×
Ad

ಮುಡಿಪು: ಮಾದಕ ವಸ್ತು ಎಂಡಿಎಂಎ ಹೊಂದಿದ್ದ ಆರೋಪಿಯ ಸೆರೆ

Update: 2023-01-08 17:20 IST

ಮಂಗಳೂರು: ಮಾದಕ ವಸ್ತು ಎಂಡಿಎಂನ್ನು ಕೇರಳ-ಕರ್ನಾಟಕದ ಗಡಿಭಾಗದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮುಡಿಪು ಸಮೀಪದ ಕೈರಂಗಳ ಗ್ರಾಮದ ನವಾಝ್ ಯಾನೆ ನವ್ವಾ ಯಾನೆ  ಮುಡಿಪು ನವಾಝ್ (35) ಬಂಧಿತ ಆರೋಪಿಯಾಗಿದ್ದಾನೆ.

ಈತನಿಂದ 15 ಗ್ರಾಂ ತೂಕದ 75,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, 2 ಮೊಬೈಲ್ ಫೋನ್, ಡಿಜಿಟಲ್ ತೂಕಮಾಪನ, 3200 ರೂ. ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 1,13,700 ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಯು ದೇರಳಕಟ್ಟೆ, ತಲಪಾಡಿ, ಉಳ್ಳಾಲ, ಹಾಗೂ ಮಂಗಳೂರು ನಗರ ಪರಿಸರದಲ್ಲಿ ಇವುಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಎಂಡಿಎಂಎ ನಿಷೇಧಿತ ಮಾದಕ ವಸ್ತುವನ್ನು ರವಿವಾರ ಕೇರಳದ ಗಡಿಭಾಗ ಹಾಗೂ ಮುಡಿಪು ಪರಿಸರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮುಡಿಪು ಪಂಚಾಯತ್ ಮೈದಾನ ಪರಿಸರದಲ್ಲಿ ಬಂಧಿಸಿದ್ದಾರೆ.

ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಜಾಲದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ನವಾಝ್ ಯಾನೆ ನವ್ವಾ  ಯಾನೆ ಮುಡಿಪು ನವಾಝ್ ವಿರುದ್ಧ ಈ ಹಿಂದೆ ಕೊಣಾಜೆ ಠಾಣೆಯಲ್ಲಿ ಹಲ್ಲೆ, ಕೊಲೆಯತ್ನ, ದರೋಡೆಗೆ ಸಂಬಂಧಪಟ್ಟಂತೆ 8 ಪ್ರಕರಣಗಳು, ಮುಲ್ಕಿ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ, ಸುರತ್ಕಲ್ ಠಾಣೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಯತ್ನ ನಡೆಸಿದ ಪ್ರಕರಣ ಸಹಿತ 11 ಪ್ರಕರಣಗಳು ದಾಖಲಾಗಿರುತ್ತದೆ.

Similar News