×
Ad

ಅಡಕೆ ಬೆಳೆಗಾರರ ಹಿತ ಕಾಯಲು ಕಾಂಗ್ರೆಸ್ ವತಿಯಿಂದ ರಾಜ್ಯವ್ಯಾಪ್ತಿ ಹೋರಾಟ: ಧನಂಜಯ ಅಡ್ಪಂಗಾಯ

Update: 2023-01-07 19:07 IST

ಸುಳ್ಯ: ಹಳದಿ ರೋಗ ಬಾಧೆಯಿಂದ ಎಲೆಚುಕ್ಕಿ ರೋಗ ಬಾಧಿಸಿ ಅಡಿಕೆ ಕೃಷಿ ಸಂಪೂರ್ಣ ನಾಶವಾಗಿದ್ದರೂ ಸರಕಾರ ಕೃಷಿಕರಿಗೆ ಯಾವುದೇ ಪರಿಹಾರ ನೀಡಿಲ್ಲ. ಗೋರಕ್ ಸಿಂಗ್ ವರದಿಯನ್ನು ಕಡೆಗಣಿಸಿದೆ. ಆದುದರಿಂದ ಅಡಿಕೆ ಕೃಷಿಕರ ಹಿತ ಕಾಯಲು ಕಾಂಗ್ರೆಸ್ ನೇತೃತ್ವದಲ್ಲಿ ರಾಜ್ಯ ವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಹೇಳಿದ್ದಾರೆ.

ಸುಳ್ಯ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಅಡಿಕೆ ಕೃಷಿಕರು ಅತಂತ್ರ ಪರಿಸ್ಥಿತಿಯಲ್ಲಿದ್ದು,  ಕೃಷಿಕರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ನಡೆಯಲಿರುವ ಹೋರಾಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ನೇತೃತ್ವ ವಹಿಸಲಿದ್ದಾರೆ ಎಂದು ಅವರು ಹೇಳಿದರು.

ಕಳೆದ 3 ದಶಕಗಳಿಂದ ಹಳದಿ ರೋಗ ಬಾದೆಯಿಂದ ಅಡಿಕೆ ಕೃಷಿ ವಿನಾಶದ ಅಂಚಿನಲ್ಲಿದೆ. ಸುಳ್ಯ ತಾಲೂಕಿನ ವಿವಿಧ ಗ್ರಾಮಗಳು ಹಳದಿ ಎಲೆ ರೋಗ ಬಾಧೆಯಿಂದ ಕೃಷಿ ನಾಶವಾಗಿದೆ. 2011 ರಲ್ಲಿ ಲೋಕಸಭೆಯಲ್ಲಿ ಹಳದಿ ಎಲೆ ರೋಗದ ಬಗ್ಗೆ ಚರ್ಚೆ ನಡೆದು ಶಿವಮೊಗ್ಗ ಹಾಗು ಚಿಕ್ಕಮಗಳೂರು ಜಿಲ್ಲೆಗಳ ಹಳದಿ ರೋಗದ ಬಗ್ಗೆ ಪ್ರಸ್ತಾಪ ಆಗುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಹಳದಿ ರೋಗದ ಬಗ್ಗೆ ಪ್ರಸ್ತಾಪ ಆಗಲಿಲ್ಲ. ಬಳಿಕ ಗೋರಕ್ ಸಿಂಗ್ ಸಮಿತಿ ರಚಿಸಿ ಶಿವಮೊಗ್ಗ ಹಾಗು ಚಿಕ್ಕಮಗಳೂರು ಜಿಲ್ಲೆಗೆ ಮಾತ್ರ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ಸಲ್ಲಿಸಿತ್ತು. ಅಡಿಕೆ ಕೃಷಿಕರ ಸಾಲ ಮನ್ನಾ ಮಾಡಿ ಹೊಸ ಸಾಲ ವಿತರಣೆ ಮಾಡುವುದು ಸೇರಿದಂತೆ 9 ನಿರ್ದೇಶನಗಳನ್ನೊಳಗೊಂಡ ವರದಿಯನ್ನು ಗೋರಕ್ ಸಿಂಗ್ ವರದಿ ನೀಡಿತ್ತು. ಯುಪಿಎ ಸರಕಾರ ಇರುವ ಸಂದರ್ಭದಲ್ಲಿ ಸಾಲ ಮನ್ನಾ ಮಾಡುವುದು ಹೊರತುಪಡಿಸಿ ಉಚಿತ ಗೊಬ್ಬರ, ಔಷಧಿ ನೀಡುವುದು ಸೇರಿ ಉಳಿದ ನಿರ್ದೇಶನಗಳನ್ನು ಅನುಷ್ಠಾನ ಮಾಡಿತ್ತು.ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಹಳದಿ ರೋಗದ ವಿಷಯ ಸಮರ್ಪಕವಾಗಿ ಲೋಕಸಭೆಯಲ್ಲಿ ಪ್ರತಿಧ್ವನಿಸದ ಕಾರಣ ಗೋರಕ್ ಸಿಂಗ್ ವರದಿ ಅನುಷ್ಠಾನಗೊಂಡಿಲ್ಲ ಹಾಗು ಅನುಷ್ಠಾನಗೊಂಡ ವರದಿಯ ಅಂಶಗಳ ಪ್ರಯೋಜನವೂ ಜಿಲ್ಲೆಯ ರೈತರಿಗೆ ದೊರೆಯಲಿಲ್ಲ ಎಂದು ಅವರು ಹೇಳಿದರು.

ಅಡಿಕೆ ಮಂಡಳಿ ಸ್ಥಾಪಿಸಲು ಒತ್ತಾಯ: ಅಡಿಕೆ ಬೆಳೆಗಾರರ ಸಾಲ ಸಂಪೂರ್ಣ ಮನ್ನಾ ಮಾಡಿ ಕೃಷಿ ನಡೆಸಲು ಹೊಸ ಸಾಲ ನೀಡಬೇಕು, ಅಡಿಕೆಯ ಬೇರೆ ಬೇರೆ ಉಪಯೋಗದ ಕಾರ್ಖಾನೆಗಳು ಸ್ಥಾಪನೆಯಾಗಬೇಕು, ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ ಬಾಧಿಸಿದ ಕೃಷಿಗೆ ಉಚಿತ ಔಷಧಿ, ಗೊಬ್ಬರ ಕೊಡಬೇಕು, ಅಡಿಕೆ ಮಂಡಳಿ ರಚನೆಯಾಗಬೇಕು, ಸಿದ್ದರಾಮಯ್ಯ ಅವರ ಜೊತೆ ಈ ಕುರಿತು ಮಾತುಕತೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಅಡಿಕೆ ಕೃಷಿಕರಿಗೆ ಎಲ್ಲಾ ನೆರವನ್ನು ನೀಡಿ ಅಡಿಕೆ ಕೃಷಿಕರಿಗೆ ಹಾಗು ಅಡಿಕೆ ಕೃಷಿಗೆ ಭವಿಷ್ಯವನ್ನು ರೂಪಿಸಬೇಕಾದ ಸರಕಾರದ ಸಚಿವರೇ ಅಡಿಕೆಗೆ ಭವಿಷ್ಯವಿಲ್ಲ ಎಂದು ಹೇಳಿಕೆ ನೀಡಿರುವುದು ಅಕ್ಷಮ್ಯ ಎಂದು ಅವರು ಹೇಳಿದರು.

ಸುಳ್ಯ ತಾಲೂಕಿನಲ್ಲಿ ವ್ಯಾಪಕವಾಗಿ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ ಬಾಧಿಸಿ ಕೃಷಿ ಹಾನಿ ಸಂಭವಿಸಿದೆ. ಇದರ ಬಗ್ಗೆ ಸಮರ್ಪಕವಾದ ಸರ್ವೆ ನಡೆಸಿ ಪರಿಹಾರ ನೀಡಬೇಕು. ಅದಕ್ಕಾಗಿ ಕೃಷಿ, ತೋಟಗಾರಿಕಾ ಇಲಾಖೆ ಸರ್ವೆ ನಡೆಸಿ ನಷ್ಟದ ಲೆಕ್ಕ ಹಾಕಲಿ ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ, ಬ್ಲಾಕ್ ಕಾಂಗ್ರೆಸ್ ವಕ್ತಾರ ನಂದರಾಜ ಸಂಕೇಶ ಉಪಸ್ಥಿತರಿದ್ದರು.

Similar News