ಕಸದ ಬುಟ್ಟಿಯ ಪಾಲಾಗುತ್ತಿರುವ ಕಸಾಪ ಸಮ್ಮೇಳನಗಳ ನಿರ್ಣಯಗಳು

Update: 2023-01-09 04:42 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಕನ್ನಡ ಸಾಹಿತ್ಯ ಪರಿಷತ್ ಪ್ರತೀ ವರ್ಷ ಹಮ್ಮಿಕೊಳ್ಳುವ ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳನ್ನು ಗೊಬ್ಬರವಾಗಿ ಬಳಸಿಕೊಳ್ಳುವ ಅವಕಾಶವಿದ್ದಿದ್ದರೆ ಇಂದು ಕರ್ನಾಟಕದ ರೈತರು ವರ್ಷ ವಿಡೀ ಉತ್ತು ಬಿತ್ತುವಷ್ಟು ಗೊಬ್ಬರ ಸಿಕ್ಕಿ ಬಿಡುತ್ತಿತ್ತು. ಈ ಸಾಹಿತ್ಯ ಸಮ್ಮೇಳನಗಳಲ್ಲಿ ತೆಗೆದುಕೊಂಡ ನಿರ್ಣಯಗಳೆಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ಗೋದಾಮಿನಲ್ಲಿ ಧೂಳು ತಿನ್ನುತ್ತಾ ಬಿದ್ದುಕೊಂಡಿವೆ. ಅವುಗಳಲ್ಲಿ ಕೆಲವು ನಿರ್ಣಯಗಳನ್ನಾದರೂ ಸರಕಾರ ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆಯೇ ಎಂದು ನೋಡಿದರೆ ನಮಗೆ ನಿರಾಶೆಯಾಗುತ್ತದೆ. ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲೂ ಮುಖ್ಯಮಂತ್ರಿಯೂ ಸೇರಿದಂತೆ ಸರಕಾರದ ಭಾಗವಾಗಿರುವ ಪ್ರಮುಖ ನಾಯಕರು ಭಾಗವಹಿಸುತ್ತಾರೆ. ವೇದಿಕೆಯಲ್ಲಿ ನಿಂತು ಸಮ್ಮೇಳನಾಧ್ಯಕ್ಷರ ಭಾಷಣವನ್ನು ಹಾಡಿ ಹೊಗಳುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಕನ್ನಡವೊಂದೇ ಭಾಷೆ' ಎನ್ನುವಂತೆ ರಾಜಕಾರಣಿಗಳು ಭರವಸೆಗಳನ್ನು ನೀಡುತ್ತಾರೆ. ಸಮ್ಮೇಳನದ ಕೊನೆಗೆ ನಿರ್ಣಯ ತೆಗೆದುಕೊಳ್ಳುವಾಗಲೂ ಭರ್ಜರಿ ಚಪ್ಪಾಳೆಗಳ ಸುರಿಮಳೆಯಾಗುತ್ತವೆ. ಆದರೆ ಕಟ್ಟ ಕಡೆಗೆ ಅವು ಕನ್ನಡ ಸಾಹಿತ್ಯ ಪರಿಷತ್ತಿನ ಕಸದ ಬುಟ್ಟಿಯ ಪಾಲಾಗುತ್ತವೆ. ಇದು ಒಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ. ತೆಗೆದುಕೊಂಡ ಈ ನಿರ್ಣಯಗಳ ಕುರಿತಂತೆ ಕನಿಷ್ಠ ಚರ್ಚೆಯೂ ಆ ಬಳಿಕ ನಡೆಯುವುದಿಲ್ಲ. ಈ ನಿರ್ಣಯಗಳ ಸಂಖ್ಯೆ ಯಾವ ಮಟ್ಟ ತಲುಪಿದೆಯೆಂದರೆ, ಇಂದು ಹೊಸ ನಿರ್ಣಯವನ್ನು ತೆಗೆದುಕೊಳ್ಳಲು ಕಸಾಪದ ಬಳಿ ವಿಷಯವೇ ಇಲ್ಲದಂತಾಗಿದೆ. ಈ ಕಾರಣಕ್ಕೇ, ಹಿಂದೊಂದು ಸಾಹಿತ್ಯ ಸಮ್ಮೇಳನದಲ್ಲಿ ಯಾವುದೇ ಹೊಸ ನಿರ್ಣಯ ತೆಗೆದುಕೊಳ್ಳದೆ, ಹಿಂದಿನ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ಒತ್ತಾಯಿಸುವುದೇ ಸಮ್ಮೇಳನ ತೆಗೆದುಕೊಳ್ಳುವ ಹೊಸ ನಿರ್ಣಯ ಎಂಬ ನಿರ್ಧಾರಕ್ಕೆ ಬರಲಾಗಿತ್ತು.

86ನೇ ಅಖಿಲ ಭಾರತ ಸಮ್ಮೇಳನ ಹಾವೇರಿಯಲ್ಲಿ ಸಮಾಪ್ತಿಗೊಂಡಿದ್ದು, ಸಮ್ಮೇಳನದ ಕೊನೆಯಲ್ಲಿ ಈ ಬಾರಿ ಒಟ್ಟು ಆರು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಈ ಹಿಂದೆ ಹಲವು ಬಾರಿ ತೆಗೆದುಕೊಂಡ ನಿರ್ಣಯಗಳು ಈ ಬಾರಿ ಮರುಕಳಿಸಿವೆ. 'ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನೂ ಪಾಲುದಾರನನ್ನಾಗಿಸಬೇಕು' ಎನ್ನುವುದನ್ನು ಹೊರತು ಪಡಿಸಿದರೆ ಬಹುತೇಕ ನಿರ್ಣಯಗಳು ಹಳೆಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳೇ ಆಗಿವೆ. ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ ಕೂಡಲೇ ಸುಗ್ರೀವಾಜ್ಞೆ ಮೂಲಕ ಕಾನೂನಿನ ರೂಪ ಪಡೆಯಬೇಕು ಎನ್ನುವುದು ಈ ಬಾರಿ ತೆಗೆದುಕೊಂಡ ಪ್ರಮುಖ ನಿರ್ಣಯ. ಶಿಕ್ಷಣ, ನ್ಯಾಯಾಂಗ, ಆಡಳಿತದಲ್ಲಿ ಕನ್ನಡ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು ಎಂದೂ ಒತ್ತಾಯಿಸಲಾಗಿದೆ. ಸಮ್ಮೇಳನಾಧ್ಯಕ್ಷರು ಕೂಡ ತಮ್ಮ ಭಾಷಣದಲ್ಲಿ ಕನ್ನಡವನ್ನು ದೈನಂದಿನ ಬದುಕಿನಲ್ಲಿ ಅಳವಡಿಸುವುದಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಹಂತಹಂತವಾಗಿ ವಿವರಿಸಿದ್ದಾರೆ. ಆದರೆ ಇಂದು ಕರ್ನಾಟಕದಲ್ಲಿ ಕನ್ನಡ ಕೇವಲ ಇಂಗ್ಲಿಷ್‌ನಿಂದ ಮಾತ್ರವಲ್ಲ, ಹಿಂದಿಯಿಂದಲೂ ಆತಂಕವನ್ನು ಎದುರಿಸುತ್ತಿದೆ. ಬ್ಯಾಂಕ್ ವಿಲೀನಗಳು ಹೇಗೆ ಜನಸಾಮಾನ್ಯರ ಮೇಲೆ ಹಿಂದಿ ಭಾಷಿಗರನ್ನು ಹೇರಿದೆ ಎನ್ನುವುದನ್ನು ಸಮ್ಮೇಳನಾಧ್ಯಕ್ಷರೇ ತಮ್ಮ ಭಾಷಣದಲ್ಲಿ ವಿವರಿಸಿದ್ದಾರೆ.

ಕರ್ನಾಟಕದ ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸುವುದು ಇರಲಿ, ಅಲ್ಲಿ ಹಿಂದಿ ಹೇರಿಕೆಯಾಗದಂತೆ ತಡೆಯುವುದರ ಬಗ್ಗೆ ಗಟ್ಟಿ ಧ್ವನಿಯಲ್ಲಿ ಸಾಹಿತ್ಯ ಸಮ್ಮೇಳನ ನಿರ್ಣಯ ತೆಗೆದುಕೊಳ್ಳುವುದು ತುರ್ತು ಅಗತ್ಯವಾಗಿತ್ತು. ಆದರೆ, ಹಿಂದಿ ಹೇರಿಕೆಯನ್ನು ನಿರ್ಣಯದಲ್ಲಿ ಕಾಟಾಚಾರಕ್ಕಷ್ಟೇ ಪ್ರಸ್ತಾಪಿಸಲಾಗಿದೆ. ಕನ್ನಡದ ಮೇಲಿನ ಹಿಂದಿ ಅಥವಾ ಇನ್ನಾವುದೇ ಭಾಷೆಯ ಆಕ್ರಮಣ ಹಾಗೂ ಹೇರಿಕೆಯನ್ನು ಸಮ್ಮೇಳನ ಖಂಡಿಸುತ್ತದೆ ಎಂದಷ್ಟೇ ಹೇಳಿ ಮುಗಿಸಲಾಗಿದೆ. ಸದ್ಯಕ್ಕೆ ಕನ್ನಡದ ಮುಂದಿರುವ ಅತಿ ದೊಡ್ಡ ಸವಾಲು ಹಿಂದಿ ಮತ್ತು ಸಂಸ್ಕೃತವನ್ನು ಹಿಂಬಾಗಿಲಿನ ಮೂಲಕ ತುರುಕಿಸಲು ಯತ್ನಿಸುತ್ತಿರುವುದು. ಈ ಯತ್ನಕ್ಕೆ ಬೆಂಬಲವಾಗಿ ರಾಜ್ಯ ಸರಕಾರವೇ ನಿಂತಿರುವುದು ವಿಷಾದನೀಯ. ಒಂದೆಡೆ ಹಂಪಿ ವಿಶ್ವವಿದ್ಯಾನಿಲಯ ಸೂಕ್ತ ಅನುದಾನಗಳ ಕೊರತೆಯಿಂದ ನರಳುತ್ತಾ ದಿನದಿಂದ ದಿನಕ್ಕೆ ಹಿನ್ನಡೆ ಅನುಭವಿಸುತ್ತಿದ್ದರೆ ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ತೆರೆಯಲು ಭರ್ಜರಿ ಸಿದ್ಧತೆ ನಡೆಯುತ್ತಿದೆ. ಸರಕಾರದಿಂದ ಭೂಮಿಯೂ ಸೇರಿದಂತೆ ಅನುದಾನಗಳ ಮಹಾ ಪೂರವೇ ಹರಿಯುತ್ತಿವೆ.ಮಗದೊಂದೆಡೆ ಕೇಂದ್ರ ಸರಕಾರದ ಹಿಂದಿ ಹೇರಿಕೆಗೆ ರಾಜ್ಯ ಸರಕಾರ ವೌನ ಸಮ್ಮತಿಯನ್ನು ವ್ಯಕ್ತಪಡಿಸಿದೆ. ಕೇಂದ್ರದ ವರಿಷ್ಠರನ್ನು ಸಂತೃಪ್ತಿ ಪಡಿಸಲು ಕನ್ನಡದ ಹಿತಾಸಕ್ತಿಗಳನ್ನು ರಾಜ್ಯ ಸರಕಾರ ಬಲಿಕೊಡುತ್ತಿದೆ ಎನ್ನುವ ಆರೋಪಗಳ ಬಗ್ಗೆ ಸಾಹಿತ್ಯ ಸಮ್ಮೇಳನ ವೌನ ತಾಳಿದೆ. ಬರೇ ಖಂಡನೆಯಿಂದ ಹಿಂದಿ ಅಥವಾ ಸಂಸ್ಕೃತವನ್ನು ತಡೆಯಲು ಸಾಧ್ಯವಿಲ್ಲ. ಎಕನ್ನಡ ಸಾಹಿತ್ಯ ಸಮ್ಮೇಳನದೊಳಗಿರುವ ಜನರೇ ಹಿಂದಿ ಮತ್ತು ಸಂಸ್ಕೃತದ ಕುರಿತಂತೆ ಮೃದು ನಿಲುವನ್ನು ತಳೆದಿರುವುದರಿಂದ ಹಿಂದಿ, ಸಂಸ್ಕೃತ ಹೇರಿಕೆಯನ್ನು ತಡೆಯುವುದು ಸುಲಭವೂ ಅಲ್ಲ. ಈ ಹಿಂದೆ ತುಮಕೂರು ಸಾಹಿತ್ಯ ಸಮ್ಮೇಳನದಲ್ಲಿ ಯು. ಆರ್. ಅನಂತ ಮೂರ್ತಿಯವರು 'ಇಂಗ್ಲಿಷ್ - ಕನ್ನಡ ಜೊತೆ ಜೊತೆಯಾಗಿ' ಎಂಬ ಮಾತುಗಳನ್ನು ಜಾಗತಿಕ ದೃಷ್ಟಿಯನ್ನಿಟ್ಟುಕೊಂಡು ಆಡಿದ್ದರು. ಆದರೆ ಹಿಂದಿ ಮತ್ತು ಸಂಸ್ಕೃತವನ್ನು ಕನ್ನಡದ ಜನರ ಮೇಲೆ ಹೇರುವುದು ಪರೋಕ್ಷವಾಗಿ ಅಳಿದುಳಿದ ಕನ್ನಡ ಭಾಷೆಯನ್ನು ಸರ್ವನಾಶ ಮಾಡಿದಂತೆ. ಹಿಂದಿ ಮತ್ತು ಸಂಸ್ಕೃತ ಹೇರಿಕೆಯ ವಿರುದ್ಧ ಸಮ್ಮೇಳನ ದೊಡ್ಡ ಧ್ವನಿಯಲ್ಲಿ ಪ್ರತಿಭಟಿಸದೇ ಇರುವುದು ಸಮ್ಮೇಳನದಲ್ಲಿ ಕನ್ನಡಕ್ಕಾಗಿರುವ ಅತಿ ದೊಡ್ಡ ಸೋಲಾಗಿದೆ.

   ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿ ಮತ್ತೆ ಮಹಾಜನ ವರದಿಯನ್ನು ಪ್ರಸ್ತಾಪಿಸಲಾಗಿದೆ. ಆದರೆ ಮಹಾಜನ ವರದಿಗಾಗಿ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಬೆಳಗಾವಿಯ ಗಡಿಭಾಗದಲ್ಲಿ ಬಹುಸಂಖ್ಯಾತರು ಕನ್ನಡ ಭಾಷೆಯನ್ನು ಆಡುತ್ತಿದ್ದರು. ಇಂದು, ಕನ್ನಡ ಮಾತನಾಡುವವರ ಸಂಖ್ಯೆಯೇ ಭಾರೀ ಇಳಿಮುಖವಾಗಿದೆ. ಇದರ ಲಾಭವನ್ನು ಬೆಳಗಾವಿ ಗಡಿಯಲ್ಲಿರುವ ಮರಾಠಿಗರು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಬೆಳಗಾವಿಯಲ್ಲಿ ಅಳಿಯುತ್ತಿರುವ ಕನ್ನಡವನ್ನು ಉಳಿಸಿ ಬೆಳೆಸದೇ ಇದ್ದರೆ ಬೆಳಗಾವಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ವಾಸ್ತವವನ್ನು ಸಾಹಿತಿಗಳು, ಲೇಖಕರು ಮೊದಲು ಅರ್ಥ ಮಾಡಿಕೊಂಡು ಅದನ್ನು ಸರಕಾರಕ್ಕೆ ವಿವರಿಸುವ ಕೆಲಸವನ್ನು ಮಾಡಬೇಕು. ಇದೇ ಸಂದರ್ಭದಲ್ಲಿ ಕಸಾಪ ಸಮ್ಮೇಳನಕ್ಕೆ ಪ್ರತಿರೋಧವಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಜನಸಾಹಿತ್ಯ ಸಮ್ಮೇಳನದಲ್ಲಿ ಒಂದು ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

''ಸಾಹಿತ್ಯಸಮ್ಮೇಳನಗಳು ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಎಲ್ಲ ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯಗಳು ಒಳಗೊಳ್ಳಬೇಕು. ಅದರಲ್ಲಿಯು ದಲಿತರು, ದಮನಿತರು, ಆದಿವಾಸಿಗಳು, ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಒಳಗೊಳ್ಳುವಿಕೆ ಇರಲೇಬೇಕು'' ಎಂದು ಜನಸಾಹಿತ್ಯ ಸಮ್ಮೇಳನ ಒತ್ತಾಯಿಸಿದೆ. ಎಲ್ಲ ಸಮುದಾಯಗಳ ಒಳಗೊಳ್ಳುವಿಕೆಯೇ ಕನ್ನಡದ ಹಿರಿಮೆ. ಅದನ್ನೇ ಕಸಾಪಕ್ಕೆ ನಿರ್ಣಯದ ಮೂಲಕ ಒತ್ತಾಯಿಸುವ ಸ್ಥಿತಿ ಬಂದಿದೆಯೆಂದ ಮೇಲೆ, ಅಂತಹ ಕಸಾಪ ಕನ್ನಡದ ಕಾಳಜಿಯಿಂದ ತೆಗೆದುಕೊಂಡ ನಿರ್ಣಯವನ್ನು ಎಷ್ಟರಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳಬಹುದು? ಎನ್ನುವುದು ನಮ್ಮ ಮುಂದಿರುವ ಉತ್ತರವಿಲ್ಲದ ಪ್ರಶ್ನೆ. ಕನ್ನಡದ ವಿಷಯದಲ್ಲಿ ಸರಕಾರವನ್ನು ಎಚ್ಚರಿಸುವ ಮೊದಲು ಕನ್ನಡ ಸಾಹಿತ್ಯ ಪರಿಷತ್ ತನ್ನನ್ನು ತಾನೇ ಎಚ್ಚರಿಸಿಕೊಳ್ಳುವ ಕೆಲಸವನ್ನು ಮೊದಲು ಮಾಡಬೇಕಾಗಿದೆ.

Similar News