರೆ. ಸಿದ್ದರಾಮಯ್ಯ ಪ್ರಸ್ತಾಪಿಸಿದ್ದ ‘ಕೇಂದ್ರದಿಂದ ಬಾಕಿಯಿರುವ ಅನುದಾನ’ಗಳ ಬಗ್ಗೆ ಮಾತೇ ಎತ್ತದೆ, ಅವರು ಬಳಸಿದ ‘ನಾಯಿ ಮರಿ’ ಪದವನ್ನಷ್ಟೇ ಹಿಡಿದುಕೊಂಡು ಬಿಜೆಪಿಯ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚರ್ಚೆ, ಆಕ್ರೋಶಗಳು ವ್ಯಕ್ತವಾಗಬೇಕಾಗಿದ್ದು ಕೇಂದ್ರದಿಂದ ಬಾಕಿಯಿರುವ ಅನುದಾನಗಳನ್ನು ಇನ್ನೂ ತರಿಸಲಾಗದ ರಾಜ್ಯ ಸರಕಾರದ ವೈಫಲ್ಯದ ಕುರಿತಂತೆ. ದುರದೃಷ್ಟಕ್ಕೆ ‘ನಾಯಿಮರಿ’ಯನ್ನು ಮುಂದಿಟ್ಟುಕೊಂಡು ‘ಸಂಸ್ಕೃತಿ’ ‘ವ್ಯಕ್ತಿತ್ವ’ ‘ನಿಯತ್ತು’ ಮೊದಲಾದ ಪದಗಳು ಚರ್ಚೆಯಾಗುತ್ತಿವೆ. ಯಾವುದೇ ಗಂಭೀರ ವಿಷಯವನ್ನು ಜನರ ಮುಂದಿಡುವಾಗ, ನಾವು ಬಳಸುವ ಪದಗಳ ಬಗ್ಗೆಯೂ ಎಚ್ಚರಿಕೆಯನ್ನು ಹೊಂದಿರಬೇಕು. ಇಲ್ಲವಾದರೆ, ಆ ಪದಗಳನ್ನು ಎದುರಾಳಿಗಳು ಪ್ರತ್ಯಸ್ತ್ರವಾಗಿ ಬಳಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ.

ಹಾಗೆಂದು ಪದಗಳನ್ನು ಬಳಸುವುದರಲ್ಲಿ ಬಿಜೆಪಿಯ ನಾಯಕರೇನು ಸಭ್ಯರಲ್ಲ. ಮೂರನೇ ದರ್ಜೆಯ ಪದಗಳನ್ನು ಬಳಸುವ ಮೂಲಕವೇ ಬಿಜೆಪಿಯೊಳಗಿರುವ ಹಲವು ನಾಯಕರು ಜನಸಾಮಾನ್ಯರಿಗೆ ಪರಿಚಿತರು. ಇತ್ತೀಚೆಗಷ್ಟೇ ಬಿಜೆಪಿಯ ಮುಖಂಡ ಸಿ.ಟಿ. ರವಿಯವರು ಕಾಂಗ್ರೆಸ್ ಮುಖಂಡರೂ, ಹಿರಿಯ ರಾಜಕಾರಣಿಯೂ ಆಗಿರುವ ಖರ್ಗೆ ವಿರುದ್ಧ ‘ಇಟಲಿಯ ನಾಯಿ’ ಎನ್ನುವ ಪದವನ್ನು ಬಳಸಿದ್ದರು. ‘ಕಾಂಗ್ರೆಸ್‌ನ್ನು ಇಟಲಿಯ ನಾಯಿಗೆ’ ಅವರು ಹೋಲಿಸಿದರು. ಸ್ವಾತಂತ್ರ್ಯೋತ್ತರ ಭಾರತಕ್ಕೆ ಕಾಂಗ್ರೆಸ್ ಪಕ್ಷ ಬಹಳಷ್ಟು ಕೊಡುಗೆಯನ್ನು ನೀಡಿದೆ. ದೇಶ ಸ್ವತಂತ್ರಗೊಂಡಾಗ ಭಾರತದ ಸ್ಥಿತಿ ಹೇಗಿತ್ತು ಮತ್ತು ಈಗ ಹೇಗಿದೆ ಎನ್ನುವುದನ್ನು ಬಿಜೆಪಿ ನಾಯಕರಿಗೆ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಭಾರತವನ್ನು ತೃತೀಯ ಶಕ್ತಿಯಾಗಿ ವಿಶ್ವದ ಮುಂದೆ ನಿಲ್ಲಿಸಿದ ಹೆಗ್ಗಳಿಕೆ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ. ಹೀಗಿರುವಾಗ, ಕಾಂಗ್ರೆಸ್‌ನ್ನು ‘ಇಟಲಿಯ ನಾಯಿ’ ಎಂದು ಕರೆದ ಸಿ.ಟಿ. ರವಿ ಕಾಂಗ್ರೆಸ್‌ನೊಳಗಿರುವ ನಾಯಕರನ್ನೆಲ್ಲ ಪರೋಕ್ಷವಾಗಿ ‘ನಾಯಿ’ ಎಂದು ಕರೆದಂತಾಗಲಿಲ್ಲವೆ? ‘ಬಿಜೆಪಿಯ ಒಂದು ನಾಯಿಯೂ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿರಲಿಲ್ಲ’ ಎನ್ನುವ ಖರ್ಗೆಯ ಮಾತಿಗೆ ಪ್ರತಿಯಾಗಿ ಇದನ್ನು ಆಡಿದ್ದೇನೆ ಎಂದು ರವಿ ಸಮರ್ಥಿಸಿಕೊಂಡಿದ್ದಾರೆ. ಸರಿ, ಸಮರ್ಥಿಸಿಕೊಂಡ ಬಳಿಕವಾದರೂ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬಿಜೆಪಿಯ ಹಿರಿಯರ ಕೆಲವು ಹೆಸರುಗಳನ್ನಾದರೂ ಅವರು ಮುಂದಿಡಬೇಕಾಗಿತ್ತು. ಆದರೆ ಅದು ಈವರೆಗೆ ಅವರಿಗೆ ಸಾಧ್ಯವಾಗಿಲ್ಲ.

ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೀಡಿದ ಪ್ರತಿಕ್ರಿಯೆಯೂ ನುಣುಚಿಕೊಳ್ಳುವ ರೀತಿಯಲ್ಲಿದೆ. ಅವರು ಕೇಂದ್ರ ಬಾಕಿ ಉಳಿಸಿರುವ ಅನುದಾನಗಳ ಬಗ್ಗೆ ಮಾತನಾಡದೇ, ಕೇವಲ ನಾಯಿ ಮರಿಯನ್ನು ಕೈಗೆತ್ತಿಕೊಂಡಿದ್ದಾರೆ. ‘‘ನಾಯಿ ನಿಯತ್ತಿನ ಪ್ರಾಣಿ. ನಾನು ಜನರಿಗೆ ನಿಯತ್ತಾಗಿ ಕೆಲಸ ಮಾಡಿರುವೆ. ನಿಯತ್ತನ್ನು ಜನರ ಪರವಾಗಿ ಉಳಿಸಿಕೊಂಡು ಹೋಗುವೆ’’ ಎಂದು ಅವರು ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾರೆ. ಬೊಮ್ಮಾಯಿಯವರು ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ನಾಯಿ ನಿಯತ್ತಾಗಿರುತ್ತದೆ ಎನ್ನುವುದು ನಿಜ. ಆದರೆ ಯಾರಿಗೆ ನಿಯತ್ತಾಗಿರುತ್ತದೆ ಎನ್ನುವುದರ ಬಗ್ಗೆಯೂ ಅರಿವಿರಬೇಕಾಗಿದೆ. ನಾಯಿ ಯಾವತ್ತೂ ತನ್ನ ಸಮುದಾಯವಾಗಿರುವ ಇತರ ನಾಯಿಗಳಿಗೆ ನಿಯತ್ತಾಗಿರುವುದಿಲ್ಲ. ಅದು ನಿಯತ್ತಾಗಿರುವುದು ತನಗೆ ಊಟ ಹಾಕಿದ ‘ಮನುಷ್ಯ’ ಜಾತಿಗೆ ಮಾತ್ರ. ಬೊಮ್ಮಾಯಿಯವರು ನಿಯತ್ತಾಗಿರುವುದು ನಿಜ. ಆದರೆ ಕರ್ನಾಟಕದ ಜನರಿಗೆ ನಿಯತ್ತಾಗಿದ್ದಾರೆಯೋ ಅಥವಾ ಕೇಂದ್ರದ ಜನರಿಗೆ ನಿಯತ್ತಾಗಿದ್ದಾರೆಯೋ ಎನ್ನುವುದು ಕೂಡ ಮುಖ್ಯ. ತನಗೆ ಓಟು ಹಾಕಿ ಗೆಲ್ಲಿಸಿರುವ ಕರ್ನಾಟಕ ರಾಜ್ಯಕ್ಕೆ ಬೊಮ್ಮಾಯಿಯವರು ಮೊದಲು ನಿಯತ್ತಾಗಿರಬೇಕಾಗಿದೆ. ಕರ್ನಾಟಕ ರಾಜ್ಯದ ಜನತೆ ಅತ್ಯಧಿಕ ಬಿಜೆಪಿ ಸಂಸದರನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿರುವುದು ರಾಜ್ಯ ಸರಕಾರದ ಪರವಾಗಿ ಮಾತನಾಡುವುದಕ್ಕೆ. ಈ ಸಂಸದರು ಒಕ್ಕೊರಲಲ್ಲಿ ರಾಜ್ಯಕ್ಕೆ ಸಿಗಬೇಕಾದ ಅನುದಾನಗಳ ಬಗ್ಗೆ ಧ್ವನಿಯೆತ್ತಿದ್ದರೆ ಖಂಡಿತವಾಗಿಯೂ ಬಾಕಿಯುಳಿದಿರುವ ಅನುದಾನಗಳು ರಾಜ್ಯಕ್ಕೆ ಸಿಕ್ಕಿ ಬಿಡುತ್ತಿತ್ತು. ಆದರೆ ಸಂಸದರು ಕೇಂದ್ರ ವರಿಷ್ಠರಿಗೆ ಅಂಜುತ್ತಾ ಮಾತನಾಡುತ್ತಿದ್ದಾರೆ. ಇದನ್ನೇ ಕಾರಣಕ್ಕೆ ಸಿದ್ದರಾಮಯ್ಯ ಅವರು ‘ನಾಯಿ ಮರಿ’ಗೆ ಹೋಲಿಸಿರುವುದು.

ಈಗಾಗಲೇ ಸಿದ್ದರಾಮಯ್ಯ ಅವರು ತಮ್ಮ ಮಾತಿನ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ‘ಅವರು ದಮ್ ಇದ್ರೆ, ತಾಕತ್ ಇದ್ರೆ.... ಎಂದು ಮಾತನಾಡಲ್ವ. ನಮ್ಮ ಹಳ್ಳಿ ಭಾಷೆಯಲ್ಲಿ ನಾನು ಮಾತನಾಡಿದ್ದೇನೆ’’ ಎಂದು ಹೇಳುತ್ತಾ ಇದು ‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೀಗ ನಾಯಿ ಮರಿಯನ್ನು ಪಕ್ಕಕ್ಕಿಟ್ಟು ಮುಖ್ಯಮಂತ್ರಿಯವರು ನಿಜವಾದ ವಿಷಯವನ್ನು ಚರ್ಚೆಗೆತ್ತಿಕೊಳ್ಳಬೇಕು. ‘‘ಕೇಂದ್ರದಿಂದ ರಾಜ್ಯಕ್ಕೆ ೫,೪೯೯ ಕೋಟಿ ರೂಪಾಯಿ ಅನುದಾನ ಬರಬೇಕಾಗಿತ್ತು. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆ ಮೊತ್ತವನ್ನು ಕೊಡಲು ಸಾಧ್ಯವಿಲ್ಲವೆಂದು ಪತ್ರದ ಮೂಲಕ ತಿಳಿಸಿದ್ದಾರೆ. ಸಿಎಂ ಅದರ ವಿರುದ್ಧ ಈ ವರೆಗೆ ಧ್ವನಿಯೆತ್ತಿಲ್ಲ’’ ಎನ್ನುವಂತಹ ಗಂಭೀರ ಆರೋಪವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಈ ಆರೋಪ ನಿಜವೆ? ಸುಳ್ಳಾಗಿದ್ದರೆ ಅದು ಅಪ್ಪಟ ಸುಳ್ಳು ಎಂದು ಮುಖ್ಯಮಂತ್ರಿಯವರು ಸ್ಪಷ್ಟೀಕರಣ ನೀಡಬೇಕು. ಕೇಂದ್ರದಿಂದ ಒಟ್ಟು ಎಷ್ಟು ಅನುದಾನ ಬಂದಿದೆ? ಎಷ್ಟು ಬಾಕಿ ಉಳಿಸಿದೆ? ಎನ್ನುವುದರ ವಿವರವನ್ನು ಬೊಮ್ಮಾಯಿಯವರು ರಾಜ್ಯದ ಜನತೆಯ ಮುಂದಿಡಬೇಕು. ಜಿಎಸ್‌ಟಿ ಪರಿಹಾರ ನಿಧಿಯ ದೊಡ್ಡ ಮೊತ್ತವನ್ನು ಸರಕಾರ ಕೊರೋನದ ಹೆಸರಿನಲ್ಲಿ ಬಾಕಿಯುಳಿಸಿದೆ. ಈ ನಾಡಿನ ಜನರು ಕಟ್ಟಿದ ತೆರಿಗೆಯ ಹಣ, ಈ ನಾಡಿನ ಜನತೆಯ ಅಭಿವೃದ್ಧಿಗಾಗಿ ಬಳಕೆಯಾಗಬೇಕು. ಜಿಎಸ್‌ಟಿ ಪರಿಹಾರ ನಿಧಿಯ ಕುರಿತಂತೆ ಕೇಂದ್ರದ ನಿಲುವಿನ ಬಗ್ಗೆ ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ಹಲವು ರಾಜ್ಯಗಳು ಧ್ವನಿಯೆತ್ತಿವೆ. ಆದರೆ ಕರ್ನಾಟಕ ರಾಜ್ಯ ಮಾತ್ರ ಮೌನವಾಗಿದೆ. ಈ ರಾಜ್ಯವನ್ನಾಳುವವರು ಈ ರಾಜ್ಯದ ಜನತೆಗೆ ನಿಯತ್ತಾಗಿದ್ದಾರೆ ಎಂದಾಗಿದ್ದರೆ ಯಾಕೆ ಅವರು ಕೇಂದ್ರ ಸರಕಾರದ ನೀತಿಯ ವಿರುದ್ಧ ಧ್ವನಿಯೆತ್ತುತ್ತಿಲ್ಲ. ಕನಿಷ್ಠ ಸಂಸದರಾದರೂ ಸಂಸತ್ತಿನಲ್ಲಿ ಈ ಬಗ್ಗೆ ಮಾತನಾಡಬೇಕಾಗಿತ್ತು. ಅವರು ಯಾಕೆ ಮೌನವಾಗಿದ್ದಾರೆ?

ರಾಜ್ಯ ಅಭಿವೃದ್ಧಿಯ ವಿಷಯದಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ರಾಜ್ಯದ ೩೨ ಇಲಾಖೆಗಳು ಅಭಿವೃದ್ಧಿಯಲ್ಲಿ ಶೇ. ೫೦ರ ಗಡಿಯನ್ನು ದಾಟಿಲ್ಲ ಎನ್ನುವುದನ್ನು ಸ್ವತಃ ಬೊಮ್ಮಾಯಿಯವರೇ ವಿಧಾನಪರಿಷತ್‌ಗೆ ಮಾಹಿತಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ‘‘ಅಭಿವೃದ್ಧಿಯ ವಿಷಯವನ್ನು ಮಾತನಾಡಬೇಡಿ. ರಸ್ತೆ, ಸೇತುವೆಯ ವಿಷಯವನ್ನು ಬಿಟ್ಟು ಲವ್ ಜಿಹಾದ್ ಬಗ್ಗೆ ಗಮನ ಕೊಡಿ’’ ಎಂದು ಬಿಜೆಪಿಯ ರಾಜ್ಯಾಧ್ಯಕ್ಷರು ಅಪ್ಪಣೆಕೊಡಿಸಿದ್ದಾರೆ. ನಮ್ಮ ನಾಡಿನ ಅಭಿವೃದ್ಧಿ ಸಣ್ಣ ವಿಷಯ ಎಂದು ಬಿಜೆಪಿಯ ನಾಯಕರೇ ಹೇಳುತ್ತಾರೆ ಎಂದಾದರೆ ರಾಜ್ಯದಲ್ಲಿರುವ ಬಿಜೆಪಿ ಸರಕಾರ ನಿಯತ್ತಾಗಿರುವುದು ಯಾರಿಗೆ ಎನ್ನುವುದು ಚರ್ಚೆಯಾಗಬೇಡವೆ?

Similar News