ದುರಾಸೆಯಿಂದ ಅನ್ಯಾಯ ನಡೆಯುತ್ತಿದೆ: ನ್ಯಾ.ಸಂತೋಷ್ ಹೆಗ್ಡೆ
ಮಂಗಳೂರು: 'ಐ ಲವ್ ಕುಡ್ಲ' ಅನಾವರಣ
ಮಂಗಳೂರು, ಜ.8: ಸಮಸ್ಯೆ ಮೈಮೇಲೆ ಎಳೆದುಕೊಂಡು ಅದಕ್ಕೆ ಪರಿಹಾರ ಕಂಡು ಹುಡುಕುವುದಕ್ಕಿಂತ ಸಮಸ್ಯೆ ಕಂಡು ಬಾರದಂತೆ ಎಚ್ಚರವಹಿಸಬೇಕಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯ ಪಟ್ಟರು.
ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜು ಆವರಣದಲ್ಲಿ ರವಿವಾರ 'ಸ್ವಚ್ಛ ಮಂಗಳೂರು ಫೌಂಡೇಶನ್' ನ 'ಐ ಲವ್ ಕುಡ್ಲ' ಎಂಬ ಕಲಾಸೂಚಕದ ಕಲಾಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು.
ದೇಶದ ಮುಂದಿನ ಭವಿಷ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಅವರು ಆ ನಿಟ್ಟಿನಲ್ಲಿ ಗಮನಹರಿಸಬೇಕು ಎಂದ ಅವರು, ತಾಜ್ಯ ಎಂದರೆ ನಾವು ಬಳಸಿ ಉಳಿಸಿದ ವಸ್ತು. ನಾವು ಹುಟ್ಟು ಹಾಕಿರುವಂತದ್ದು. ದುರಾಸೆಯಿಂದ ಸಮಸ್ಯೆ ಉಂಟಾಗಿದೆ. ಎಲ್ಲ ಸಮಸ್ಯೆಗಳಿಗೂ ನಾವು ಕಾರಣವಾಗಿದ್ದೇವೆ ಎಂದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳೆಗಿಸಿ ಉದ್ಘಾಟಿಸಿ ಮಾತನಾಡಿದ ಶ್ರೀ ರಾಮಕೃಷ್ಣ ಮಠದ ಸ್ವಾಮಿ ರಘುರಾಮಾನಂದಜಿ, ಭಾರತದಲ್ಲಿ ತತ್ವಗಳು ಎತ್ತರದ ಸ್ಥಾನದಲ್ಲಿದೆ. ಆಧ್ಯಾತ್ಮ ಇದರ ಬುನಾದಿಯಾಗಿದೆ. ಆದರೆ ಅದರ ಅನುಷ್ಠಾನದಲ್ಲಿ ಹಿಂದುಳಿದಿದ್ದೇವೆ. ನಾವು ಪ್ರತಿಯೊಂದು ಕಾರ್ಯಗಳಲ್ಲೂ ಶಿಸ್ತನ್ನು ಅಳವಡಿಸಿಕೊಂಡು ನಿಸ್ವಾರ್ಥ ಮನಸ್ಸಿನಿಂದ ಮುಂದುವರಿದಾಗ ಯಶಸ್ಸು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಮಾತನಾಡಿ, ನಾವು ಸ್ವಚ್ಛ ಮನಸ್ಸಿನೊಂದಿಗೆ ವಿದ್ಯಾವಂತರಾದರೆ ಮಾತ್ರ ಸಾಲದು ಪ್ರಜ್ಞಾವಂತರಾಗಬೇಕು. ನಮ್ಮಮಂಗಳೂರು ಸ್ಚಚ್ಛ ಮಂಗಳೂರು ಆಗಬೇಕು. ಈ ಕಲ್ಪ ನೆಯೊಂದಿಗೆ ಸ್ಚಚ್ಛ ಮನಸ್ಸುಗಳನ್ನು ಜೋಡಿಸಬೇಕಾಗಿದೆ ಎಂದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ಮಂಗಳೂರು ಮಹಾನಗರ ಮಾಲಿಕೆಯ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ವಚ್ಛ ಮಂಗಳೂರು ಫೌಂಡೇಶನ್ ನ ಸಂಯೋಜಕ ಉಮಾನಾಥ ಕೋಟೆಕ್ಕಾರು ಉಪಸ್ಥಿತರಿದ್ದರು.
ಸುಂದರ ಕಲಾಕೃತಿಯನ್ನು ರಚಿಸಿದ ಆದಿತತ್ವ ಆರ್ಟ್ಸ್ ನ ವಿಕ್ರಮ್ ಶೆಟ್ಟಿಯವರನ್ನು ಇದೇವೇಳೆ ಗೌರವಿಸಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಅಭಿಷೇಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಂಜನ್ ಬಿ. ವಂದಿಸಿದರು.