ಮೆಲ್ಕಾರ್ | ಐದು ವರ್ಷಗಳ ಹಿಂದಿನ ಅಪಘಾತ ಪ್ರಕರಣ: ತಲೆಮರೆಸಿಕೊಂಡಿದ್ದ ಲಾರಿ ಚಾಲಕನ ಬಂಧನ
ಬಂಟ್ವಾಳ, ಜ.6: ಲಾರಿ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಲಾರಿ ಚಾಲಕನನ್ನು ಮೆಲ್ಕಾರ್ ಟ್ರಾಫಿಕ್ ಎಸ್.ಐ.ಮೂರ್ತಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
2016 ರಲ್ಲಿ ಕಲ್ಲಡ್ಕ ಸಮೀಪದ ನರಹರಿ ಪರ್ವತ ಬಳಿ ಲಾರಿ ಹಾಗೂ ಸ್ಕೂಟರ್ ನಡುವೆ ಅಪಘಾತ ನಡೆದಿತ್ತು. ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕ, ಕಾಸರಗೋಡು ಜಿಲ್ಲೆಯ ಮುಳಿಯಾರು, ನೆಲ್ಲಿಕಾರು ನಿವಾಸಿ ನಝರ್ ಎನ್.ಎ. ಎಂಬಾತನ ಮೇಲೆ ಪ್ರಕರಣ ದಾಖಲಾಗಿತ್ತು. ಅ ಬಳಿಕ ನಝರ್ ಕಳೆದ ಐದು ವರ್ಷಗಳಿಂದ ವಿದೇಶದಲ್ಲಿದ್ದು, ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಈ ಕಾರಣಕ್ಕಾಗಿ ನ್ಯಾಯಾಲಯ ಈತನ ಮೇಲೆ ದಸ್ತಗಿರಿ ವಾರೆಂಟ್ ಜಾರಿ ಮಾಡಿತ್ತು. ಈ ನಡುವೆ ವಿದೇಶದಿಂದ ಆತ ಊರಿಗೆ ಆಗಮಿಸಿದ್ದು, ಡಿ.5ರಂದು ಬಿ.ಸಿ.ರೋಡ್ ಕಡೆಗೆ ಬರುತ್ತಿರುವ ಬಗ್ಗೆ ಎಸ್ಸೈ ಮೂರ್ತಿಯವರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಗುರುವಾರ ಬಿ.ಸಿ.ರೋಡಿನ ಬಸ್ ನಿಲ್ದಾಣದ ಬಳಿ ಆತ ಬರುತ್ತಿದ್ದಂತೆ ವಶಕ್ಕೆ ಪಡೆದಿದ್ದಾರೆ. ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಎಎಸ್ಸೈ ಜನಾರ್ದನ, ಹಾಗೂ ಹೆಡ್ ಕಾನ್ ಸ್ಟೇಬಲ್ ದೇವದಾಸ್ ಆರೋಪಿಯ ಬಂಧನಕ್ಕೆ ಸಹಕರಿಸಿದ್ದರು.