ಸುಬ್ರಹ್ಮಣ್ಯದಲ್ಲಿ ಅನೈತಿಕ ಪೊಲೀಸ್ ಗಿರಿ: ಯುವಕನಿಗೆ ತಂಡದಿಂದ ಮಾರಣಾಂತಿಕ ಹಲ್ಲೆ
Update: 2023-01-06 15:55 IST
ಸುಬ್ರಹ್ಮಣ್ಯ, ಜ.6: ಸುಬ್ರಹ್ಮಣ್ಯದಲ್ಲಿ ಅನೈತಿಕ ಪೊಲೀಸ್ ಗಿರಿ ನಡೆದಿದ್ದು, ಯುವತಿಯ ಜೊತೆ ತಿರುಗಾಡುತ್ತಿದ್ದ ಎಂದು ಆರೋಪಿಸಿ ಯುವಕನೋರ್ವನಿಗೆ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕವಾಗಿ ಥಳಿಸಿದ ಘಟನೆ ವರದಿಯಾಗಿದೆ.
ಕಲ್ಲುಗುಂಡಿಯ ಅಫೀದ್ ಥಳಿತಗೊಳಗಾದ ಯುವಕ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಫೀದ್ ಕುಕ್ಕೆ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯೊಬ್ಬಳೊಂದಿಗೆ ಮಾತನಾಡುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಅಫೀದ್ ರನ್ನು ತಂಡವೊಂದು ಬಲವಂತವಾಗಿ ಕರೆದೊಯ್ದು, ಅರೆಬೆತ್ತಲೆಗೊಳಿಸಿ ತೀವ್ರವಾಗಿ ಥಳಿಸಿದೆ. ಹಲ್ಲೆಗೊಳಗಾದ ಯುವಕನ ಬೆನ್ನಲ್ಲಿ ರಕ್ತ ಹೆಪ್ಪುಗಟ್ಟಿದೆ.
ಅಫೀದ್ ನೀಡಿರುವ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.