ಉಡುಪಿ: ಯಕ್ಷರಂಗಾಯಣ ‘ಪರಶುರಾಮ’ದ ಪ್ರಥಮ ಪ್ರದರ್ಶನ ಜ. 9ಕ್ಕೆ
ಉಡುಪಿ: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ, ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಅಭಿವೃದ್ಧಿ ಸಮಿತಿ ಹಾಗೂ ಯಕ್ಷರಂಗಾಯಣ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಯಕ್ಷರಂಗಾಯಣದ ‘ಪರಶುರಾಮ’ ನಾಟಕದ ಪ್ರಥಮ ಪ್ರದರ್ಶನ ಜ.9ರಿಂದ 11ರವರೆಗೆ ಕಾರ್ಕಳದ ಕೋಟಿಚೆನ್ನಯ್ಯ ಥೀಂ ಪಾರ್ಕ್‌ನ ವನರಂಗ ವೇದಿಕೆಯಲ್ಲಿ ನಡೆಯಲಿದೆ.
ಜ.9ರಂದು ಸಂಜೆ 6 ಗಂಟೆಗೆ ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ನಾಟಕೋತ್ಸವವನ್ನು ಉದ್ಘಾಟಿಸಲಿದ್ದು, ಯಕ್ಷರಂಗಾಯಣ ನಿರ್ದೇಶಕ ಡಾ.ಜೀವನ್‌ರಾಂ ಸುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್ ಮಲ್ಲಿಕಾರ್ಜನ ಸ್ವಾಮಿ, ನಾಟಕಕಾರ ಶಶಿರಾಜ್ ಕಾವೂರು ಪಾಲ್ಗೊಳ್ಳುವರು. ಅಂದು ಸಂಜೆ 6:35ರಿಂದ ಯಕ್ಷರಂಗಾಯಣ ಕಾರ್ಕಳ ಸಂಚಾರಿ ರಂಗ ತಂಡದಿಂದ ‘ಪರಶುರಾಮ’ ನಾಟಕದ ಪ್ರಥಮ ಪ್ರದರ್ಶನ ನಡೆಯಲಿದ್ದು, ಶಶಿರಾಜ್ ರಾವ್ ಕಾವೂರು ನಾಟಕ ರಚಿಸಿದ್ದು, ಡಾ.ಜೀವನ್‌ರಾಂ ಸುಳ್ಯ ನಿರ್ದೇಶಿಸಿದ್ದಾರೆ. ಜ.10ರಂದು ಸಂಜೆ 6:30ಕ್ಕೆ ರಂಗಾಯಣ ಶಿವಮೊಗ್ಗ ಅಭಿನಯಿಸುವ ಸ್ವಾತಂತ್ರ್ಯಸಂಗ್ರಾಮದ ನೈಜಕತೆಯಾಧಾರಿತ ಡಾ.ಸಾಸ್ವೆಹಳ್ಳಿ ಸತೀಶ್ ರಚಿಸಿದ, ಶ್ರೀಪಾದ ಮತ್ತು ಶಿವಶಂಕರ ತೀರ್ಥಹಳ್ಳಿ ನಿರ್ದೇಶನದ ‘ಈಸೂರು ಕೊಡೆವು’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿದುಬಂದಿದೆ.
ಜ.11ರಂದು ಸಂಜೆ 6:30ಕ್ಕೆ ಶಿವಮೊಗ್ಗ ರಂಗಾಯಣದಿಂದ ನಾ.ಡಿಸೋಜಾ ಅವರ ಕಾದಂಬರಿ ಹಾಗೂ ಎಸ್ ಮಾಲತಿ ಅವರ ಹಕ್ಕಿ ಕತೆ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಗಣೇಶ್ ಮಂದಾರ್ತಿ ಮತ್ತು ಶ್ರವಣ್ ಹೆಗ್ಗೋಡು ನಿರ್ದೇಶಿಸಿದ್ದು, ನಾಟಕೋತ್ಸವಕ್ಕೆ ಪ್ರವೇಶ ಉಚಿತ ವಾಗಿರುತ್ತದೆ.
ಬೈಲೂರಿನಲ್ಲಿ ಲೋಕಾರ್ಪಣೆಗೊಳ್ಳಲಿರುವ ಪರಶುರಾಮ ಥೀಂ ಪಾರ್ಕ್‌ಗೆ ಪೂರಕವಾಗಿ ಪರಶುರಾಮ ನಾಟಕವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರದರ್ಶನ ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.