ಉಡುಪಿ: ಕೆಮ್ಮಣ್ಣು ತೂಗು ಸೇತುವೆ ಬಳಕೆಗೆ ತಾತ್ಕಾಲಿಕ ನಿರ್ಬಂಧ
Update: 2023-01-07 20:06 IST
ಉಡುಪಿ: ತೋನ್ಸೆ ಮಂಡಲ ಪಂಚಾಯತ್ ಕಾಲದಲ್ಲಿ ತಿಮ್ಮಣ್ಣ ಕುದ್ರು ನಾಗರಿಕರ ಸಂಪರ್ಕಕ್ಕಾಗಿ ನಿರ್ಮಿಸಲಾಗಿರುವ ಕೆಮ್ಮಣ್ಣು ತೂಗು ಸೇತುವೆಯು ಪ್ರವಾಸಿ ಸ್ಥಳವಾಗಿ ಬಳಕೆಯಾಗುತ್ತಿದ್ದು, ಈ ತೂಗು ಸೇತುವೆ ಸದ್ಯ ಅಪಾಯಕಾರಿ ಸ್ಥಿತಿಯಲ್ಲಿರುವುದರಿಂದ ಅದರ ಬಳಕೆಯನ್ನು ತೋನ್ಸೆ ಗ್ರಾಮ ಪಂಚಾಯತ್ ತಾತ್ಕಾಲಿಕವಾಗಿ ನಿರ್ಬಂಧಿಸಿದೆ.
ತೂಗುಸೇತುವೆಯ ಅಪಾಯದ ಬಗ್ಗೆ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಹಲವು ಬಾರಿ ಸೂಚನೆಗಳನ್ನು ನೀಡಿದ್ದರೂ ಸಹ ಅದನ್ನು ಉಲ್ಲಂಘಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಸೇತುವೆಯ ಪುನರ್ ನಿರ್ಮಾಣ ಆಗುವವರೆಗೆ ಸೇತುವೆ ಮೇಲೆ ಓಡಾಟಕ್ಕೆ ನಿರ್ಬಂಧಿಸಿ, ತಾತ್ಕಾಲಿಕವಾಗಿ ಮುಚ್ಚಲು ಕ್ರಮ ವಹಿಸಲಾಗಿದೆ ಎಂದು ತೋನ್ಸೆ ಗ್ರಾಮ ಪಂಚಾಯತ್‌ನ ಪ್ರಕಟಣೆ ತಿಳಿಸಿದೆ.