ಬರುತ್ತಿರುವುದು, ಚುನಾವಣೆಯೋ? ಇನ್ನೊಂದು ಸುತ್ತಿನ ಕೋತಿಯಾಟವೋ?

Update: 2023-01-09 07:04 GMT

ಚುನಾವಣೆಯ ಕಾಲ ಹತ್ತಿರ ಬಂದರೆ ಸಾಕು. ಮುಸ್ಲಿಮ್ ಸಮಾಜವು ಹಠಾತ್ತನೆ ಎಲ್ಲ ರಾಜಕೀಯ ಪಕ್ಷಗಳ ಅತ್ಯಂತ ಆಪ್ತ ಸಮುದಾಯವಾಗಿ ಬಿಡುತ್ತದೆ. ಎಲ್ಲ ರಾಜಕೀಯ ಪಕ್ಷಗಳ ನಾಯಕರು ತಮ್ಮ ಪಕ್ಷದ ಮುಸ್ಲಿಮ್ ನಾಯಕರನ್ನು ಕರೆದು ಅವರ ಯೋಗ - ಕ್ಷೇಮ ವಿಚಾರಿಸುತ್ತಾರೆ. ಸಮುದಾಯದ ಸ್ಥಿತಿಗತಿಗಳ ಕುರಿತು ಕೇಳುತ್ತಾರೆ. ‘‘ನೋಡಿ, ಮತ್ತೆ ಚುನಾವಣೆಯ ಕಾಲ ಬರುತ್ತಿದೆ. ಇಷ್ಟು ವರ್ಷ ನಾವು ನಿಮ್ಮನ್ನು ಪೋಷಿಸಿದ್ದೇವೆ. ಇದೀಗ ನಿಮ್ಮ ಪರೀಕ್ಷೆಯ ಸಮಯ ಬಂದಿದೆ. ನಿಮ್ಮ ಸಮುದಾಯದ ಎಲ್ಲ ಓಟುಗಳನ್ನು ತಂದು ನಮ್ಮ ಜೋಳಿಗೆಗೆ ಹಾಕುವುದು ನಿಮ್ಮ ಕರ್ತವ್ಯ. ಪಕ್ಷಕ್ಕೆ ನಿಮ್ಮ ನಿಷ್ಠೆ ತೋರ್ಪಡಿಸುವುದಕ್ಕೆ ಇದೊಂದು ಸುವರ್ಣಾವಕಾಶ. 

ಈ ಕೆಲಸ ಮಾಡುವ ಮೂಲಕ ನೀವು ಪಕ್ಷದ ಋಣ ತೀರಿಸಬೇಕು’’ ಎನ್ನುತ್ತಾರೆ. ಆಗ ಮುಸ್ಲಿಮ್ ನಾಯಕರು ‘‘ಸಾರ್, ನೀವು ನಿಶ್ಚಿಂತರಾಗಿರಿ ನಾವು ಈ ಜವಾಬ್ದಾರಿಯನ್ನು ತುಂಬಾ ಶ್ರದ್ಧೆಯಿಂದ ನಿಭಾಯಿಸುತ್ತೇವೆ. ಎಲ್ಲ ಮುಸ್ಲಿಮ್ ಓಟುಗಳು ನಮ್ಮ ಪಕ್ಷಕ್ಕೆ ಬಂದು ಬೀಳುವಂತೆ ಎಲ್ಲ ಏರ್ಪಾಡು ಮಾಡುತ್ತೇವೆ’’ ಎಂದು ತಮ್ಮ ಪಕ್ಷದ ನಾಯಕರಿಗೆ ಭರವಸೆ ನೀಡುತ್ತಾರೆ. ಮುಂದಿನ ಹಂತದಲ್ಲಿ, ಮುಸ್ಲಿಮ್ ರಾಜಕೀಯ ನಾಯಕರು ಸಮುದಾಯದ ಪ್ರಮುಖ ವ್ಯಕ್ತಿಗಳನ್ನು ಸಂಪರ್ಕಿಸಲು ಆರಂಭಿಸುತ್ತಾರೆ. 

ವಿವಿಧ ಮುಸ್ಲಿಮ್ ಸಂಘ ಸಂಸ್ಥೆಗಳು, ಅಂಜುಮನ್ ಗಳ ಮುಖ್ಯಸ್ಥರು ಮತ್ತು ವಿಶೇಷವಾಗಿ ಧಾರ್ಮಿಕ ವಿದ್ವಾಂಸರ ಜೊತೆ ಮಾತುಕತೆ ನಡೆಸತೊಡಗುತ್ತಾರೆ. ಅವರು ಒಂದೋ ಈ ಮಹನೀಯ ರನ್ನು ತಮ್ಮ ಕಚೇರಿಗಳಿಗೆ ಆಹ್ವಾನಿಸುತ್ತಾರೆ ಅಥವಾ ತಾವೇ ಸ್ವತಃ ಅವರ ಬಳಿ ಹಾಜರಾಗುತ್ತಾರೆ. ಅಥವಾ, ಯಾವುದಾದರೂ ಸಭಾಂಗಣ ಅಥವಾ ದುಬಾರಿ ಹೋಟೆಲ್‌ನಲ್ಲಿ ಸಮುದಾಯದ ಪ್ರಮುಖರನ್ನು ಸೇರಿಸಿ ಸಮುದಾಯವನ್ನು ಹೇಗೆ ರಾಜಕೀಯವಾಗಿ ಸಬಲಗೊಳಿಸ ಬಹುದು ಎಂಬ ಕುರಿತು ಉದ್ದುದ್ದ ಭಾಷಣ ನೀಡುತ್ತಾರೆ. ಈ ರಾಜಕಾರಣಿಗಳು ತಮಗೆ ನೀಡುತ್ತಿರುವ ಮಹತ್ವವನ್ನು ಕಂಡು ಸಮುದಾಯದ ಮುಖಂಡರು ಮತ್ತು ವಿದ್ವಾಂಸರೆಲ್ಲಾ ತುಂಬಾ ಸಂತುಷ್ಟರಾಗುತ್ತಾರೆ.

ಮೂರನೇ ಹಂತದಲ್ಲಿ ಕೆಲವು ಘೋಷಣೆಗಳು ಸಮುದಾಯ ದೊಳಗೆ ಜನಪ್ರಿಯವಾಗಲಾರಂಭಿಸುತ್ತವೆ. ಉದಾ: ಸಮುದಾಯವು ರಾಜಕೀಯವಾಗಿ ಒಂದಾಗಬೇಕು. ಒಗ್ಗಟ್ಟಿನಿಂದ ಮತ ಚಲಾಯಿಸಬೇಕು. ಓಟುಗಳ ವಿಭಜನೆಯಾಗಬಾರದು. ಸಮುದಾಯದ ಎಲ್ಲ ಮತದಾರರೂ ಒಂದೇ ಪಕ್ಷದ ಪರವಾಗಿ ಮತ ನೀಡಬೇಕು. ಏನಾದರೂ ಮಾಡಿ ಒಂದು ನಿರ್ದಿಷ್ಟ ಪಕ್ಷವನ್ನು ಸೋಲಿಸುವುದು ನಮ್ಮ ಆದ್ಯತೆಯಾಗಬೇಕು. ಇದಕ್ಕಾಗಿ ನಾವು ಒಂದು ನಿರ್ದಿಷ್ಟ ಪಕ್ಷದ ಪರವಾಗಿರುವುದು ಅನಿವಾರ್ಯವಾಗಿದೆ. ಇದರಲ್ಲೇ ನಮ್ಮ ಯಶಸ್ಸು ಅಡಗಿದೆ.... ಇತ್ಯಾದಿ. ಈ ಸಂದರ್ಭದಲ್ಲಿ, ಅಲ್ಲಲ್ಲಿ ಸಂದಾಯಕ್ಕೆ ಕೆಲವು ಆದೇಶ ಮತ್ತು ಕರೆಗಳನ್ನು ನೀಡಲಾಗುತ್ತದೆ. ಉದಾ:

ಎಲ್ಲಾ ಮುಸ್ಲಿಮ್ ಮತದಾರರು ಚುನಾವಣೆಗೆ ಮುನ್ನ ಕಡ್ಡಾಯ ವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳ ಬೇಕು. ಮತದಾರರ ಗುರುತಿನ ಚೀಟಿಯನ್ನು ಪಡೆಯಬೇಕು. ಮನೆ ಮನೆಗೆ ಹೋಗಿ, ಮುಸ್ಲಿಮ್ ಪುರುಷರು ಮತ್ತು ಮಹಿಳೆಯರ ಪೈಕಿ ಮತದಾರರಾಗಲು ಅರ್ಹರಾಗಿರುವ ಯಾರೂ ಮತದಾರರ ಪಟ್ಟಿಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕು. ಮತದಾನದ ದಿನ ಎಲ್ಲ ಅರ್ಹ ಮತದಾರರು ಮತಗಟ್ಟೆಗೆ ಹೋಗಿ ಕಡ್ಡಾಯವಾಗಿ ಮತ ಚಲಾಯಿಸಬೇಕು. ಇದು ಸಮುದಾಯದ ಹಿತದೃಷ್ಟಿಯಿಂದ ಅತ್ಯವಶ್ಯಕ, ಮಾತ್ರವಲ್ಲ, ಅನಿವಾರ್ಯ. 

ಯಾವುದೇ ರಾಜಕೀಯ ಪಕ್ಷವು ಈ ಕಾರ್ಯಾಚರಣೆಯನ್ನು ತನ್ನ ಸ್ವಂತ ಬಲದಿಂದ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಮುದಾಯದ ಎಲ್ಲಾ ವಿದ್ವಾಂಸರು, ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಮತ್ತು ಎಲ್ಲಾ ಮುಸ್ಲಿಮ್ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದೆಲ್ಲ ಹೇಳಿ ಇಡೀ ಸಮುದಾಯವನ್ನು ಸಜ್ಜುಗೊಳಿಸುವ ಶ್ರಮ ನಡೆಯುತ್ತದೆ. ಈ ಪ್ರಕ್ರಿಯೆಯು ಚುನಾವಣೆಯ ದಿನ ಮತದಾನ ಮುಗಿಯುವ ತನಕವೂ ಮುಂದುವರಿಯುತ್ತದೆ.

ಈ ಅಭಿಯಾನದ ವೇಳೆ, ಚುನಾವಣೆಯಲ್ಲಿ ಯಾವ ಪಕ್ಷವನ್ನು ಸೋಲಿಸಬೇಕೆಂಬ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇರುವುದಿಲ್ಲ. ಅಷ್ಟೇ ಅಲ್ಲ, ಮುಸ್ಲಿಮರು ಒಂದು ನಿರ್ದಿಷ್ಟ ಪಕ್ಷವನ್ನು ಸೋಲಿಸಲು ಸನ್ನದ್ಧರಾಗಿದ್ದಾರೆ ಮತ್ತು ಹಾಗೆ ಸೋಲಿಸುವುದಕ್ಕಾಗಿಯೇ ಮುಸ್ಲಿಮರು ಮತ ಚಲಾಯಿಸಲಿದ್ದಾರೆ ಎಂಬ ಸುದ್ದಿ ಎಲ್ಲೆಲ್ಲೂ ಹರಡಿ ಬಿಡುತ್ತದೆ. ತಮ್ಮ ಪಕ್ಷವೇ ನಿಜವಾದ ಸೆಕ್ಯುಲರ್ ಪಕ್ಷ ಎಂದು ಹೇಳಿಕೊಳ್ಳುವ ಹಲವು ಪಕ್ಷಗಳಿರುವಾಗ ಯಾವ ನಿರ್ದಿಷ್ಟ ಸೆಕ್ಯುಲರ್ ಪಕ್ಷವನ್ನು ಬೆಂಬಲಿಸಬೇಕು ಎಂಬುದರ ಬಗ್ಗೆ ಮಾತ್ರ ಕೆಲವರು ವಿವಾದವೆಬ್ಬಿಸುತ್ತಾರೆ. ಕೆಲವು ಸೆಕ್ಯುಲರ್ ಪಕ್ಷಗಳ ನಾಯಕರು ಪರಸ್ಪರ ದೂಷಣೆಯಲ್ಲಿ ನಿರತರಾಗುತ್ತಾರೆ. ಎಲ್ಲೂ ಸಲ್ಲದ ಕೆಲವು ಹತಾಶ ಪುಢಾರಿಗಳು ಮತ್ತು ಆಟಕ್ಕೂ ಇಲ್ಲದ, ಲೆಕ್ಕಕ್ಕೂ ಇಲ್ಲದ ಕೆಲವು ಮರಿಪಕ್ಷಗಳ ಜನರು ಅಲ್ಲಲ್ಲಿ ಏನಾದರೂ ಗೊಣಗಾಡುತ್ತಾ ಅವರಿವರನ್ನು ಬಯ್ಯುತ್ತಾ ನಮ್ಮಂತಹ ಮಹಾ ವಿಮೋಚಕರು ಸಮುದಾಯದಲ್ಲಿರುವಾಗ ಯಾರೂ ನಮ್ಮನ್ನು ಕಣ್ಣೆತ್ತಿ ಕೂಡಾ ನೋಡುತ್ತಿಲ್ಲವೇಕೆ? ಎಂದು ಅಚ್ಚರಿ ಪಡುತ್ತಾ ಅಲೆಯುತ್ತಿರುತ್ತಾರೆ. ಅದನ್ನೆಲ್ಲ ಜನರು ನಿರ್ಲಕ್ಷಿಸಿ ಬಿಡುತ್ತಾರೆ.

ಕೊನೆಗೆ ಚುನಾವಣೆಯ ದಿನ ಬಂದೇ ಬಿಡುತ್ತದೆ. ಒಂದೆರಡು ದಿನದ ಬಳಿಕ ಫಲಿತಾಂಶಗಳೂ ಬರುತ್ತವೆ - ಅದರೊಂದಿಗೆ ರಾಜಕೀಯದಲ್ಲಿ ಮುಸ್ಲಿಮ್ ಸಮುದಾಯದ ಪಾತ್ರವು ಸಂಪೂರ್ಣ ಶೂನ್ಯವಾಗಿ ಬಿಡುತ್ತದೆ. ಸಮುದಾಯದ ಮತಗಳು ತಮ್ಮ ಪಕ್ಷಕ್ಕೆ ಬರುವಂತೆ ಶ್ರಮಿಸಿದ ರಾಜಕೀಯ ನಾಯಕರು ತಮ್ಮ ಸಾಧನೆಗಳನ್ನು ತಮ್ಮ ನೇತಾರರಿಗೆ ವಿವರಿಸುತ್ತಾರೆ. ಅವರ ಪಕ್ಷವು ವಿವಿಧ ರೀತಿಯ ಪ್ರಶಂಸೆ, ಪುರಸ್ಕಾರ, ಹೊಸ ಹುದ್ದೆ, ಭಡ್ತಿ, ಸೀಟು ಇತ್ಯಾದಿಗಳ ಮೂಲಕ ಅವರನ್ನು ಸಂತೃಪ್ತ ಪಡಿಸುತ್ತದೆ. ಸಮುದಾಯ ಮಾತ್ರ ಮೊದಲಿನಂತೆ ಮತ್ತೆ ಅನಾಥವಾಗಿ ಬಿಡುತ್ತದೆ. 

ಆದರೆ ನಿರ್ದಿಷ್ಟ ಪಕ್ಷವನ್ನು ಸೋಲಿಸಲು ಅವರು ನೀಡಿದ್ದ ಬಹಿರಂಗ ಕರೆ ಮತ್ತು ಆ ವಿಷಯದಲ್ಲಿ ಅವರು ತೋರಿದ್ದ ಅಮಿತೋತ್ಸಾಹವು ಸಮುದಾಯಕ್ಕೆ ಮುಳುವಾಗಿ ಬಿಡುತ್ತದೆ. ಆ ಪ್ರಮಾದಕ್ಕಾಗಿ ಸಮುದಾಯವು ಭಾರೀ ಬೆಲೆ ತೆರಬೇಕಾಗುತ್ತದೆ. ಆ ಪಕ್ಷಕ್ಕೆ ಸಮುದಾಯವು ವೈರಿಯಾಗಿ ಕಾಣಿಸುತ್ತದೆ. ಸಮುದಾಯಕ್ಕೆ ಹೊಸ ಮಿತ್ರರು ಯಾರೂ ಸಿಕ್ಕಿರುವುದಿಲ್ಲ. ಆದರೆ ಕೆಲವರು ಹೊಸದಾಗಿ ಶತ್ರುಗಳಾಗಿ ಬಿಡುತ್ತಾರೆ ಮತ್ತು ಹಳೆಯ ಶತ್ರುವಿನ ಶತ್ರುತ್ವ ನೂರಾರು ಪಾಲು ಹೆಚ್ಚಿರುತ್ತದೆ.

ಇಲ್ಲಿ ವಿವರಿಸಲಾದ ಸನ್ನಿವೇಶವನ್ನು ಭಾರತದ ಮುಸ್ಲಿಮರು ಮಾತ್ರವಲ್ಲ ದಲಿತ ಹಾಗೂ ಹಿಂದುಳಿದ ಜಾತಿಗಳ ಮತದಾರರು ಕೂಡಾ ಒಂದಲ್ಲ, ಹಲವಾರು ಬಾರಿ ಎದುರಿಸಿದ್ದಾರೆ ಮತ್ತು ಅನುಭವಿಸಿದ್ದಾರೆ. ಹಲವು ದಶಕಗಳಿಂದ ಇದೇ ನಾಟಕದ ಪುನರಾವರ್ತನೆ ನಡೆಯುತ್ತಿದೆ. ಈ ರೀತಿ ಮತ್ತೆ ಮತ್ತೆ ಮೂರ್ಖರಾಗುವುದನ್ನು ಇಷ್ಟಪಡುವ ಮಾತ್ರವಲ್ಲ ಸಂಭ್ರಮಿಸುವ ಹಲವರು ಸಮಾಜದಲ್ಲಿದ್ದಾರೆ. ಅವರನ್ನು ಅವರ ಪಾಡಿಗೆ ಬಿಡೋಣ. ಮೂರ್ಖರಾಗಲು ಇಷ್ಟಪಡದವರ ಪಾಲಿಗೆ ಮಾತ್ರ ಇದು ಭಾರೀ ಕಳವಳದ ಮತ್ತು ಗಂಭೀರ ಚಿಂತನೆಯ ವಿಷಯವಾಗಿದೆ. 

ಇಂದು ಮುಸ್ಲಿಮ್ ಸಮುದಾಯದೊಳಗೆ ವಿಭಿನ್ನ ರಾಜಕೀಯ ಪಕ್ಷಗಳ ಪ್ರಾತಿನಿಧ್ಯ ಧಾರಾಳವಾಗಿದೆ ಮತ್ತು ಸಾಕಷ್ಟು ಪ್ರಬಲವೂ ಆಗಿದೆ. ಪ್ರತಿಯೊಂದು ಪಕ್ಷದ ನಿಷ್ಠಾವಂತ ಯೋಧರು ಸಮುದಾಯ ದಲ್ಲಿ ಸಕ್ರಿಯರಾಗಿದ್ದಾರೆ. ಅವರೆಲ್ಲಾ ತಮ್ಮ ಪಕ್ಷವನ್ನು ಸಮುದಾಯ ದೊಳಗೆ ಜನಪ್ರಿಯಗೊಳಿಸುವ ಮತ್ತು ಸಮುದಾಯದೊಳಗೆ ವ್ಯವಸ್ಥಿತ ವಾಗಿ ಪಕ್ಷದ ಪರವಾಗಿ ಪ್ರಚಾರ ಮಾಡುವ ಕಾರ್ಯದಲ್ಲಿ ಸದಾ ನಿರತ ರಾಗಿರುತ್ತಾರೆ. ಎಲ್ಲ ರಾಜಕೀಯ ಪಕ್ಷಗಳಿಗೆ ಮತ್ತು ರಾಜಕೀಯ ಮುಖಂಡರಿಗೆ ತಮ್ಮ ಉದ್ದೇಶ ಮತ್ತು ಹಿತಾಸಕ್ತಿಗಳ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇರುತ್ತದೆ. ಆದರೆ ಮುಸ್ಲಿಮ್ ಸಮುದಾಯದ ಸದಸ್ಯರಿಗೆ ಒಟ್ಟು ಸಮಾಜ ಮತ್ತು ತಮ್ಮ ಸಮುದಾಯದ ಹಿತಾಸಕ್ತಿ ಯಾವುದರಲ್ಲಿದೆ ಎಂಬ ಕುರಿತು ಏನಾದರೂ ಸ್ಪಷ್ಟತೆ ಇದೆಯೇ? ಸಮುದಾಯದ ಶೇ.100 ಮಂದಿ ಕೂಡಾ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ, ಗುರುತು ಚೀಟಿ ಪಡೆದು ಚುನಾವಣೆಯ ದಿನ ಮತ ಚಲಾಯಿಸಿದರೆ ರಾಜಕಾರಣಿಗಳಿಗೆ ಲಾಭ ಇರುವುದು ನಿಜ. ಆದರೆ ಅದರಿಂದ ಸಮುದಾಯಕ್ಕೆ ಏನು ಲಾಭವಿದೆ? ಲಾಭ ಸಿಗಲು ಸಮುದಾಯವು ಬೇರೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು? ಈ ಕುರಿತು ಯಾರಾದರೂ ಚರ್ಚಿಸಿದ್ದಾರೆಯೇ?

ನಿಜವಾಗಿ ಮುಸಲ್ಮಾನರು ಯಾವುದೇ ರಾಜಕೀಯ ಪಕ್ಷವನ್ನು ಕಣ್ಣು ಮುಚ್ಚಿ ಬೆಂಬಲಿಸುವ ಮುನ್ನ ಆ ಪಕ್ಷವು ಸಮಾಜ ಮತ್ತು ಸಮುದಾ ಯದ ಹಿತಕ್ಕಾಗಿ ಏನು ಮಾಡಿದೆ? ಏನು ಮಾಡಲು ಬಯಸುತ್ತಿದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಯಾವುದೇ ಜಾಗೃತ ಸಮುದಾಯವು ಚುನಾವಣೆಯ ಕಾಲವನ್ನು ತನ್ನ ಹಾಗೂ ಸಮಗ್ರ ಸಮಾಜದ ಹಿತಾಸಕ್ತಿಗಳ ರಕ್ಷಣೆಗಾಗಿ ಇರುವ ಕಾಲವೆಂದು ಪರಿಗಣಿಸುತ್ತದೆ. ಅವರು ಈ ಸಂದರ್ಭವನ್ನು ರಾಜಕೀಯ ಪಕ್ಷಗಳನ್ನು ಖುಷಿಪಡಿಸುವುದಕ್ಕಾಗಲಿ, ಖಂಡಿಸುವುದಕ್ಕಾಗಲಿ ಬಳಸುವ ಬದಲು ರಾಜಕೀಯ ಪಕ್ಷಗಳನ್ನು ಪ್ರಶ್ನಿಸುವುದಕ್ಕಾಗಿ ಬಳಸುತ್ತಾರೆ. ಅವರು ವಿವಿಧ ಪಕ್ಷಗಳ ಬಳಿ ಅವರ ಕೊಡುಗೆಗಳು, ಸಾಧನೆಗಳು ಮತ್ತು ವೈಫಲ್ಯಗಳ ಲೆಕ್ಕ ಕೇಳುವ ಅವಕಾಶವಾಗಿ ಈ ಸಮಯವನ್ನು ಉಪಯೋಗಿಸಿಕೊಳ್ಳುತ್ತಾರೆ. ಚುನಾವಣೆ ರಾಷ್ಟ್ರ ಮಟ್ಟದ್ದಿರಲಿ, ರಾಜ್ಯ ಮಟ್ಟದ್ದಿರಲಿ ಅಥವಾ ಸ್ಥಳೀಯ ಮಟ್ಟದ್ದಿರಲಿ, ಅದು, ಎಲ್ಲ ಪಕ್ಷಗಳು ಮತ್ತು ಪುಢಾರಿಗಳು ಜನರ ಮಾತುಗಳಿಗೆ ಕಿವಿಕೊಡುವ ಸಮಯವಾಗಿರುತ್ತದೆ. ನಾಟಕ ಕ್ಕೋಸ್ಕರ ವಾದರೂ ಆ ಸಂದರ್ಭದಲ್ಲಿ ಅವರು ಜನತೆಯ ಬಳಿ ಹೋಗುತ್ತಾರೆ, ಅವರನ್ನು ಮಾತನಾಡಿಸುತ್ತಾರೆ. ಚುನಾವಣೆ ಮುಗಿಯಿತೆಂದರೆ ಮತ್ತೆ ಇಂತಹ ಅವಕಾಶ ಜನರ ಭಾಗ್ಯಕ್ಕೆ ಬರುವುದು ಮುಂದಿನ ಚುನಾವಣೆ ಯ ವೇಳೆ ಮಾತ್ರ. ಆ ವರೆಗೆ ವೌನ, ನಿರಾಶೆಯೇ ಅವರ ಆಶ್ರಯ. 

ಆದ್ದರಿಂದ, ಚುನಾವಣೆಯ ತಯಾರಿಯ ಸಂದರ್ಭವನ್ನೇ ಮತದಾರರು ವಿವಿಧ ಪಕ್ಷಗಳು ಮತ್ತು ಪುಢಾರಿಗಳ ಜೊತೆ ಮಾತುಕತೆ ಮತ್ತು ಸಂವಾದಕ್ಕಾಗಿ ಬಳಸಿಕೊಳ್ಳಬೇಕು. ಲಭ್ಯ ಅವಕಾಶವನ್ನು ಬಳಸಿ, ಮತದಾರರು ತಮ್ಮ ಮತ್ತು ಸಮಾಜದ ಹಿತಾಸಕ್ತಿಯ ವಿಷಯಗಳನ್ನು ರಾಜಕೀಯ ನಾಯಕರ ಮುಂದೆ ಚರ್ಚೆಗೆತ್ತಿಕೊಳ್ಳಬೇಕು. ನೀವು ಒಟ್ಟು ಸಮಾಜದ ಹಿತಕ್ಕಾಗಿ ಏನೆಲ್ಲಾ ಮಾಡಿದ್ದೀರಿ? ನಿರ್ದಿಷ್ಟವಾಗಿ ನಮ್ಮ ಊರಿಗಾಗಿ, ನಮ್ಮ ಸಮುದಾಯಕ್ಕಾಗಿ ಏನು ಮಾಡಿದ್ದೀರಿ? ದಲಿತರು ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರ ಹಿತಕ್ಕಾಗಿ ಏನೆಲ್ಲಾ ಮಾಡಿದ್ದೀರಿ? ಮತ್ತೆ ಮುಂದೆ ಏನೆಲ್ಲಾ ಮಾಡಲು ಬಯಸುತ್ತೀರಿ? ಸಮುದಾಯದ ವಿರುದ್ಧ ಅಪಪ್ರಚಾರಗಳು ನಡೆಯತ್ತಿದ್ದಾಗ, ಸಮುದಾಯದ ನಿರಪರಾಧಿಗಳ ಮೇಲೆ ಸಾಮೂಹಿಕ ಹಲ್ಲೆಗಳು ನಡೆಯುತ್ತಿದ್ದಾಗ, ನಿರಪರಾಧಿಗಳ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಅವರನ್ನು ಜೈಲಿಗೆ ತಳ್ಳಿದಾಗ, ಅಮಾಯಕರ ಹತ್ಯೆ ನಡೆಯುತ್ತಿದ್ದಾಗ, ಆಳುವವರು ಪಕ್ಷಪಾತಿ ನೀತಿಯನ್ನು ಅನುಸರಿಸುತ್ತಿದ್ದಾಗ, ಕೋಮುವಾದಿ ಗುಂಪುಗಳು ಸಮಾಜಕ್ಕೆ ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿದ್ದಾಗ..... ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ನಿಮ್ಮ ನಿಲುವು ಏನಾಗಿತ್ತು? ಅಲ್ಪಸಂಖ್ಯಾತರಿಗೆ ನೀವು ಸರಕಾರದಿಂದ ಏನೆಲ್ಲಾ ಸವಲತ್ತುಗಳನ್ನು ಕೊಡಿಸಿದ್ದೀರಿ? ನೀವು ಮತ್ತು ನಿಮ್ಮ ಪಕ್ಷದವರು ನಮ್ಮ ಸಮಾಜದ ಪರವಾಗಿ ವಿಧಾನ ಸಭೆಯಲ್ಲಿ, ವಿಧಾನ ಪರಿಷತ್ ನಲ್ಲಿ, ಲೋಕ ಸಭೆಯಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ, ಮಾತ್ರವಲ್ಲ ಸ್ವತಃ ನಿಮ್ಮ ಪಕ್ಷದ ವೇದಿಕೆಗಳಲ್ಲಿ ಎಷು ಬಾರಿ ಧ್ವನಿ ಎತ್ತಿದ್ದೀರಿ?..... ಹೀಗೆ ಬಿಡಿಬಿಡಿಯಾಗಿ ಒಂದೊಂದೇ ವಿಚಾರವನ್ನು ಕೇಳಿ ಅರಿತುಕೊಳ್ಳಬೇಕು. ಪುಢಾರಿಗಳು ತುಂಬಾ ಜಾಣರಾಗಿರುತ್ತಾರೆ. ಅವರು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ಎಷ್ಟೇ ಶ್ರಮಪಟ್ಟರೂ, ಅದಕ್ಕಾಗಿ ಎಷ್ಟೆಲ್ಲಾ ಆಟಗಳನ್ನು ಆಡಿದರೂ ನೀವು ನಿಮ್ಮ ಆಸಕ್ತಿಯ ವಿಷಯವನ್ನು ಕೈಬಿಡಬಾರದು. ಯಾವುದಾದರೂ ಪಕ್ಷದವರು ಬಂದು ಇನ್ನೊಂದು ಪಕ್ಷದವರನ್ನು ಬಯ್ಯಲು ಆರಂಭಿಸಿದರೆ, ಸಂಭ್ರಮಿಸುವ ಬದಲು, ಸಾರ್, ದಯವಿಟ್ಟು ನಮ್ಮ ಮುಂದೆ ಯಾವುದೇ ಪಕ್ಷವನ್ನು ಬಯ್ಯಬೇಡಿ. ನಿಮ್ಮ ಸಾಧನೆ ಮತ್ತು ನಿಮ್ಮ ಯೋಜನೆಗಳ ಬಗ್ಗೆ ಮಾತ್ರ ಮಾತನಾಡಿ ಎಂದು ನಯವಾಗಿ ವಿನಂತಿಸಿ. 

ರಾಜಕೀಯ ಪ್ರಬುದ್ಧತೆ ಮತ್ತು ದೂರ ದೃಷ್ಟಿ ಇರುವ ಸಮುದಾಯ ಗಳು ಈ ಕೆಲಸವನ್ನು ತುಂಬಾ ಸಂಘಟಿತವಾಗಿ ಹಾಗೂ ಪರಿಣಾಮ ಕಾರಿಯಾಗಿ ಮಾಡುತ್ತವೆ. ಅವರೆಲ್ಲಾ ಚುನಾವಣೆಗೆ ಬಹಳ ಮುಂಚಿತ ವಾಗಿಯೇ, ಎಲ್ಲ ಪಕ್ಷ ಮತ್ತು ಸರಕಾರಗಳ ಸಾಧಕ ಬಾಧಕಗಳ ಕುರಿತು ಹೋಮ್ ವರ್ಕ್ ಮಾಡಿಕೊಂಡಿರುತ್ತಾರೆ. ಮುಸ್ಲಿಮ್ ಸಮಾಜವು, ರಾಜಕೀಯ ರಂಗದಲ್ಲಿ ಈವರೆಗೆ ಮೆರೆಯುತ್ತಾ ಬಂದಿರುವ ತನ್ನ ಮುಗ್ಧ ನಿಲುವಿಗೆ ವಿದಾಯ ಹೇಳಬೇಕಾದ ಸಮಯ ಇದೀಗ ಬಂದಿದೆ. ತಮ್ಮ ಈ ಹಿಂದಿನ ತಪ್ಪುಗಳಿಗಾಗಿ ಈಗಾಗಲೇ ಅವರು ಭಾರೀ ಬೆಲೆ ತೆತ್ತಿದ್ದಾರೆ. ಇನ್ನಾದರೂ ತಿದ್ದಿಕೊಳ್ಳುವ ಮನಸ್ಸಿದ್ದರೆ, ಮುಂದಿನ ಚುನಾವಣೆಗೆ ಬಹಳ ಮುಂಚಿತವಾಗಿಯೇ ಆ ಕೆಲಸವನ್ನು ಅವರು ಮಾಡಿಕೊಳ್ಳಬೇಕಾಗಿದೆ. ಚುನಾವಣಾ ಪೂರ್ವದ ಅನುಕೂಲಕರ ವಾತಾವರಣವನ್ನು ಸದುಪಯೋಗ ಪಡಿಸಿಕೊಂಡು ಸಮಾಜಕ್ಕೆ ಹೆಚ್ಚಿನ ಲಾಭ ತಂದುಕೊಡುವಂತಹ, ಯಾವುದೇ ಮುಲಾಜಿಲ್ಲದೆ ಸ್ಪಷ್ಟ ನಿಲುವನ್ನು ತಾಳಬೇಕಾಗಿದೆ.

ಈ ನಿಟ್ಟಿನಲ್ಲಿ ಎಲ್ಲ ಸಮುದಾಯಗಳ ಮತದಾರರು ಸೇರಿ ಮಾಡಬಹುದಾದ ಒಂದು ಸರಳ ಕೆಲಸವೇನೆಂದರೆ, ಜನಹಿತ ಸಾಧನೆಗೆ ಆಗಬೇಕಾದ ಕೆಲಸಗಳನ್ನು ಪಟ್ಟಿ ಮಾಡಿ ಪಕ್ಷಾತೀತವಾದ ಒಂದು ‘ಜನತಾ ಪ್ರಣಾಳಿಕೆ’ಯನ್ನು ತಯಾರಿಸುವುದು. ರಾಷ್ಟ್ರೀಯ, ರಾಜ್ಯ, ಪ್ರಾದೇಶಿಕ ಮತ್ತು ಸ್ಥಳೀಯ ಹೀಗೆ ಮೂರು ಮಟ್ಟಗಳಲ್ಲಿ, ಇಂತಹ ಪ್ರತ್ಯೇಕ ಪ್ರಣಾಳಿಕೆಗಳನ್ನು ರಚಿಸಬಹುದು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಬಡವರು, ಕಾರ್ಮಿಕರು, ರೈತರು ಮುಂತಾದ ವಿವಿಧ ಜನವರ್ಗಗಳ ನ್ಯಾಯ ಬದ್ಧ ಬೇಡಿಕೆ ಗಳನ್ನು ಆ ಪ್ರಣಾಳಿಕೆಯಲ್ಲಿ ಸೇರಿಸಬಹುದು. ಈ ಪ್ರಣಾಳಿಕೆಯ ಆಧಾರ ದಲ್ಲೇ ಎಲ್ಲ ಪಕ್ಷಗಳು ಮತ್ತು ಎಲ್ಲ ಅಭ್ಯರ್ಥಿಗಳ ಜೊತೆ ಮುಕ್ತ ಸಂವಾದ ನಡೆಸಬಹುದು. ಪ್ರಣಾಳಿಕೆಯಲ್ಲಿರುವ ವಿಷಯಗಳ ಕುರಿತು ಆ ಪಕ್ಷಗಳು ಮತ್ತವರ ನಾಯಕರು ಈ ಹಿಂದೆ ಏನು ಮಾಡಿದ್ದಾರೆ? ಇಂದು ಏನನ್ನು ಮಾಡುತ್ತಿದ್ದಾರೆ? ಮತ್ತು ಮುಂದಿನ ದಿನಗಳಲ್ಲಿ ಏನೆಲ್ಲಾ ಮಾಡಲಿದ್ದಾರೆ? ಎಂಬ ಕುರಿತು ಸವಿಸ್ತಾರವಾಗಿ ಚರ್ಚಿಸಬಹುದು. 

ಇಂತಹ ಒಂದು ಸಮಗ್ರ ಪ್ರಣಾಳಿಕೆ ರಚಿತವಾದರೆ, ಅದು ಜನರಲ್ಲಿ, ಅವರ ನೈಜ ಆದ್ಯತೆಗಳು ಏನಿರಬೇಕು ಮತ್ತು ಅವರ ಹಿತಾಸಕ್ತಿ ಯಾವುದರಲ್ಲಿದೆ ಎಂಬ ಕುರಿತು ತಿಳುವಳಿಕೆ ಹಾಗೂ ಜಾಗೃತಿ ಬೆಳೆಸುವ ಒಂದು ಪರಿಣಾಮಕಾರಿ ಸಾಧನವಾಗುವ ಸಾಧ್ಯತೆ ಇದೆ. ಹಾಗೆಯೇ, ಇದು, ಉಚಿತವಾಗಿ ಓಟು ಕೊಡುವುದನ್ನೇ ರೂಢಿಯಾಗಿಸಿ ಕೊಂಡವರಿಗೆ, ವಿವಿಧ ರಾಜಕೀಯ ಪಕ್ಷಗಳೊಂದಿಗೆ ಚೌಕಾಶಿ ನಡೆಸುವುದಕ್ಕೆ ಮತ್ತು ಸಮಾಜಕ್ಕೆ ಬೇಕಾದುದನ್ನು ನೀಡುವಂತೆ ಅವರನ್ನು ನಿರ್ಬಂಧಿಸುವುದಕ್ಕೆ ಒಂದು ಅಸ್ತ್ರವಾಗಬಹುದು. ಈ ತನಕ ಕುರಿಗಳಂತೆ ಪುಢಾರಿಗಳ ಹಿಂದೆ ನಡೆದು ಅವರ ಬಯಕೆಯಂತೆ ಕಣ್ಣು ಮುಚ್ಚಿ ಮತಚಲಾಯಿಸುತ್ತ ಬಂದವರ ಪಾಲಿಗೆ ಮುಂದಿನ ದಿನಗಳಲ್ಲಾದರೂ ಪ್ರಸ್ತುತ ಪ್ರಣಾಳಿಕೆ ಮತ್ತು ರಣನೀತಿಯು ಸಬಲೀಕರಣದ ಸಾಧನವಾಗಬಹುದು. ಕುರುಡು ಮತದಾನದ ಹಳೆಯ ಸಂಪ್ರದಾಯದಿಂದ ಕೆಲವು ನಾಯಕರಿಗೆ ಮತ್ತು ಪಕ್ಷಗಳಿಗೆ ಲಾಭವಾಗಿರುವುದು ನಿಜ. ಆದರೆ ಸಮಾಜ ಮತ್ತು ಸಮುದಾಯಕ್ಕೆ ಇದರಿಂದ ಆಗಿರುವುದು ಕೇವಲ ನಷ್ಟ ಮಾತ್ರ. ಆದ್ದರಿಂದ ಹೊಸ ಪರಿಣಾಮಕಾರಿ ಕಾರ್ಯವಿಧಾನಗಳ ಅನ್ವೇಷಣೆ ಅನಿವಾರ್ಯವಾಗಿದೆ.

ಈ ಸಂದರ್ಭದಲ್ಲಿ ಕೆಲವು ವಿಷಯಗಳ ಕುರಿತು ವಿಶೇಷ ಎಚ್ಚರ ವಹಿಸಬೇಕಾಗುತ್ತದೆ. ಉದಾ: 

  • ಗುಟ್ಟಾಗಿ ನೀಡಲಾಗುವ ಅಥವಾ ಕೇವಲ ಬಾಯಿ ಮಾತಿನಲ್ಲಿ ನೀಡಲಾಗುವ ಯಾವುದೇ ಆಶ್ವಾಸನೆಯನ್ನು ಗಣನೆಗೆ ತೆಗೆದುಕೊಳ್ಳಬಾರದು. 
  • ಆಯಾ ಪಕ್ಷದ ಪ್ರಣಾಳಿಕೆಯಲ್ಲಿ ಬಹಳ ಸ್ಪಷ್ಟ ಪದಗಳಲ್ಲಿ ದಾಖಲಾಗಿರುವ ಮತ್ತು ಪಕ್ಷಗಳು ಹಾಗೂ ಅಭ್ಯರ್ಥಿಗಳು ಲಿಖಿತವಾಗಿ ಬರೆದು ಕೊಡಲು ತಯಾರಾಗಿರುವ ಆಶ್ವಾಸನೆಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು. 
  • ಯಾವುದಾದರೂ ಪಕ್ಷವನ್ನು ಸೋಲಿಸುವುದಕ್ಕಾಗಿ ಓಟು ಕೊಡುವ ವಿಚಾರವನ್ನು ಚರ್ಚಿಸಲೇಬಾರದು. ಏನಿದ್ದರೂ, ಬೇಡಿಕೆಗಳನ್ನು ಈಡೇರಿಸಬಲ್ಲವರನ್ನು ಗೆಲ್ಲಿಸುವ ವಿಧಾನಗಳ ಬಗ್ಗೆ ಮಾತ್ರ ಚರ್ಚಿಸಬೇಕು. 
  • ಯಾರಾದರೂ ಇನ್ನೊಂದು ಪಕ್ಷವನ್ನು ಖಂಡಿಸಿ ಆಡುವ ಮಾತುಗಳಿಗೆ ಕಿವಿಕೊಡಬಾರದು. ಏಕೆಂದರೆ ತಪ್ಪುಗಳು ನಡೆದಾಗ ಮಾಡುವ ಖಂಡನೆಗೆ ಸ್ವಲ್ಪ ಬೆಲೆ ಇದೆಯೇ ಹೊರತು ಚುನಾವಣೆಯ ವೇಳೆ ಮಾಡಲಾಗುವ ಖಂಡನೆಗಳಿಗೆ ಯಾವ ಬೆಲೆಯೂ ಇಲ್ಲ. 
  • ಯಾವುದೇ ಪಕ್ಷದವರು ಭವಿಷ್ಯದ ಸ್ವರ್ಗದ ಕುರಿತು ಮಾತನಾಡಿದಾಗಲೆಲ್ಲ, ಸ್ವತಃ ಅವರ ಪಕ್ಷದ ಇತಿಹಾಸದ ಬಗ್ಗೆ ಮಾತನಾಡುವಂತೆ ಅವರನ್ನು ನಿರ್ಬಂಧಿಸಬೇಕು. ಅವರು ಈ ಹಿಂದೆ ಮಾಡಿದ ಎಡವಟ್ಟುಗಳ ಬಗ್ಗೆ ತೃಪ್ತಿಕರ ಸ್ಪಷ್ಟೀಕರಣ ನೀಡುವಂತೆ ಆಗ್ರಹಿಸಬೇಕು. 
  • ಎಲ್ಲ ಚರ್ಚೆಗಳು ‘ಜನತಾ ಪ್ರಣಾಳಿಕೆ’ಯಲ್ಲೇ ಕೇಂದ್ರಿತವಾಗಿರಬೇಕು.
  • ಎಲ್ಲ ಬೇಡಿಕೆಗಳು ನಮ್ಮ ದೇಶದ ಸಂವಿಧಾನದ ಆಶಯಗಳಿಗೆ ಅನುಗುಣವಾಗಿರಬೇಕು ಮತ್ತು ಸಮಾಜದ ಸಮಷ್ಟಿ ಹಿತಕ್ಕೆ ಪೂರಕವಾಗಿರಬೇಕು. 
  • ಒಟ್ಟು ಸಮಾಜಕ್ಕೆ ನ್ಯಾಯ, ಶಾಂತಿ, ಸುಭಿಕ್ಷೆ ಮತ್ತು ಅಭಿವೃದ್ಧಿಯನ್ನು ತಂದುಕೊಡುವುದೇ ಅದರ ಪರಮ ಗುರಿಯಾಗಿರಬೇಕು.
  • ಸಮುದಾಯದಲ್ಲಿ ಸಮರ್ಥ ವ್ಯಕ್ತಿಗಳ ಕೊರತೆ ಇಲ್ಲ. ಅವರು ಮನಸ್ಸು ಮಾಡಿದರೆ, ಎಲ್ಲ ವರ್ಗಗಳ ಸಂವೇದನೆಗಳು, ಅವಶ್ಯಕತೆಗಳು ಮತ್ತು ಬೇಡಿಕೆಗಳನ್ನು ಸಂಪೂರ್ಣವಾಗಿ ಪ್ರತಿನಿಧಿಸುವ ಒಂದು ವಿಶಾಲ ‘ಜನತಾ ಪ್ರಣಾಳಿಕೆ’ ಯನ್ನು ಅವರು ಒಂದೆರಡು ದಿನದಲ್ಲೇ ಸಿದ್ಧಪಡಿಸಬಹುದು.

Similar News