ದೇಶದಲ್ಲಿ ಹವಾಮಾನ ವೈಪರೀತ್ಯದಿಂದ 2022ರಲ್ಲಿ ಮೃತಪಟ್ಟವರೆಷ್ಟು ಗೊತ್ತೇ?

Update: 2023-01-07 02:52 GMT

ಹೊಸದಿಲ್ಲಿ: ದೇಶದಲ್ಲಿ 2022ರಲ್ಲಿ ಹವಾಮಾನ ವೈಪರೀತ್ಯದ ಘಟನೆಗಳ ಪರಿಣಾಮ 2227 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು "ಕ್ಲೈಮೇಟ್ ಆಫ್ ಇಂಡಿಯಾ ಡ್ಯೂರಿಂಗ್ 2022’ ವರದಿ ಬಹಿರಂಗಪಡಿಸಿದೆ. 1901ರ ಬಳಿಕ ಈ ವರ್ಷವನ್ನು ಐದನೇ ಅತ್ಯಂತ ಉಷ್ಣ ವರ್ಷ ಎಂದು ಹವಾಮಾನ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದ ವರದಿಯಲ್ಲಿ ವಿವರಿಸಲಾಗಿದೆ.

ಕಳೆದ ವರ್ಷದ ಜನವರಿ ಹಾಗೂ ಫೆಬ್ರವರಿಯನ್ನು ಹೊರತುಪಡಿಸಿ ಉಳಿದ ಹತ್ತು ತಿಂಗಳ ಅವಧಿಯಲ್ಲಿ ದೇಶದಲ್ಲಿ ತಾಪಮಾನ ವಾಡಿಕೆ ಮಟ್ಟಕ್ಕಿಂತ ಅಧಿಕವಿತ್ತು. ಜಾಗತಿಕವಾಗಿ ಕೂಡಾ 2022, ದಾಖಲೆಗಳಲ್ಲೇ ಐದನೇ ಅಥವಾ ಆರನೇ ಅಧಿಕ ತಾಪಮಾನದ ವರ್ಷ ಎಂದು ದಾಖಲಾಗಿದೆ. ವಿಶ್ವ ಹವಾಮಾನ ಇಲಾಖೆ, ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಿರುವ ಜಾಗತಿಕ ಹವಾಮಾನದ ಸ್ಥಿತಿಗತಿ ವರದಿಯಲ್ಲಿ ಇದು ಸ್ಪಷ್ಟವಾಗಲಿದೆ.

ಭಾರತದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳ ಪೈಕಿ ಬಿರುಗಾಳಿ ಮತ್ತು ಸಿಡಿಲಿಗೆ 1285 ಮಂದಿ ಬಲಿಯಾಗಿದ್ದಾರೆ. ಇದು ಒಟ್ಟು ಇಂಥ ಸಾವಿನ ಶೇಕಡ 58ರಷ್ಟು. ಉಳಿದಂತೆ ಪ್ರವಾಹ ಹಾಗೂ ಭಾರಿ ಮಳೆ (835), ಹಿಮಪಾತ (37), ಉಷ್ಣಗಾಳಿ (30), ದೂಳು ಗಾಳಿ (22)ಯಿಂದ ಕೂಡಾ ಜನ ಮೃತಪಟ್ಟಿದ್ದಾರೆ. ಬಿರುಗಾಳಿ ಹಾಗೂ ಸಿಡಿಲಿಗೆ ಬಿಹಾರದಲ್ಲೇ 415 ಮಂದಿ ಬಲಿಯಾಗಿದ್ದಾರೆ. ಒಡಿಶಾದಲ್ಲಿ 168, ಜಾರ್ಖಂಡ್‌ನಲ್ಲಿ 122, ಮಧ್ಯಪ್ರದೇಶದಲ್ಲಿ 116, ಉತ್ತರ ಪ್ರದೇಶದಲ್ಲಿ 81, ರಾಜಸ್ಥಾನದಲ್ಲಿ 78, ಛತ್ತೀಸ್‌ಗಢದಲ್ಲಿ 71, ಮಹಾರಷ್ಟ್ರದಲ್ಲಿ 64, ಅಸ್ಸಾಂನಲ್ಲಿ 58 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆಯಾಗಿ ಬಿಹಾರ, ಅಸ್ಸಾಂ, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಅತ್ಯಂತ ಬಾಧಿತ ರಾಜ್ಯಗಳು. ಹವಾಮಾನ ವೈಪರೀತ್ಯದಿಂದ ಈ ನಾಲ್ಕು ರಾಜ್ಯಗಳಲ್ಲಿ ಕ್ರಮವಾಗಿ 418, 257, 201 ಮತ್ತು 194 ಸಾವುಗಳು ಸಂಭವಿಸಿವೆ.

ದೇಶದಲ್ಲಿ 2022ರಲ್ಲಿ ಧೀರ್ಘಾವಧಿ ಸರಾಸರಿ (1981-2010)ಗಿಂತ 0.51 ಡಿಗ್ರಿ ಸೆಲ್ಸಿಯಸ್‌ನಷ್ಟು ಅಧಿಕ ಉಷ್ಣಾಂಶ ದಾಖಲಾಗಿದೆ. ಕಳೆದ ಜನವರಿ ಹಾಗೂ ಫೆಬ್ರವರಿಯಲ್ಲಿ ಸರಾಸರಿ ಉಷ್ಣಾಂಶ ಸಾಮಾನ್ಯಮಟ್ಟದಲ್ಲಿದ್ದರೆ, ಉಳಿದ ಹತ್ತು ತಿಂಗಳ ಅವಧಿಯಲ್ಲಿ ಅದು ವಾಡಿಕೆಗಿಂತ ಅಧಿಕವಾಗಿತ್ತು.

Similar News